ನವದೆಹಲಿ: ಭಾರತದ ಮೊದಲ ಜಲಜನಕ ಚಾಲಿತ ರೈಲಿನ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಹಸಿರು ನಿಶಾನೆ ತೋರಿಸಿದ್ದಾರೆ.
ಈ ರೈಲು ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವಿನ 89 ಕಿ.ಮೀ ಮಾರ್ಗದಲ್ಲಿ ಸಂಚರಿಸಲಿದೆ. ಈ ಮೂಲಕ ದೇಶದಲ್ಲಿ ಜಲಜನಕ ಚಾಲಿತ ರೈಲಿನ ಆಗಮನವಾಗಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, 'ಇಂತಹ ಅತ್ಯಾಧುನಿಕ ರೈಲುಗಳನ್ನು ಹೊಂದಿರುವ ವಿಶ್ವದ ಕೆಲವೇ ಕೆಲವು ಆಯ್ದ ದೇಶಗಳ ಸಾಲಿಗೆ ಭಾರತವೂ ಸೇರಿದೆ. ರೈಲ್ವೆ ವಲಯದಲ್ಲಿ ಭಾರತವು ಪರಿಸರ ಸ್ನೇಹಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಇದು ಪ್ರಮುಖ ಮೈಲಿಗಲ್ಲಾಗಲಿದೆ' ಎಂದಿದ್ದಾರೆ.
ಒಂದು ಪ್ರಾಯೋಗಿಕ ಯೋಜನೆಯಾಗಿ ಅಭಿವೃದ್ಧಿಪಡಿಸಲಾದ ಈ ರೈಲು, ಹೈಡ್ರೋಜನ್ ತಂತ್ರಜ್ಞಾನವನ್ನು ಪರೀಕ್ಷಿಸಲು ನೆರವಾಗಲಿದೆ. ಜೊತೆಗೆ, ಭಾರತದಲ್ಲಿ ಭವಿಷ್ಯದ ಪರಿಸರಸ್ನೇಹಿ ರೈಲು ಪ್ರಯಾಣದ ಯೋಜನೆಗಳಿಗೆ ಇದು ದೊಡ್ಡ ಬೆಂಬಲ ನೀಡಲಿದೆ.

