ಲಂಡನ್/ನವದೆಹಲಿ: ಉಕ್ರೇನ್‌ನ ಒಡೆಸಾ ಬಂದರಿನಲ್ಲಿ ನಾಲ್ವರು ಭಾರತೀಯರಿದ್ದ 'ಎಂವಿ ಎಜಿಎನ್ ರಾಗ್ನರ್' ಎಂಬ ಹೆಸರಿನ ವಾಣಿಜ್ಯ ಹಡಗಿನ ಮೇಲೆ ಶನಿವಾರ ದಾಳಿ ನಡೆದಿದೆ.
'ಹಡಗಿನಲ್ಲಿದ್ದ ಇಬ್ಬರು ಸುರಕ್ಷಿತವಾಗಿದ್ದು, ಮತ್ತಿಬ್ಬರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.
ಇವರ ಪತ್ತೆಗಾಗಿ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ' ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.
'ಹಡಗಿನ ಮೇಲೆ ದಾಳಿಯಾಗಲು ಏನು ಕಾರಣ? ಹಡಗಿನಲ್ಲಿ ಒಟ್ಟು ಎಷ್ಟು ಸಿಬ್ಬಂದಿ ಇದ್ದರು ಎಂಬ ಬಗ್ಗೆ ತಕ್ಷಣಕ್ಕೆ ಮಾಹಿತಿ ಸಿಕ್ಕಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ' ಎಂದು ಹೇಳಿದೆ.
2022ರಲ್ಲಿ ರಷ್ಯಾ- ಉಕ್ರೇನ್ ಸಂಘರ್ಷ ಆರಂಭವಾದ ದಿನದಿಂದ ಒಡೆಸಾ ಬಂದರಿನಲ್ಲಿ ಆಗಾಗ್ಗೆ ದಾಳಿಗಳು ನಡೆಯುತ್ತಿವೆ. ಕಳೆದ ವಾರ ಎರಡು ವಾಣಿಜ್ಯ ಹಡಗುಗಳ ಮೇಲೆ ದಾಳಿಯಾಗಿದ್ದು, ಐವರು ಭಾರತೀಯರು ಮೃತಪಟ್ಟಿದ್ದರು.
ಭದ್ರತಾ ವ್ಯವಸ್ಥೆ ಪರಿಶೀಲಿಸಿ: ಕಪ್ಪುಸಮುದ್ರ ಸೇರಿದಂತೆ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಕೆಲಸಕ್ಕೆ ಸೇರುವ ಮುನ್ನ ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಬೇಕು' ಎಂದು ಭಾರತವು ತನ್ನ ನಾಗರಿಕರಿಗೆ ಸಲಹೆ ನೀಡಿದೆ.
'ಕಪ್ಪುಸಮುದ್ರ ಹಾಗೂ ಅದರ ಸುತ್ತಮುತ್ತಲಿನ ಕರಾವಳಿ ಪ್ರದೇಶದಲ್ಲಿ ಅಸ್ಥಿರ ವಾತಾವರಣ ಸೃಷ್ಟಿಯಾಗಿದೆ. ವಾಣಿಜ್ಯ ಹಡಗುಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಲಾಗುತ್ತಿದೆ. ಇಲ್ಲಿ ಕಾರ್ಯನಿರ್ವಹಿಸುವ ಅಥವಾ ಸಾಗುವ ವಾಣಿಜ್ಯ ಹಡಗುಗಳಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಲು ಉದ್ದೇಶಿಸಿರುವ ಭಾರತೀಯರು, ಅಲ್ಲಿರುವ ಭದ್ರತಾ ಅಪಾಯಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು' ಎಂದು ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ.
'ಉದ್ಯೋಗ ಹುಡುಕುತ್ತಿರುವ ಭಾರತೀಯರು ಉದ್ಯೋಗದಾತರು ಅಥವಾ ನೇಮಕಾತಿ ಏಜೆನ್ಸಿಗಳು ಮತ್ತು ಹಡಗು ನಿರ್ವಾಹಕರಿಂದ ಹಡಗಿನ ಉದ್ದೇಶಿತ ಮಾರ್ಗ, ಭದ್ರತಾ ವ್ಯವಸ್ಥೆ, ವಿಮೆ, ತುರ್ತು ಪ್ರತಿಕ್ರಿಯೆಯ ಕಾರ್ಯ ವಿಧಾನಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯಬೇಕು' ಎಂದು ಸಲಹೆ ನೀಡಿದೆ.
'ಉದ್ಯೋಗದ ನಿಯಮಗಳು ಅಂತರರಾಷ್ಟ್ರೀಯ ಕಡಲ ಮಾನದಂಡಗಳಿಗೆ ಬದ್ಧವಾಗಿರಬೇಕು. ತುರ್ತು ಸಂದರ್ಭದಲ್ಲಿ ವೈದ್ಯಕೀಯ ಆರೈಕೆ, ಸ್ಥಳಾಂತರಿಸುವಿಕೆ, ಸ್ವದೇಶಕ್ಕೆ ವಾಪಸ್ ಕಳುಹಿಸುವಿಕೆ ಮತ್ತು ಪರಿಹಾರಕ್ಕಾಗಿ ಸೂಕ್ತ ನಿಬಂಧನೆಗಳನ್ನು ಒದಗಿಸುವ ಕುರಿತು ಖಚಿತಪಡಿಸಿಕೊಳ್ಳಬೇಕು' ಎಂದು ಹೇಳಿದೆ.
'ಈಗಾಗಲೇ ಕೆಲಸ ಮಾಡುತ್ತಿರುವ ಭಾರತೀಯರು ತಮ್ಮ ಪ್ರಯಾಣದ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಬೇಕು ಹಾಗೂ ನಿಯಮಿತವಾಗಿ ಸಂಪರ್ಕದಲ್ಲಿ ಇರಬೇಕು. ನೆರವಿನ ಅಗತ್ಯವಿರುವವರು ಆ ಪ್ರದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಥವಾ ರಾಜತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸಬೇಕು' ಎಂದು ಸಲಹೆ ನೀಡಿದೆ.

