ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಹಂಕಾರ ಬಿಟ್ಟು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಆಕ್ರೋಶದ ಕೂಗನ್ನು ಆಲಿಸಬೇಕು ಮತ್ತು ಅವರ ಪ್ರಮುಖ ಮೂರು ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಒತ್ತಾಯಿಸಿದ್ದಾರೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಗತ್ತಿನ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿದ್ದ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಈಗ ವ್ಯವಸ್ಥಿತವಾಗಿ ಹಾಳುಗೆಡವಲಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಸಂಸತ್ ಚಲೊ ಮೆರವಣಿಗೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ಕುರಿತ ವಿಡಿಯೊವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು.
ಪ್ರಮುಖ ಮೂರು ಬೇಡಿಕೆಗಳು...
ಶಿಕ್ಷಣ ಸಚಿವರ ರಾಜೀನಾಮೆ: ಕರ್ತವ್ಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು.
ದೌರ್ಜನ್ಯ ಎಸಗಿದವರ ವಿರುದ್ಧ ಕ್ರಮ: ವಿದ್ಯಾರ್ಥಿಗಳ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ಎಸಗಿದವರು, ಅಲ್ಲದೆ ಹಲ್ಲೆಗೆ ಕಾರಣರಾದವರನ್ನು ಹೊಣೆಗಾರರನ್ನಾಗಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಪ್ರಧಾನಿ ಮೋದಿ ಕ್ಷಮೆಯಾಚನೆ: ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಭಯೋತ್ಪಾದಕರಲ್ಲ. ಅವರು ನ್ಯಾಯಯುತ ಶಿಕ್ಷಣ ವ್ಯವಸ್ಥೆಯನ್ನು ಕೇಳುತ್ತಿದ್ದಾರೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಬಲಪ್ರಯೋಗ ಸರಿಯಲ್ಲ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ವಿದ್ಯಾರ್ಥಿಗಳ ಬೇಡಿಕೆ ಮತ್ತು ಹೋರಾಟಕ್ಕೆ ಕಾಂಗ್ರೆಸ್ ಪೂರ್ಣ ಬೆಂಬಲ ನೀಡುತ್ತದೆ ಎಂದ ಅವರು, ವಿದ್ಯಾರ್ಥಿಗಳ ಬೇಡಿಕೆ ಈಡೇರದಿದ್ದರೆ ಕೇಂದ್ರ ಸರ್ಕಾರ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

