ಜೆಮ್ಶೆಡ್ಪುರ: ಪೂರ್ವ ಸಿಂಗ್ಭೂಮ್ ಜಿಲ್ಲೆಯ ಬೋಡಮ್ ಪೊಲೀಸ್ ಠಾಣೆ ವ್ಯಾಪ್ತಿಯ ಆಸ್ಪತ್ರೆಯೊಂದರಲ್ಲಿ ನಿಯೋಜನೆಗೊಂಡಿದ್ದ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯೊಬ್ಬರು, ಐದು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಶನಿವಾರ ಗೋಳಾಡಿದ್ದಾರೆ.
ಆರ್ಥಿಕ ಸಂಕಷ್ಟ, ಅನಾರೋಗ್ಯದ ಸಮಸ್ಯೆ ಎದುರಿಸುತ್ತಿರುವ ಮಹಿಳಾ ಸಿಬ್ಬಂದಿ, ಜೆಮ್ಶೆಡ್ಪುರದಲ್ಲಿರುವ ಎಂಜಿಎಂ ಆಸ್ಪತ್ರೆ ಆವರಣದಲ್ಲಿ ಕಣ್ಣೀರಿಟ್ಟಿದ್ದಾರೆ.
ಅಧಿಕಾರಿಗಳು, ತಮಗೆ ಕೂಡಲೇ ಗೌರವ ಧನ ಪಾವತಿಸಬೇಕು. ಇಲ್ಲದಿದ್ದರೆ, ತಮ್ಮ ಪರಿಸ್ಥಿತಿ ಇನ್ನಷ್ಟು ಬಿಡಾಯಿಸುತ್ತದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.
'ನನ್ನ ಪಾಲಿನ ವೇತನ ನೀಡಿ; ಇಲ್ಲವೇ ಸಾಯುತ್ತೇನೆ' ಎಂದು ಅವರು ಅವಲತ್ತುಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮೂಲಗಳ ಪ್ರಕಾರ, ತಮಗೆ ಬಾಕಿ ಇರುವ ಗೌರವ ಧನ ಮುಂದಿನ ವಾರವೂ ಸಿಗುವುದಿಲ್ಲ ಎಂಬ ಸುದ್ದಿ ಸಿಬ್ಬಂದಿಯ ಕಿವಿಗೆ ಬಿದ್ದಿದೆ. ಇದರಿಂದ ಮನನೊಂದ ಅವರು, ತೀವ್ರವಾಗಿ ದುಃಖಿಸಿದ್ದಾರೆ. ನಿಯಂತ್ರಣ ಕಳೆದುಕೊಂಡು, ಜೋರಾಗಿ ಅಳಲಾರಂಭಿಸಿದ್ದಾರೆ. ಇದರಿಂದ ಅಕ್ಕಪಕ್ಕದಲ್ಲಿದ್ದವರು ಗೊಂದಲಕ್ಕೊಳಗಾಗಿದ್ದರು. ತಕ್ಷಣವೇ ಅಲ್ಲಿಗೆ ಬಂಧ ಆಸ್ಪತ್ರೆ ಸಿಬ್ಬಂದಿ ಮತ್ತು ಇತರ ಗೃಹರಕ್ಷಕ ಸಿಬ್ಬಂದಿ, ಸಮಾಧಾನ ಮಾಡಿದರು. ವಿಚಾರಣಾ ಕೇಂದ್ರಕ್ಕೆ ಕರೆದೊಯ್ದು ಧೈರ್ಯ ತುಂಬಿದರು ಎನ್ನಲಾಗಿದೆ.
ಮಹಿಳೆ ಆರು ತಿಂಗಳಿನಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ವೈದ್ಯರು ಶಸ್ತ್ರಚಿಕಿತ್ಸೆಗೊಳಗಾಗುವಂತೆ ತಿಳಿಸಿದ್ದಾರೆ. ಆದರೆ, ಆರ್ಥಿಕ ಸಂಕಷ್ಟದ ಕಾರಣ, ಚಿಕಿತ್ಸೆ ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ನಿರಂತರವಾಗಿ ವೇತನ ಪಾವತಿ ವಿಳಂಬವಾಗುತ್ತಿರುವುದು ಗೃಹರಕ್ಷಕ ದಳದ ಸಿಬ್ಬಂದಿಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ, ಮಹಿಳಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದ ಬಗ್ಗೆ ವರದಿಯಾಗಿತ್ತು.
ಈ ಪ್ರಕರಣಗಳು, ಸಕಾಲಕ್ಕೆ ವೇತನ ಪಾವತಿಸಬೇಕೆನ್ನುವ ಕೂಗನ್ನು ತೀವ್ರಗೊಳಿಸಿವೆ.

