ನವದೆಹಲಿ: ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಗಂಭೀರ ಕಳವಳದ ವಿಷಯ ಎಂದು ಬುಧವಾರ ಬಣ್ಣಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿರೋಧ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳು ಮತ್ತು ಯುವಕರನ್ನು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಿವಾಸದ ಹೊರಗೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಧರಣಿ ನಡೆಸಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಮಾತನಾಡಿದ ಸಿಂಗ್, ''ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಗಂಭೀರ ಕಳವಳಕಾರಿ ವಿಷಯವಾಗಿದೆ. ನಮ್ಮ ದೇಶದ ವಿದ್ಯಾರ್ಥಿಗಳು ಮತ್ತು ಯುವಕರನ್ನು ಕೆಲವರು ತಮ್ಮ ಸ್ವಂತ ರಾಜಕೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ರಾಜಕೀಯ ದಾಳಗಳಾಗಿ ಬಳಸಿಕೊಳ್ಳಲು ಯತ್ನಿಸುತ್ತಿರುವುದು ಅತ್ಯಂತ ದುರದೃಷ್ಟಕರ'' ಎಂದು ಹೇಳಿದರು.
ನರೇಂದ್ರ ಮೋದಿ ಸರಕಾರವು ವಿದ್ಯಾರ್ಥಿಗಳ ಆಶೋತ್ತರಗಳನ್ನು ಈಡೇರಿಸಲು ಮತ್ತು ಅವರ ಅಭಿವೃದ್ಧಿಯನ್ನು ಸಾಧಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು.
''ನಮ್ಮ ವಿದ್ಯಾರ್ಥಿಗಳು ಎತ್ತುವ ಪ್ರತಿಯೊಂದು ಕಳವಳವನ್ನು ಆಲಿಸಿ ಪರಿಹರಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಭಾರತದ ಜಾಗರೂಕ, ಪಕ್ವ ಮತ್ತು ವಿವೇಚನಾಶೀಲ ಯುವಜನತೆ ಇಂತಹ ಹಾದಿತಪ್ಪಿಸುವ ಯತ್ನಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳುತ್ತಾರೆ ಹಾಗೂ ಪ್ರಗತಿ, ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದ ಹಾದಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ'' ಎಂದು ಸಿಂಗ್ ನುಡಿದರು.
''ಯಾರಿಗೂ, ಅದರಲ್ಲೂ ವಿಶೇಷವಾಗಿ ನಮ್ಮ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಕೆಲ ವಿರೋಧ ಪಕ್ಷದ ನಾಯಕರು ಸೃಷ್ಟಿಸುತ್ತಿರುವ ಈ 'ಕೃತಕ ಆಕ್ರೋಶ'ವು ಸಾರ್ವಜನಿಕರನ್ನು, ಮುಖ್ಯವಾಗಿ ನಮ್ಮ ಮಕ್ಕಳು ಮತ್ತು ಯುವಕರನ್ನು ಗೊಂದಲಕ್ಕೀಡುಮಾಡುವ ಮತ್ತು ಹಾದಿತಪ್ಪಿಸುವ ಒಂದು ವಿಫಲ ಯತ್ನವಷ್ಟೇ ಆಗಿದೆ'' ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಚರ್ಚೆಗೆ ಸಂಸತ್ತೇ ಸರಿಯಾದ ವೇದಿಕೆ ಎಂದ ಸಿಂಗ್, ಕಲಾಪಕ್ಕೆ ಅಡ್ಡಿಪಡಿಸುವ ಬದಲು ಪ್ರಸ್ತುತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲೇ ತಮ್ಮ ಕಳವಳಗಳನ್ನು ವ್ಯಕ್ತಪಡಿಸುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.

