ಅಯೋಧ್ಯೆ: ನಗರದ ಗಲ್ಲಿ ಗಲ್ಲಿಗಳಲ್ಲಿ 'ಜೈ ಶ್ರೀರಾಮ್' ಘೋಷಣೆಗಳು ಎಂದಿನಂತೆ ಮೊಳಗುತ್ತಿದ್ದರೂ, ಮಂದಿರದ ದೇಣಿಗೆ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಭಕ್ತರಲ್ಲಿ ಆತಂಕ ಹಾಗೂ ಅಸಮಾಧಾನದ ವಾತಾವರಣ ನಿರ್ಮಾಣವಾಗಿದೆ.
ಭಣಗುಡುತ್ತಿರುವ ಪ್ರವಾಸಿ ತಾಣಗಳು ಮತ್ತು ಮಾರುಕಟ್ಟೆಗಳು ದೇಣಿಗೆ ಹಗರಣದ ಸುದ್ದಿ ಹೊರಬಂದಾಗಿನಿಂದ ಅಯೋಧ್ಯೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎನ್ನುತ್ತಾರೆ ಸ್ಥಳೀಯರು.
ಲತಾ ಮಂಗೇಶ್ಕರ್ ಚೌಕ್: ಪ್ರವಾಸಿಗರು ಮತ್ತು ಸೆಲ್ಫಿ ಪ್ರೇಮಿಗಳಿಂದ ಯಾವಾಗಲೂ ಗಿಜಿಗುಡುತ್ತಿದ್ದ ಈ ಪ್ರಸಿದ್ಧ ಚೌಕ್ನಲ್ಲಿ ಈಗ ಜನಸಂಚಾರ ವಿರಳವಾಗಿದೆ.
ರಾಮ್ ಪಥ್ ಮಾರುಕಟ್ಟೆ: ಪೂಜಾ ಸಾಮಗ್ರಿ, ಪ್ರಸಾದ ಹಾಗೂ ನೆನಪಿನ ಕಾಣಿಕೆಗಳನ್ನು ಮಾರಾಟ ಮಾಡುವ ಅಂಗಡಿಗಳು ಗ್ರಾಹಕರಿಲ್ಲದೆ ಖಾಲಿ ಹೊಡೆಯುತ್ತಿವೆ. ಭಕ್ತರ ಆಶಯದ ತಾಣವಾಗಿದ್ದ ರೆಸ್ಟೋರೆಂಟ್ಗಳಲ್ಲೂ ಜನರಿಲ್ಲದ ವಾತಾವರಣವಿದೆ.
ಹವಾಮಾನದ ಪ್ರಭಾವ: ಕೆಲವು ವ್ಯಾಪಾರಿಗಳು ತೀವ್ರ ಉಷ್ಣಾಂಶ ಮತ್ತು ಉಮ್ಮಳಿಸುವ ಹವಾಮಾನವನ್ನು ಇದಕ್ಕೆ ಕಾರಣವೆಂದರೆ, ಇನ್ನು ಹಲವರು ದೇಣಿಗೆ ವಿವಾದದ ಬಳಿಕವೇ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಭಕ್ತರು ಮತ್ತು ಅರ್ಚಕರ ಆಕ್ರೋಶ
ರಾಮನ ಪಾದಕ್ಕೆ ಅರ್ಪಿಸಿದ ಭಕ್ತಿಯ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಭಕ್ತರ ಮನಸ್ಸಿಗೆ ಗಾಯ ಮಾಡಿದೆ.
'ನಾವು ಮಂದಿರಕ್ಕೆ ಬಂದಾಗ ದೊಡ್ಡ ಮೊತ್ತದ ದೇಣಿಗೆ ನೀಡಲು ನಿರ್ಧರಿಸಿದ್ದೆವು. ಆದರೆ ಈಗ ಆ ಹಣವನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ನೀಡಲು ಯೋಚಿಸುತ್ತಿದ್ದೇವೆ. ದೇವರ ಮಂದಿರದಲ್ಲೇ ಹಣ ಸುರಕ್ಷಿತವಾಗಿಲ್ಲ ಎಂದರೆ ಭಕ್ತರು ಯೋಚಿಸಬೇಕಾಗುತ್ತದೆ' ಎನ್ನುತ್ತಾರೆ ಮಧ್ಯಪ್ರದೇಶದ ಭಕ್ತ ವೀರೇಂದ್ರ ಕುಮಾರ್.
ವೈರಾಗಿ ಅಖಾಡದ ಹಿರಿಯ ಅರ್ಚಕ ಸೋಮೇಶ್ವರ ದಾಸ್ ಈ ಕುರಿತು ಮಾತನಾಡಿ, 'ಈಗ ಬಂಧನಕ್ಕೊಳಗಾಗಿರುವವರು ಕೇವಲ ಸಣ್ಣ ಕಳ್ಳರು ಮಾತ್ರ. ಈ ಹಗರಣದ ಹಿಂದೆ ಇರುವ ದೊಡ್ಡ ಪ್ರಭಾವಿ ವ್ಯಕ್ತಿಗಳ ವಿರುದ್ಧವೂ ಟ್ರಸ್ಟ್ ಮತ್ತು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು'ಎಂದು ಆಗ್ರಹಿಸಿದ್ದಾರೆ.
'ಶ್ರೀ ರಾಮನು ಎಲ್ಲವನ್ನೂ ನೋಡುತ್ತಿದ್ದಾನೆ, ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತ' ಎಂದು ಸ್ಥಳೀಯ ನಿವಾಸಿ ನಿತಿನ್ ಪಾಂಡೆ ಅವರಂತಹ ಹಲವರು ತಮ್ಮ ಅಚಲ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

