ನವದೆಹಲಿ: ಯುವಜನತೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ನಿರ್ಣಾಯಕ ವಿಷಯಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ವಿರೋಧ ಪಕ್ಷದ ನಾಯಕರಿಗೆ ಪದೇ ಪದೇ ತಡೆಯೊಡ್ಡುವ ಮೂಲಕ ಸರಕಾರವು ಅಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಲು ಕಪ್ಪು ಉಡುಪು ಧರಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ''ದೇಶದಲ್ಲಿ ಪ್ರಜಾಪ್ರಭುತ್ವ ಅಂತ್ಯಗೊಂಡಿದೆ'' ಎಂದು ಅವರು ಹೇಳಿದರು.
ಯುವಜನತೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ನಿರ್ಣಾಯಕ ವಿಷಯಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ವಿರೋಧ ಪಕ್ಷದ ನಾಯಕರಿಗೆ ಪದೇ ಪದೇ ತಡೆಯೊಡ್ಡುತ್ತಿರುವ ಆಡಳಿತವು ಅಪ್ರಜಾಸತ್ತಾತ್ಮಕವಾಗಿದೆ ಎಂದು ಅವರು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ 7, ಲೋಕ ಕಲ್ಯಾಣ್ ಮಾರ್ಗ ನಿವಾಸದ ಹೊರಗೆ ಮಂಗಳವಾರ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಪ್ರಿಯಾಂಕಾ ಗಾಂಧಿ, ವಾಕ್ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯ ಹಕ್ಕು ಪ್ರಜಾಪ್ರಭುತ್ವದಲ್ಲಿ ಅತ್ಯಂತ ದೊಡ್ಡ ಸಂಗತಿಗಳಾಗಿವೆ ಎಂದು ಹೇಳಿದರು.
''ಅದರಲ್ಲಿ ಯಾವುದೇ ಅಪ್ರಜಾಸತ್ತಾತ್ಮಕ ಅಂಶವಿಲ್ಲ. ಆದರೆ ಸಂಸತ್ನಲ್ಲಿ ಮತ್ತು ರಸ್ತೆಗಳಲ್ಲಿ ನಡೆಯುತ್ತಿರುವುದೇ ಅಪ್ರಜಾಸತ್ತಾತ್ಮಕ'' ಎಂದು ಅವರು ಹೇಳಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೋಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ಹಲವು ವಿರೋಧ ಪಕ್ಷದ ಸಂಸದರು ಬುಧವಾರ ಸಂಸತ್ನ ಹೊರಗೆ ಕಪ್ಪು ಉಡುಪು ಧರಿಸಿ ಪ್ರತಿಭಟನೆ ನಡೆಸಿದರು.
''ಸಂಸತ್ನಲ್ಲಿ ಚರ್ಚೆಗೆ ಅವಕಾಶ ನೀಡಲಾಗುತ್ತಿಲ್ಲ. ವಿಪಕ್ಷ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ, ಹಾಗೂ ಇತರ ವಿರೋಧ ಪಕ್ಷಗಳ ನಾಯಕರಿಗೂ ಅವಕಾಶ ನೀಡುತ್ತಿಲ್ಲ. ಅವರು ಮಾತನಾಡಲು ಎದ್ದು ನಿಂತಾಗಲೆಲ್ಲಾ ಅವರನ್ನು ತಡೆಯಲಾಗುತ್ತಿದೆ'' ಎಂದು ಸಂಸತ್ ಭವನ ಸಂಕೀರ್ಣದಲ್ಲಿ ಸುದ್ದಿಗಾರರಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ಹೇಳಿದರು.
''ಚರ್ಚೆ ನಡೆಸಬಹುದೇ ಎಂದು ತಾನು ಸರಕಾರವನ್ನು ಕೇಳಬೇಕು ಎಂದು ಸಭಾಪತಿಯವರು ಹೇಳುತ್ತಾರೆ. ಏನಿದು? ಪ್ರಜಾಪ್ರಭುತ್ವ ಅಂತ್ಯಗೊಂಡಿದೆ'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದರು.

