ಭೋಪಾಲ್ : ಭಾರತದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಇರುವ ಅವಕಾಶಗಳು ಕುಗ್ಗುತ್ತಿದ್ದು, ಶಾಂತಿಯುತ ಪ್ರತಿಭಟನೆ ನಡೆಸುವ ನಾಗರಿಕರು, ಪರಿಸರ ಹೋರಾಟಗಾರರು ಹಾಗೂ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಕ್ರಮ ಜರುಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಹೇಳಿದರು.
ಭೋಪಾಲ್‌ನ ರಾಷ್ಟ್ರೀಯ ಕಾನೂನು ಸಂಸ್ಥೆ ವಿಶ್ವವಿದ್ಯಾಲಯದಲ್ಲಿ (NLIU) ಶನಿವಾರ ನಡೆದ ನ್ಯಾಯಮೂರ್ತಿ ಜಿ.ಪಿ. ಸಿಂಗ್ ನಾಲ್ಕನೇ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಅವರು, ಅಭಿಪ್ರಾಯ ವ್ಯಕ್ತಪಡಿಸುವುದು ಮತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ನಾಗರಿಕರ ಮೂಲಭೂತ ಸ್ವಾತಂತ್ರ್ಯಗಳಾಗಿವೆ. ಚರ್ಚೆ ಮತ್ತು ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ಸಾಮಾನ್ಯ ಚಟುವಟಿಕೆಗಳನ್ನೂ ಅಪರಾಧೀಕರಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಎಂದು ಹೇಳಿದರು.
ಪರಿಸರ ನಾಶದ ವಿರುದ್ಧ ಧ್ವನಿ ಎತ್ತುವವರನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ವಿಶ್ವವಿದ್ಯಾಲಯ ಕ್ಯಾಂಪಸ್ ಗಳಲ್ಲಿ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳನ್ನು ಬಂಧಿಸಿ 30ರಿಂದ 40 ದಿನಗಳವರೆಗೆ ಜಾಮೀನು ನೀಡದೆ ಇರಿಸಲಾಗುತ್ತಿದೆ. ಬಳಿಕ ಅವರನ್ನು ಅಮಾನತುಗೊಳಿಸಲಾಗುತ್ತಿದ್ದು, ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದರು.
ನ್ಯಾಯಾಲಯಗಳು ಅಂತಿಮವಾಗಿ ಜಾಮೀನು ಮತ್ತು ಪರಿಹಾರ ನೀಡುತ್ತಿದ್ದರೂ, ಅದು ಹಲವು ಬಾರಿ ತಡವಾಗಿ ದೊರೆಯುತ್ತಿದೆ. ಜಾಮೀನು ನೀಡುವಾಗ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬಾರದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಾರದು ಅಥವಾ ದೇಶವನ್ನು ತೊರೆಯಬಾರದು ಎಂಬಂತಹ ನಿರ್ಬಂಧಿತ ಷರತ್ತುಗಳನ್ನು ವಿಧಿಸಲಾಗುತ್ತಿದೆ. ಇಂತಹ ಷರತ್ತುಗಳು ನಾಗರಿಕರನ್ನು ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದರಿಂದ ಪರೋಕ್ಷವಾಗಿ ನಿರುತ್ಸಾಹಗೊಳಿಸುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಹೇಳಿದರು.
ಗಂಗಾ ನದಿಯಲ್ಲಿ ದೋಣಿಯಲ್ಲಿ ಚಿಕನ್ ಬಿರಿಯಾನಿ ಸೇವಿಸಿ ಉಪವಾಸ ಮುರಿದ ಯುವಕರ ಬಂಧನದ ಪ್ರಕರಣವನ್ನು ಉಲ್ಲೇಖಿಸಿದ ಅವರು, "ಚಿಕನ್ ಬಿರಿಯಾನಿ ಸೇವಿಸುವುದು ಅಪರಾಧವಲ್ಲ. ಗಂಗಾ ನದಿಯಲ್ಲಿ ಕೋಳಿ ಮಾಂಸ ಸೇವಿಸುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ. ಆದರೂ ಅವರನ್ನು ಬಂಧಿಸಿ ಮೂರು ತಿಂಗಳು ಜೈಲಿನಲ್ಲಿ ಇರಿಸಲಾಯಿತು" ಎಂದು ಹೇಳಿದರು.
ಗಾಝಾದೊಂದಿಗಿನ ಒಗ್ಗಟ್ಟಿನ ಪ್ರದರ್ಶನಕ್ಕೆ ಸಂಬಂಧಿಸಿದ ಬಾಂಬೆ ಹೈಕೋರ್ಟ್ ಪ್ರಕರಣವನ್ನೂ ಅವರು ಪ್ರಸ್ತಾಪಿಸಿದರು. ಭಾರತದ ಹೊರಗಿನ ಘಟನೆಗಳ ಕುರಿತು ಜನರು ಏಕೆ ಪ್ರತಿಭಟಿಸಬೇಕು ಎಂದು ನ್ಯಾಯಾಧೀಶರೊಬ್ಬರು ಪ್ರಶ್ನಿಸಿರುವುದು ಆಶ್ಚರ್ಯಕರ ಎಂದು ಹೇಳಿದರು.
ವಿಶ್ವವಿದ್ಯಾಲಯಗಳು ಪ್ರಶ್ನಿಸುವ ಮನೋಭಾವ ಬೆಳೆಸಬೇಕು :
ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮತ್ತು ವಿಮರ್ಶಾತ್ಮಕ ಚಿಂತನೆಯ ಮನೋಭಾವ ಬೆಳೆಸಬೇಕು. ಅಹಿತಕರ ಪ್ರಶ್ನೆಗಳನ್ನೂ ಸ್ವಾಗತಿಸಬೇಕು. ಪ್ರಶ್ನೆ ಕೇಳಿದ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು.
"ವಿದ್ಯಾರ್ಥಿಗಳು ತಾವಾಗಿಯೇ ಇರಲು ಅವಕಾಶ ನೀಡಬೇಕು. ಅವರ ಜಿಜ್ಞಾಸೆಯನ್ನು ಪ್ರೋತ್ಸಾಹಿಸಬೇಕು. ಪ್ರಶ್ನೆಗಳನ್ನು ಕೇಳಲು ಉತ್ತೇಜಿಸಬೇಕು. ಪ್ರಶ್ನಿಸದಿದ್ದರೆ ಅವರು ಪಠ್ಯವನ್ನು ಗಿಣಿಯಂತೆ ಪುನರಾವರ್ತಿಸುವವರಾಗುತ್ತಾರೆ" ಎಂದು ಅವರು ಹೇಳಿದರು.
ಆರ್ಥಿಕವಾಗಿ ದುರ್ಬಲ ವರ್ಗಗಳ (ಇWS) ಮೀಸಲಾತಿ ಸೇರಿದಂತೆ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪ್ರಶ್ನಾತೀತವಾಗಿ ಒಪ್ಪಿಕೊಳ್ಳುವ ಬದಲು ವಿಮರ್ಶಾತ್ಮಕವಾಗಿ ವಿಶ್ಲೇಷಿಸಬೇಕು. ತೀರ್ಪಿನ ಟೀಕೆ ಎಂದರೆ ನ್ಯಾಯಾಧೀಶರ ಟೀಕೆ ಅಲ್ಲ; ತೀರ್ಪುಗಳನ್ನು ನೀಡಿದ ಬಳಿಕ ಅವುಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಅಧಿಕಾರಗಳ ಪ್ರತ್ಯೇಕತೆ ಪ್ರಜಾಪ್ರಭುತ್ವದ ತಳಹದಿ :
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವಿನ ಅಧಿಕಾರಗಳ ಪ್ರತ್ಯೇಕತೆ ಪ್ರಜಾಪ್ರಭುತ್ವದ ಮೂಲ ತತ್ವವಾಗಿದೆ ಎಂದು ಅವರು ಹೇಳಿದರು.
ಮೂರು ಕಾಲಿನ ಆಸನದ ಉದಾಹರಣೆ ನೀಡಿ, "ಮೂರು ಕಾಲುಗಳು ಸಮತೋಲನದಲ್ಲಿದ್ದಾಗ ಮಾತ್ರ ಅದು ಸ್ಥಿರವಾಗಿರುತ್ತದೆ. ಒಂದೇ ಕಡೆ ಎರಡು ಕಾಲುಗಳಿದ್ದರೆ ಅದು ಉರುಳುತ್ತದೆ. ಅಧಿಕಾರಗಳ ಪ್ರತ್ಯೇಕತೆಯ ತತ್ವವೂ ಇದೇ ರೀತಿಯದು" ಎಂದು ವಿವರಿಸಿದರು.
ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಅಂತರವನ್ನು ಕಡಿಮೆ ಮಾಡಲು ರಾಜ್ಯಸಭೆಗೆ ಹೋಗುತ್ತಿದ್ದೇನೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಯೊಬ್ಬರು ಹೇಳಿದ್ದನ್ನು ಉಲ್ಲೇಖಿಸಿದ ಅವರು, ಅದು ಅಧಿಕಾರಗಳ ಪ್ರತ್ಯೇಕತೆಯ ತತ್ವಕ್ಕೆ ವಿರುದ್ಧವಾದ ನಿಲುವು ಎಂದು ಅಭಿಪ್ರಾಯಪಟ್ಟರು.
ಭಾರತದ ಸಂವಿಧಾನವು ಕಠಿಣ ಪ್ರತ್ಯೇಕತೆಯ ಬದಲಿಗೆ ಹೊಂದಿಕೊಳ್ಳುವ ಮಾದರಿಯನ್ನು ಅನುಸರಿಸಿದ್ದರೂ, ನ್ಯಾಯಾಂಗ ಸ್ವಾತಂತ್ರ್ಯ, ಒಕ್ಕೂಟ ವ್ಯವಸ್ಥೆ, ಕಾನೂನಿನ ಆಳ್ವಿಕೆ ಮತ್ತು ಅಧಿಕಾರಗಳ ಪ್ರತ್ಯೇಕತೆ ಸೇರಿದಂತೆ ಸಂವಿಧಾನದ ಮೂಲ ಲಕ್ಷಣಗಳನ್ನು ರಕ್ಷಿಸುವ ಅಂತಿಮ ಹೊಣೆ ನ್ಯಾಯಾಂಗದ ಮೇಲಿದೆ ಎಂದು ಅವರು ಹೇಳಿದರು.
ನ್ಯಾಯಾಂಗದ ಶಕ್ತಿ ಜನರ ವಿಶ್ವಾಸ :
ನ್ಯಾಯಾಂಗದ ಶಕ್ತಿ ಅಧಿಕಾರದಿಂದಲ್ಲ, ಸಾರ್ವಜನಿಕರ ವಿಶ್ವಾಸದಿಂದ ಬರುತ್ತದೆ. ನ್ಯಾಯಾಂಗವು ತನ್ನ ಬಗ್ಗೆ ತಾನೇ ಶ್ಲಾಘಿಸಿಕೊಳ್ಳುವುದಕ್ಕಿಂತ ನಾಗರಿಕರ ವಿಶ್ವಾಸವನ್ನು ಗಳಿಸುವುದು ಮುಖ್ಯ. ಆತ್ಮಾವಲೋಕನ ಮತ್ತು ಮುಕ್ತ ಟೀಕೆಗಳು ನ್ಯಾಯಾಂಗ ಸೇರಿದಂತೆ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುತ್ತವೆ. ನ್ಯಾಯಾಂಗ ಮತ್ತು ಮಾಧ್ಯಮ ಎರಡೂ ಪ್ರಜಾಪ್ರಭುತ್ವದ ಪ್ರಮುಖ ಸ್ತಂಭಗಳಾಗಿದ್ದು, ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಹೊಸ ತಲೆಮಾರಿನ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳು ಹಿಂದಿನ ಪೀಳಿಗೆಯವರಿಗಿಂತ ಸಂವಿಧಾನ ಹಾಗೂ ಕಾನೂನಿನ ಆಳ್ವಿಕೆಗೆ ಹೆಚ್ಚು ಬದ್ಧರಾಗಿದ್ದಾರೆ. ಅವರ ಬಗ್ಗೆ ಅಪಾರ ಭರವಸೆ ಇದೆ ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಹೇಳಿದರು.

