HEALTH TIPS

ಆಗಿರುವುದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳಿ: ವಿದ್ಯಾರ್ಥಿಗಳಿಗೆ ನೀಟ್ ಟಾಪರ್ ಸಲಹೆ

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನಂತರ ನಡೆದ ಮರುಪರೀಕ್ಷೆ ವಿಚಾರವಾಗಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿರುವ ಹೊತ್ತಿನಲ್ಲಿ, ಟಾಪರ್‌ ಪಾನ್ಶುಲ್‌ ಬನ್ಸಲ್‌ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇಂತಹ ಸಂದರ್ಭದಲ್ಲಿಯೂ ತಾವು, ಗಮನವನ್ನು ಓದಿನತ್ತಲೇ ಸ್ಥಿರವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.


ನವದೆಹಲಿಯ ಗ್ರೇಟರ್‌ ಕೈಲಾಶ್‌ನಲ್ಲಿರುವ ಕೆ.ಆರ್‌. ಮಂಗಳಮ್‌ ವರ್ಲ್ಡ್‌ ಸ್ಕೂಲ್‌ ವಿದ್ಯಾರ್ಥಿ ಬನ್ಸಲ್‌, ನೀಟ್‌ ಪರೀಕ್ಷೆಯಲ್ಲಿ 715 ಅಂಕ ಗಳಿಸಿ, ಆಲ್‌ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

'ಎಎನ್‌ಐ' ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ಅವರು, 'ನೀಟ್‌ ಪರೀಕ್ಷೆ ರದ್ದಾಗಿದೆ ಎಂಬುದು ಗೊತ್ತಾದಾಗ ತುಂಬಾ ದುಃಖವಾಗಿತ್ತು. ನಿರಾಶೆ ಆವರಿಸಿತ್ತು. ನಂತರ, ಅಳುತ್ತಾ ಕೂರುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನನಗೆ ನಾನೇ ಹೇಳಿಕೊಂಡು, ಸಮಾಧಾನ ಮಾಡಿಕೊಂಡೆ. ನೀಟ್‌ ಪರೀಕ್ಷೆಗೂ ಮೊದಲಿನಂತೆಯೇ ವೇಳಾಪಟ್ಟಿ ರೂಪಿಸಿಕೊಂಡು ಓದಿನತ್ತ ಗಮನ ಕೇಂದ್ರೀಕರಿಸಿದೆ. ನಾನು ಇನ್ನಷ್ಟು ಉತ್ತಮ ಅಂಕ ಗಳಿಸಬಲ್ಲೆ ಎಂದು ದೇವರೇ ಮತ್ತೊಂದು ಅವಕಾಶ ನೀಡಿದ್ದಾನೆ, ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಬೇಕು ಎಂದುಕೊಂಡೆ. ಬೆಂಬಲವಾಗಿ ನಿಂತ ಕುಟುಂಬ, ಧೈರ್ಯ ತುಂಬಿತು' ಎಂದು ಹೇಳಿದ್ದಾರೆ.

ಇತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ, 'ಪರೀಕ್ಷೆಗಳನ್ನು ನಡೆಸುವುದು ನಿಮ್ಮ ಕೈಯಲ್ಲಿ ಇಲ್ಲ. ಹಾಗಾಗಿ, ಏನಾಯಿತೋ ಅದು ಒಳ್ಳೆಯದಕ್ಕೇ ಆಗಿದೆ. ಇನ್ನೂ ಉತ್ತಮವಾಗಿ ಪರೀಕ್ಷೆ ಬರೆಯುವಿರಿ; ಉತ್ತಮ ಅಂಕ ಗಳಿಸುವಿರಿ ಎಂದು ಈ ವಿಚಾರವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ' ಎಂದು ಸಲಹೆ ನೀಡಿದ್ದಾರೆ.

ನೀಟ್ ಪರೀಕ್ಷೆಯನ್ನೇ ರದ್ದು ಮಾಡುವುದು ಪರಿಹಾರ: ತಮಿಳುನಾಡು ಸಿಎಂ ವಿಜಯ್ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ರಾಹುಲ್ ಗಾಂಧಿ ಬಂಧನ ವಿರುದ್ಧ ಪ್ರತಿಭಟನೆ

'ಪರೀಕ್ಷೆ ರದ್ದಾಗಿದೆ ಎಂಬುದನ್ನು ಸಹಿಸಿಕೊಳ್ಳುವ ಸ್ಥೈರ್ಯವಿರಬೇಕು ಮತ್ತು ಯಾವುದೇ ಕಾರಣಕ್ಕೂ ಛಲ ಬಿಡಬಾರದು' ಎಂದೂ ಹೇಳಿದ್ದಾರೆ.

'ಭಿನ್ನ' ಅಭಿಪ್ರಾಯ

ಬನ್ಸಲ್‌ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವರು, ಅವರ ದೃಷ್ಟಿಕೋನವನ್ನು ಮೆಚ್ಚಿದ್ದಾರೆ. 'ವಿದ್ಯಾರ್ಥಿಗಳು ಈ ರೀತಿ ಇರಬೇಕು. ಪ್ರತಿಕೂಲ ಪರಿಸ್ಥಿತಿಯನ್ನೂ ಅವಕಾಶವಾಗಿ ಬದಲಿಸಿಕೊಳ್ಳಬೇಕು. ಇತರರನ್ನು ಮೀರಿಸಿ ನೀವು ಆಯ್ಕೆಯಾಗಬೇಕು ಎಂದರೆ, ಗೆಲ್ಲುವ ಮನೋಭಾವ ಅಗತ್ಯ' ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು, 'ವಿಜಯಿಗೂ, ಸೋತವರಿಗೂ ಇರುವ ವ್ಯತ್ಯಾಸ ಇದು. ಸೋತವರು ತಮ್ಮ ಸೋಲಿಗೆ ಮತ್ತೊಬ್ಬರನ್ನು ದೂರುತ್ತಾರೆ. ಆದರೆ, ವಿಜಯಿಗಳು ತಮ್ಮ ಪಾಲಿನ ಕೆಲಸ ಮಾಡುತ್ತಾರೆ. ಬನ್ಸಲ್‌ ಹೇಳಿರುವ ಮಾತುಗಳು, ಕಾಕ್ರೋಚ್‌ ಪಕ್ಷದ ಕಾರ್ಯಕರ್ತರು ಹಾಗೂ ಅವರ ಪೋಷಕರಿಗೆ ಚಪ್ಪಲಿ ಏಟು ಇದ್ದಂತೆ' ಎಂದಿದ್ದಾರೆ.

'ಬನ್ಸಲ್‌ ಪೋಷಕರು ತಮ್ಮ ಮಗನನ್ನು ಸರಿಯಾದ ರೀತಿಯಲ್ಲಿ ಬೆಳೆಸಿದ್ದಾರೆ. ಅವರಿಗೆ ನನ್ನ ಸಲ್ಯೂಟ್‌. ಯಾರದ್ದೋ ತಪ್ಪಿಗೆ ನಿಮ್ಮ ಜೀವನ ಹಾಗೂ ವೃತ್ತಿ ಬದುಕನ್ನು ಹಾಳು ಮಾಡಿಕೊಳ್ಳಬೇಡಿ' ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಬನ್ಸಲ್‌ ಟ್ರೋಲ್‌ಗೆ ಗುರಿಯಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. ವ್ಯಕ್ತಿಯೊಬ್ಬರು, 'ಬನ್ಸಲ್‌ ಟ್ರೋಲ್‌ ಆಗದಂತೆ ನೋಡಿಕೊಳ್ಳಲು, ಯಾರಾದರೂ ಆತನ ಪೋಷಕರಿಗೆ ತಿಳಿಸಿ. ಕೆಲವರು ತಮ್ಮ ಅಜೆಂಡಾವನ್ನು ಸಮರ್ಥಿಸಿಕೊಳ್ಳಲು ಬನ್ಸಲ್‌ ಅನ್ನು ಕೈಗೊಂಬೆಯನ್ನಾಗಿ ಮಾಡಿಕೊಳ್ಳಬಹುದು' ಎಂದು ಹೇಳಿದ್ದಾರೆ.

ಮರು ಪರೀಕ್ಷೆ; ಮತ್ತೆ ಆರೋಪ

ನೀಟ್‌ ಪರೀಕ್ಷೆ ಮೇ 3ರಂದು ನಡೆದಿತ್ತು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಕೇಳಿ ಬಂದ ನಂತರ ಮೇ 12ರಂದು ಪರೀಕ್ಷೆ ರದ್ದು ಮಾಡಲಾಗಿತ್ತು. ಈ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ.

ಜೂನ್‌ 21ರಂದು ಮರುಪರೀಕ್ಷೆ ನಡೆದಿತ್ತು. ಜುಲೈ 16ರಂದು ಮರು ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಆದರೆ, ಮರು ಪರೀಕ್ಷೆ ಬಳಿಕ ಪ್ರಕಟಿಸಿದ್ದ ಕೀ ಉತ್ತರ ಹಾಗೂ ಫಲಿತಾಂಶದ ನಂತರ ಬಂದಿರುವ ಅಂಕಗಳ ನಡುವೆ ವ್ಯತ್ಯಾಸಗಳು ಕಂಡುಬಂದಿವೆ ಎಂಬ ಆರೋಪಗಳು ಇದೀಗ ಕೇಳಿಬರುತ್ತಿವೆ. ನೀಟ್‌ ಪರೀಕ್ಷೆ ರದ್ದಾದ ನಂತರ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪರೀಕ್ಷಾ ಅಕ್ರಮವನ್ನು ಖಂಡಿಸಿ ಮತ್ತು ಇದರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ) ಜೂನ್‌ 20ರಿಂದ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಸಿಜೆಪಿ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಪರಿಸರವಾದಿ, ಶಿಕ್ಷಣ ತಜ್ಞ ಸೊನಮ್‌ ವಾಂಗ್ಚೂಕ್‌ ಅವರು ಜೂನ್‌ 28ರಿಂದ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries