ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣಕ್ಕ ಸಂಬಂಧಿಸಿದಂತೆ, ಪಾಕಿಸ್ತಾನ ಮೂಲದ ಭಯೋತ್ಪಾದಕ ಮತ್ತು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸ್ಥಾಪಕ ಹಫೀಜ್ ಸಯೀದ್ನನ್ನು ಆರೋಪಿಯನ್ನಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹೆಸರಿಸಿದೆ.
ಜಮ್ಮುವಿನ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಈತ ನಿಷೇಧಿತ ಲಷ್ಕರ್-ಎ-ತೈಬಾ ಸಂಘಟನೆಯ ಮುಖ್ಯಸ್ಥನಾಗಿದ್ದ ಹಾಗೂ ಅದರ ಪ್ರಾತಿನಿಧಿಕ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಅಧ್ಯಕ್ಷ ಎಂದು ಆರೋಪಿಸಲಾಗಿದೆ.
ಸಯೀದ್ ವಿರುದ್ಧ ಭಾರತೀಯ ನ್ಯಾಯ ಸಂಹಿತ 2023 ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967ರ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಭಾರತದ ವಿರುದ್ಧ ಯುದ್ಧ ನಡೆಸುವುದು ಮತ್ತು ದಾಳಿಗೆ ಸಂಬಂಧಿಸಿದಂತೆ ಗಡಿಯಾಚೆಯಿಂದ ಪಿತೂರಿ ನಡೆಸಿದ ಆರೋಪವನ್ನೂ ಸಂಸ್ಥೆ ಆತನ ಮೇಲೆ ಹೊರಿಸಿದೆ.
ಈ ಪೂರಕ ಆರೋಪ ಪಟ್ಟಿಯನ್ನು ಈಗಾಗಲೇ ಸಲ್ಲಿಸಲಾಗಿದ್ದ 1,597 ಪುಟಗಳ ಮೂಲ ಆರೋಪಪಟ್ಟಿಯ ಮುಂದುವರಿದ ಭಾಗವಾಗಿ ಸಲ್ಲಿಸಲಾಗಿದೆ ಎಂದು ಎನ್ಐಎ ತಿಳಿಸಿದೆ. ಇದರಲ್ಲಿ ಪಾಕಿಸ್ತಾನದ ಸಂಚು, ಹಫೀಜ್ ಸಯೀದ್ನ ಪಾತ್ರ ಹಾಗೂ ಎನ್ಐಎ ನಡೆಸಿದ ಸೂಕ್ಷ್ಮ ವೈಜ್ಞಾನಿಕ ತನಿಖೆ ಮತ್ತು ಸ್ಥಳ ಪರಿಶೀಲನೆಯ ವೇಳೆ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳ ವಿವರಗಳನ್ನು ಒಳಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
2025ರ ಡಿಸೆಂಬರ್ 15ರಂದು ಸಲ್ಲಿಸಿದ ಹಿಂದಿನ ಚಾರ್ಜ್ಶೀಟ್ನಲ್ಲಿ ಎನ್ಐಎ ಪಾಕಿಸ್ತಾನಿ ಹ್ಯಾಂಡ್ಲರ್ ಸಾಜಿದ್ ಜಾಟ್ನನ್ನು ಆರೋಪಿಯನ್ನಾಗಿ ಹೆಸರಿಸಿತ್ತು. 2025ರ ಜುಲೈಯಲ್ಲಿ ಆಪರೇಷನ್ ಮಹಾದೇವ್ ಸಮಯದಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿದ ಮೂವರು ಭಯೋತ್ಪಾದಕರು ಮತ್ತು ಬಂಧಿತ ಇಬ್ಬರು ಆರೋಪಿಗಳನ್ನು ಸಹ ಅದು ಹೆಸರಿಸಿತ್ತು.
ಈ ಹಿಂದೆ ಸಲ್ಲಿಸಲಾಗಿದ್ದ ಆರೋಪ ಪಟ್ಟಿಯಲ್ಲೂ ಪಹಲ್ಗಾಮ್ ಉಗ್ರ ದಾಳಿಯ ಸಂಚು ರೂಪಿಸುವುದು, ಅದಕ್ಕೆ ನೆರವು ನೀಡುವುದು ಹಾಗೂ ದಾಳಿಯನ್ನು ನಡೆಸುವಲ್ಲಿ ಪಾತ್ರವಹಿಸಿದ್ದಕ್ಕಾಗಿ ನಿಷೇಧಿತ ಲಷ್ಕರ್-ಎ-ತೈಬಾ ಭಯೋತ್ಪಾದಕಾ ಸಂಘಟನೆಯನ್ನು ಕಾನೂನು ಘಟಕವೆಂದು ಆ ಹಿಂದಿನ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.
ಕಳೆದ ವರ್ಷ ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆದಿತ್ತು. ಪಾಕಿಸ್ತಾನಿ ಮೂಲದ ಭಯೋತ್ಪಾದಕರು ನಡೆಸಿದ್ದ ಈ ದಾಳಿಯಲ್ಲಿ 25 ಮಂದಿ ಪ್ರವಾಸಿಗರು ಹಾಗೂ ಓರ್ವ ಸ್ಥಳೀಯರು ಮೃತಪಟ್ಟಿದ್ದರು. ಈ ಘಟನೆ ದೇಶದ ಜನರ ರಕ್ತ ಕುದಿಯುವಂತೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕೈಗೊಂಡಿತ್ತು.
ಪಹಲ್ಗಾಮ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಹಲ್ಗಾಮ್ ಪೊಲೀಸ್ ಠಾಣೆಯಲ್ಲಿ ಮೊದಲು ಎಫ್ಐಆರ್ ದಾಖಲಾಗಿತ್ತು. ಆರಂಭಿಕ ತನಿಖೆಯ ನಂತರ, ಕೇಂದ್ರ ಗೃಹ ಸಚಿವಾಲಯ ಈ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಿತು.
ಭಾರತದ ನೆಲದಲ್ಲಿ ಗಡಿಯಾಚೆಯಿಂದ ಭಯೋತ್ಪಾದನೆಯನ್ನು ಸಕ್ರಿಯವಾಗಿ ಪೋಷಿಸುತ್ತಿರುವ ಪಾಕಿಸ್ತಾನದ ಸಂಪೂರ್ಣ ಪಿತೂರಿಯನ್ನು ಬಯಲು ಮಾಡಲು ಎನ್ಐಎ ಪ್ರಕರಣದ ತನಿಖೆಯನ್ನು ಮುಂದುವರಿಸಿದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

