ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು-ವಿಟ್ಲ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‌ವೊಂದರ ನಿರ್ವಾಹಕ ಕಾಲೇಜು ವಿದ್ಯಾರ್ಥಿನಿಯರ ಮುಂದೆ ಅಶ್ಲೀಲ ವರ್ತನೆ ತೋರಿ, ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲೂ) ತಿಳಿಸಿದೆ.
ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿದ ಎನ್‌ಸಿಡಬ್ಲೂ ಅಧ್ಯಕ್ಷೆ ವಿಜಯಾ ರಾಹತ್ಕರ್ ಅವರು, ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸುವಂತೆ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸೂಚಿಸಿದ್ದಾರೆ.
'ಈ ಘಟನೆಯು ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯ ವಿಷಯಗಳಲ್ಲಿ ಗಂಭೀರ ಲೋಪಗಳು ಇರುವುದನ್ನು ಬಹಿರಂಗಪಡಿಸಿದೆ' ಎಂದು ಆಯೋಗತಿಳಿಸಿದೆ.

