ನವದೆಹಲಿ: ರಾಷ್ಟ್ರದಾದ್ಯಂತ ಇರುವ ಪೆಟ್ರೋಕ್ ಬಂಕ್ಗಳಲ್ಲಿ ಇಂಧನ ಗುಣಮಟ್ಟದ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು ಹೇಳಿವೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳಾಗಿವೆ.
ಇಂಧನದ ಗುಣಮಟ್ಟದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಗ್ರಾಹಕರಲ್ಲಿ ವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಕಂಪನಿಗಳು ಈ ಕ್ರಮಕ್ಕೆ ಮುಂದಾಗಿವೆ.
ಕಳೆದ ವಾರ 10 ಸಾವಿರ ದಿಢೀರ್ ತಪಾಸಣೆಗಳನ್ನು ಹಾಗೂ 8,500ಕ್ಕೂ ಹೆಚ್ಚು ಗುಣಮಟ್ಟ ಪರೀಕ್ಷೆಗಳನ್ನು ದೇಶದಾದ್ಯಂತ ಕೈಗೊಳ್ಳಲಾಗಿದೆ ಎಂದು ಇಂಡಿಯನ್ ಆಯಿಲ್ ತಿಳಿಸಿದೆ. ನಿಗದಿತ ಗುಣಮಟ್ಟ ಮಾನದಂಡವನ್ನು ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ವಿಶೇಷ ತಪಾಸಣಾ ತಂಡಗಳನ್ನು ನೂರಾರು ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಅದು ಹೇಳಿದೆ.
'ಇಂಧನದ ಗುಣಮಟ್ಟವು ನಮಗೆ ಅತ್ಯಂತ ಮುಖ್ಯ. ಗುಣಮಟ್ಟದ ಇಂಧನವು ಗ್ರಾಹಕರಿಗೆ ಸಿಗುವುದನ್ನು ಖಾತರಿಪಡಿಸಿಕೊಳ್ಳಲು ನಮ್ಮ ತಂಡಗಳು ದೇಶದಾದ್ಯಂತ ನಿತ್ಯವೂ ಕೆಲಸ ಮಾಡುತ್ತವೆ' ಎಂದು ಇಂಡಿಯನ್ ಆಯಿಲ್ ಕಂಪನಿಯು ಹೇಳಿದೆ.
ಜುಲೈ 3ರಿಂದ 13ರ ನಡುವೆ ಪೆಟ್ರೋಲ್ ಬಂಕ್ಗಳಲ್ಲಿ ಒಟ್ಟು 932 ದಿಢೀರ್ ತಪಾಸಣೆ ನಡೆಸಲಾಗಿದೆ ಎಂದು ಭಾರತ್ ಪೆಟ್ರೋಲಿಯಂ ಹೇಳಿದೆ. ಕಲಬೆರಕೆ, ಅಕ್ರಮ ಅಥವಾ ನಿಯಮ ಪಾಲನೆಯಲ್ಲಿ ಲೋಪದಂತಹ ಪ್ರಕರಣಗಳು ತಪಾಸಣೆ ವೇಳೆ ಪತ್ತೆಯಾಗಿಲ್ಲ ಎಂದು ತಿಳಿಸಿದೆ.
ಎಥೆನಾಲ್ ಮಿಶ್ರಣದ ನಿಯಮವನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ತಿಳಿಯಲು ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿಯು ಜುಲೈ 7ರಿಂದ 13ರ ನಡುವೆ 2,173 ದಿಢೀರ್ ತಪಾಸಣೆಗಳನ್ನು ನಡೆಸಿದೆ. ಅಲ್ಲದೆ, ಜುಲೈ 3ರಿಂದ 13ರ ನಡುವೆ ಕಂಪನಿಯು 1,385 ಮಾಮೂಲಿ ತಪಾಸಣೆಗಳನ್ನು ನಡೆಸಿದೆ. ಕಲಬೆರಕೆ, ಅಕ್ರಮದ ನಿದರ್ಶನಗಳು ಕಂಡುಬಂದಿಲ್ಲ ಎಂದು ಕಂಪನಿ ಹೇಳಿದೆ.

