ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಓಖಿಂ) ನೀಟ್ ಮರು ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ 11.21 ಲಕ್ಷ ಅಭ್ಯರ್ಥಿಗಳು ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಒಟ್ಟು ಅಭ್ಯರ್ಥಿಗಳ ಪೈಕಿ ಶೇಕಡಾ 58ಕ್ಕಿಂತ ಹೆಚ್ಚು ಹೆಣ್ಣುಮಕ್ಕಳು ಅರ್ಹತೆ ಪಡೆದಿದ್ದಾರೆ ಎಂಬುದು ವಿಶೇಷ ಸಂಗತಿ.
ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾದ ಒಟ್ಟು ಹೆಣ್ಣುಮಕ್ಕಳ ಪೈಕಿ ಶೇ. 56.8ರಷ್ಟು ಅರ್ಹತೆ ಪಡೆದರೆ, ಪುರುಷ ಅಭ್ಯರ್ಥಿಗಳು ಶೇ. 55.1ರಷ್ಟು ಮಾತ್ರ ಅರ್ಹತೆ ಪಡೆದಿದ್ದಾರೆ. ಈ ಅಂಕಿಅಂಶಗಳನ್ನು ಗಮನಿಸಿದರೆ, ಭಾರತದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಮಹಿಳಾ ಆಕಾಂಕ್ಷಿಗಳ ಭಾಗವಹಿಸುವಿಕೆ ಹೆಚ್ಚುತ್ತಿದೆ ಎಂಬುದು ಸ್ಪಷ್ಟವಾಗಿದೆ.
ನೀಟ್ ಪರೀಕ್ಷೆಯ ಪ್ರಮುಖ ಮುಖ್ಯಾಂಶಗಳು
ಸುಮಾರು 20 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
11.21 ಲಕ್ಷ ಅಭ್ಯರ್ಥಿಗಳು ಪದವಿಪೂರ್ವ ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.
ಭಾರತದ 551 ನಗರಗಳು ಮತ್ತು ವಿದೇಶಗಳ 14 ನಗರಗಳು ಸೇರಿ ಒಟ್ಟು 5,440 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು.
ಅಭ್ಯರ್ಥಿಗಳು 13 ವಿವಿಧ ಭಾಷೆಗಳಲ್ಲಿ ಪರೀಕ್ಷೆ ಬರೆದಿದ್ದರು.
ಉನ್ನತ ಅಂಕಗಳು ಮತ್ತು ಕಾರ್ಯಕ್ಷಮತೆಯ ಅಂಕಿಅಂಶಗಳು
ಅರ್ಹತೆ ಪಡೆದ ಅಭ್ಯರ್ಥಿಗಳಲ್ಲಿ 19 ವಿದ್ಯಾರ್ಥಿಗಳು 700ಕ್ಕಿಂತ ಹೆಚ್ಚು ಅಂಕ ಗಳಿಸಿದರೆ, 1,492 ಅಭ್ಯರ್ಥಿಗಳು 650 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 10,160 ಅಭ್ಯರ್ಥಿಗಳು ಕನಿಷ್ಠ 600 ಅಂಕಗಳನ್ನು ಗಳಿಸಿದ್ದಾರೆ.

