HEALTH TIPS

ಯುವಾಕ್ರೋಶದ ಜ್ವಾಲೆಯಿಂದ ಪಾಕ್‌ 'ಜೆನ್‌ ಝೀ'ಗಳು ಹೊರಗುಳಿದಿದ್ದೇಕೆ?

 ವದೆಹಲಿ: ದಕ್ಷಿಣ ಏಷ್ಯಾದ ನೇಪಾಳ, ಶ್ರೀಲಂಕಾ, ಬಾಂಗ್ಲಾದಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳು ಬೀದಿಗಿಳಿದು ಅಲ್ಲಿನ ಸರ್ಕಾರಗಳನ್ನು ಮಂಡಿಯೂರುವಂತೆ ಮಾಡುವ ಮೂಲಕ ರಾಜಕೀಯ ಪಥವನ್ನೇ ಬದಲಿಸಿದರು. 

ಇತ್ತೀಚೆಗೆ ಭಾರತದಲ್ಲೂ 'ಕಾಕ್ರೋಚ್‌ ಜನತಾ ಪಾರ್ಟಿ' (ಸಿಜೆಪಿ) ನೇತೃತ್ವದಲ್ಲಿ ನಡೆದ 'ಜೆನ್‌ ಝೀ' (Gen Z) ಯುವಕರ ಬೃಹತ್ ಪ್ರತಿಭಟನೆ ಫಲವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು.

ದೇಶದ ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖ ಸುಧಾರಣೆಗಳಿಗೂ ಭರವಸೆ ಸಿಕ್ಕಿತು. ಇದರೊಂದಿಗೆ, ವಿದ್ಯಾರ್ಥಿ ಹೋರಾಟದ ಮೂಲಕ ರಾಜಕೀಯ ಚಿತ್ರಣವನ್ನೇ ಬದಲಿಸಿದ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಯಿತು.

ಸಿಜೆಪಿ ಪ್ರತಿಭಟನೆ

ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಭಾರತದಲ್ಲಿ ಯುವಪಡೆ ಭಾರಿ ರಾಜಕೀಯ ಬದಲಾವಣೆಗಳಿಗೆ ಕಾರಣವಾಗಿದ್ದರೂ, ಪಾಕಿಸ್ತಾನ ಮಾತ್ರ ಈ ಟ್ರೆಂಡ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದೆ. 2022 ರಿಂದ 2025ರ ಅವಧಿಯಲ್ಲಿ ಯುವಜನರ ಆಕ್ರೋಶಕ್ಕೆ ಸರ್ಕಾರಗಳು ಪತನಗೊಂಡಿವೆ. ಆದರೆ ಪಾಕಿಸ್ತಾನದಲ್ಲಿ ಇಂತಹ ವಾತಾವರಣ ಏಕೆ ನಿರ್ಮಾಣವಾಗಿಲ್ಲ ಎಂಬ ಕುತೂಹಲಕಾರಿ ಪ್ರಶ್ನೆ ಎದುರಾಗಿದೆ.

ಪಾಕಿಸ್ತಾನದಲ್ಲಿ ಯುವಜನತೆ ಪ್ರತಿಭಟನೆಗೆ ಇಳಿಯಬೇಕಾದ ಎಲ್ಲ ಪರಿಸ್ಥಿತಿಗಳೂ ಇವೆ. ಅಲ್ಲಿನ ಅರ್ಥವ್ಯವಸ್ಥೆ ತೀವ್ರ ಕುಸಿದಿದ್ದು, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ನೀಡುವ ಸಾಲದ ಮೇಲೆಯೇ ಅವಲಂಭಿತವಾಗಿದೆ. ದಕ್ಷಿಣ ಏಷ್ಯಾದಲ್ಲೇ ಅತ್ಯಧಿಕ ನಿರುದ್ಯೋಗ ಪ್ರಮಾಣ ಹೊಂದಿರುವ ದೇಶಗಳಲ್ಲಿ ಪಾಕಿಸ್ತಾನವೂ ಒಂದು. ಮತ್ತು ಅಲ್ಲಿನ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಮೇಲೆ ಸೇನೆ ತನ್ನ ಉಕ್ಕಿನ ಮುಷ್ಟಿಯನ್ನು ಬಿಗಿಗೊಳಿಸಿದೆ. ಹೋರಾಟಗಳಿಗೆ ಕಾರಣವಾಗುವ ಭ್ರಷ್ಟಾಚಾರ, ದಮನಕಾರಿ ನೀತಿ, ನಿರುದ್ಯೋಗ, ಪ್ರಾದೇಶಿಕ ಹೋರಾಟ, ರಾಜಕೀಯ ಭಿನ್ನತೆ ಮತ್ತು ಹತಾಶೆ ಪಾಕಿಸ್ತಾನದಲ್ಲೂ ಇದೆ. ಹಾಗೆಂದ ಮಾತ್ರಕ್ಕೆ ಪಾಕಿಸ್ತಾನದ ಯುವಜನರು ರಾಜಕೀಯವಾಗಿ ನಿಷ್ಕ್ರಿಯರಾಗಿದ್ದಾರೆ ಎಂದರ್ಥವಲ್ಲ.

ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಬಲವಾದ ವಿದ್ಯಾರ್ಥಿ ರಾಜಕಾರಣದ ಪರಂಪರೆ ಇಲ್ಲ. ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ವಿದ್ಯಾರ್ಥಿ ಮತ್ತು ಯುವ ಘಟಕಗಳನ್ನು ಹೊಂದಿದ್ದು, ಇವು ಇತ್ತೀಚಿನ ಹೋರಾಟಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೀವೆ ಎಂದು ವಿದೇಶಾಂಗ ನೀತಿ ವಿಶ್ಲೇಷಕ ಮೈಕಲ್ ಕುಗೆಲ್ಮನ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ 1980ರ ದಶಕದಲ್ಲಿದ್ದ ಜನರಲ್ ಜಿಯಾ-ಉಲ್-ಹಕ್ ಅವರ ಸೇನಾ ಆಡಳಿತ ವಿದ್ಯಾರ್ಥಿ ಸಂಘಟನೆಗಳನ್ನು ನಿಷೇಧಿಸಿತ್ತು. ಆ ನಿಷೇಧವನ್ನು ಇಲ್ಲಿಯವರೆಗೂ ಹಿಂಪಡೆದಿಲ್ಲ. ಪಾಕಿಸ್ತಾನದಲ್ಲಿ ಯುವಜನರ ಸಂಖ್ಯೆ ಹೆಚ್ಚಿದ್ದರೂ, ಆ ನಿಷೇಧದ ಪರಿಣಾಮ ಇಂದಿಗೂ ವಿದ್ಯಾರ್ಥಿಗಳ ಪ್ರತಿಭಟನೆಗಳು ನಡೆಯುತ್ತಿಲ್ಲ ಎಂದು ಮೈಕಲ್ ಕುಗೆಲ್ಮನ್ ಹೇಳಿದ್ದಾರೆ.

ಈ ನಿಷೇಧಕ್ಕೂ ಮುನ್ನ ಪಾಕಿಸ್ತಾನದಲ್ಲಿ ವಿದ್ಯಾರ್ಥಿ ರಾಜಕಾರಣ ಸಕ್ರಿಯವಾಗಿತ್ತು. 1968-69ರಲ್ಲಿ ಅಧ್ಯಕ್ಷ ಅಯೂಬ್ ಖಾನ್ ರಾಜೀನಾಮೆಗೆ ಕಾರಣವಾದ ಬೃಹತ್ ಜನಾಂದೋಲನ ಮುಂಚೂಣಿಯಲ್ಲಿ ವಿದ್ಯಾರ್ಥಿ ಸಮೂಹವಿತ್ತು. ಆದರೆ ಜಿಯಾ ಆಡಳಿತದ ನಿಷೇಧವು ವಿದ್ಯಾರ್ಥಿಗಳ ರಾಜಕೀಯ ಬೆನ್ನೆಲುಬನ್ನೇ ಮುರಿಯಿತು. 2018 ಮತ್ತು 2022ರ ನಡುವೆ 'ಜೆನ್‌ ಝೀ'ಗಳು ವಿದ್ಯಾರ್ಥಿ ಐಕ್ಯತಾ ಪಾದಯಾತ್ರೆ ನಡೆಸಿ ವಿದ್ಯಾರ್ಥಿ ಸಂಘಟನೆಗಳ ಪುನರುಜ್ಜೀವನಕ್ಕೆ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಬಾಂಗ್ಲಾ ಪ್ರತಿಭಟನೆ

ಚದುರಿದ ಹೋರಾಟಗಳು... ಒಗ್ಗಟ್ಟಿನ ಕೊರತೆ

ಪಾಕಿಸ್ತಾನದಲ್ಲಿ ಆಡಳಿತಾರೂಢ ವ್ಯವಸ್ಥೆ ವಿರುದ್ಧ ಪ್ರತಿಭಟನೆಗಳೇ ನಡೆಯುತ್ತಿಲ್ಲ ಎಂದೇನಲ್ಲ. ಬಲೂಚಿಸ್ತಾನದಲ್ಲಿ ಸ್ವಾಯತ್ತತೆ, ಆಂತರಿಕ ರಾಜಕೀಯ ದಂಗೆಗಳು, ಸಂಪನ್ಮೂಲಗಳ ಸಮಾನ ಹಂಚಿಕೆಗೆ ಆಗ್ರಹಿಸಿ ಸುದೀರ್ಘ ಹೋರಾಟಗಳು ನಡೆಯುತ್ತಿವೆ. ಹಾಗೆಯೇ, ಪಾಕ್ ಆಕ್ರಮಿತ ಕಾಶ್ಮೀರದಲ್ಲೂ ಭಾರಿ ಪ್ರತಿಭಟನೆಗಳು ನಡೆದಿವೆ. ಈ ಎಲ್ಲ ಹೋರಾಟಗಳು ಆಯಾ ಪ್ರಾಂತ್ಯ ಅಥವಾ ನಿರ್ದಿಷ್ಟ ವಿಷಯಗಳಿಗೆ ಸೀಮಿತವಾಗಿದ್ದು, ಸರ್ಕಾರವನ್ನು ಅಲುಗಾಡಿಸುವಂತಹ ರಾಷ್ಟ್ರಮಟ್ಟದಲ್ಲಿ ಒಂದು ಒಕ್ಕೂಟ ವೇದಿಕೆ ರೂಪುಗೊಳ್ಳುತ್ತಿಲ್ಲ.

ಸಿಜೆಪಿ ಪ್ರತಿಭಟನೆಯಿಂದ ನಾವು ಕಲಿಯಬೇಕಾದ ದೊಡ್ಡ ಪಾಠ ಎಂದರೆ 'ಒಗ್ಗಟ್ಟು' ಎಂದು ಪಾಕಿಸ್ತಾನಿ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ. "ನಮ್ಮ ದೇಶದಲ್ಲಿ ಪಂಜಾಬಿಗಳು, ಪಖ್ತೂನರು, ಸುನ್ನಿಗಳು, ಶಿಯಾಗಳು ಎಂದು ನಾವೇ ಚದುರಿ ಹೋಗಿದ್ದೇವೆ. ಹಾಗಾಗಿ ಪಾಕಿಸ್ತಾನದ 'ಜೆನ್‌ ಝೀ' ನೆರೆಯ ದೇಶಗಳಂತೆ ಒಂದಾಗಲು ಸಾಧ್ಯವಿಲ್ಲ ಎಂದಿದ್ದಾನೆ.

ನೇಪಾಳ ಪ್ರತಿಭಟನೆ

ಭಾರತದಲ್ಲಿ ಸಿಜೆಪಿ ಪ್ರತಿಭಟನೆ ತೀವ್ರಗೊಂಡಾಗ, ಪಾಕಿಸ್ತಾನದ ಅನೇಕ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಯುವ ಹೋರಾಟಗಾರರನ್ನು ಶ್ಲಾಘಿಸಿದ್ದರು. ಜೊತೆಗೆ ತಮಗೆ ಇಂತಹ ಹೋರಾಟ ಕಟ್ಟಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ವಿಷಾದಿಸಿದ್ದರು. ನಮಗೂ ಎಂದಾದರೂ ಅವಕಾಶ ಸಿಕ್ಕರೆ, ನಾವು ಈ ರೀತಿ ಬೀದಿಗೆ ಇಳಿಯಬೇಕು. ಕಾಕ್ರೋಚ್‌ ಜನತಾ ಪಾರ್ಟಿಯ ಯುವಕರು ನಿಜಕ್ಕೂ ಸೂಪರ್. ಅವರು ತೀರಾ ಗಂಭೀರವಾಗಿ ವರ್ತಿಸುವುದಿಲ್ಲ, ನನಗೆ ಅದು ಇಷ್ಟವಾಯಿತು ಎಂದು ಪಾಕಿಸ್ತಾನದ ಯುವಕನೊಬ್ಬ 'ಬಿಸಿಬಿಸಿ ಉರ್ದು' ಪತ್ರಿಕೆಗೆ ಪ್ರತಿಕ್ರಿಯಿಸಿದ್ದನು ಇಲ್ಲಿ ಸ್ಮರಿಸಬಹುದು.

ಸರ್ಕಾರವನ್ನು ಅಲುಗಾಡಿಸುವಂತಹ ಬೃಹತ್ ಜನಾಂದೋಲನಗಳಿಗೆ ಪಾಕಿಸ್ತಾನದಲ್ಲಿ ಬಲವಾದ ಸಂಘಟನಾ ಶಕ್ತಿ ಮತ್ತು ಒಗ್ಗಟ್ಟಿನ ಕೊರತೆ ಇದೆ. ಹಾಗಾಗಿ ಪಾಕಿಸ್ತಾನದ ಜೆನ್‌ ಝೀ'ಗಳು ದಕ್ಷಿಣ ಏಷ್ಯಾದ ಇತರ ದೇಶಗಳಂತೆ ಬೃಹತ್ ಯುವ ಕ್ರಾಂತಿ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries