HEALTH TIPS

ನೈರ್ಮಲ್ಯದ ನೆಪದಲ್ಲಿ ಹೋಟೆಲ್ ಲೈಸೆನ್ಸ್ ಅಮಾನತು : ಬಾಂಬೆ ಹೈಕೋರ್ಟ್‌ನಿಂದ ಎಫ್‌ಡಿಎ ಆದೇಶ ರದ್ದು

ಮುಂಬೈ : 'ನಾವು ಭಾರತದಲ್ಲಿದ್ದೇವೆ' ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ವಾಸ್ತವಿಕ ನಿಲುವು ತಳೆಯುವಂತೆ ಮಹಾರಾಷ್ಟ್ರದ ಆಹಾರ ಮತ್ತು ಔಷಧಿ ಆಡಳಿತಕ್ಕೆ (ಎಫ್‌ಡಿಎ) ಸೂಚಿಸಿರುವ ಬಾಂಬೆ ಉಚ್ಚ ನ್ಯಾಯಾಲಯವು, ನವಿ ಮುಂಬೈನ ಚತುರ್ತಾರಾ ಹೋಟೆಲ್‌ನ ಪರವಾನಿಗೆಯನ್ನು ಅಮಾನತುಗೊಳಿಸಿದ್ದ ಅದರ ಆದೇಶವನ್ನು ರದ್ದುಗೊಳಿಸಿದೆ.


ಪ್ರಭಾರ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರ ಪೀಠವು, ಕೇವಲ ಎರಡು ಸಣ್ಣ ಕೀಟಗಳು ಕಂಡುಬಂದಿದ್ದನ್ನು ಆಧರಿಸಿ ಎಫ್‌ಡಿಎ ಈ ನಿರ್ಧಾರ ತೆಗೆದುಕೊಂಡಿದ್ದನ್ನು ಬುಧವಾರ ವಿಚಾರಣೆ ಸಂದರ್ಭದಲ್ಲಿ ಬೆಟ್ಟು ಮಾಡಿತು.

ನೈರ್ಮಲ್ಯ, ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹೋಟೆಲ್‌ನ ಒಟ್ಟಾರೆ ಪಾಲನಾ ವರದಿಯು ತೃಪ್ತಿಕರವಾಗಿರುವಾಗ, ಕೇವಲ ಎರಡು ಕೀಟಗಳು ಕಂಡುಬಂದಿವೆ ಎಂಬ ಒಂದೇ ಕಾರಣಕ್ಕಾಗಿ ಪರವಾನಿಗೆಯನ್ನು ಅಮಾನತಿನಲ್ಲಿಡುವುದು ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿತು. 'ನಾವು ಭಾರತದಲ್ಲಿದ್ದೇವೆ. ನಾವು ವಾಸ್ತವಿಕ ನಿಲುವನ್ನು ತೆಗೆದುಕೊಳ್ಳಬೇಕಾಗುತ್ತದೆ 'ಎಂದೂ ಅದು ತಿಳಿಸಿತು.

ಜುಲೈ 3ರಂದು ಎಫ್‌ಡಿಎ ಅಧಿಕಾರಿಗಳು 'ಪಾರ್ಕ್ ಇನ್ ಬೈ ರಾಡಿಸನ್' ಹೋಟೆಲ್‌ಗೆ ಭೇಟಿ ನೀಡಿ ದಿಢೀರ್ ತಪಾಸಣೆ ನಡೆಸಿದ ಮರುದಿನವೇ ನೈರ್ಮಲ್ಯ ಪಾಲನೆ, ಆಹಾರ ಶೇಖರಣೆ ಮತ್ತು ಆಹಾರ ನಿರ್ವಹಣಾ ಪದ್ಧತಿಗಳಲ್ಲಿ ಗಂಭೀರ ಲೋಪಗಳನ್ನು ಉಲ್ಲೇಖಿಸಿ, ಅದರ ಪರವಾನಿಗೆಯನ್ನು ರದ್ದುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೋಟೆಲ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಎಫ್‌ಡಿಎ ಪ್ರಕಾರ, ಹೋಟೆಲ್ ಶೇ.95ರಷ್ಟು ನಿಯಮಗಳ ಪಾಲನೆಯ ಅಂಕಗಳನ್ನು ಗಳಿಸಿತ್ತಾದರೂ, ಅಡುಗೆಮನೆಯಲ್ಲಿ ಕೀಟಗಳು ಕಂಡುಬಂದಿದ್ದರಿಂದ ಅಮಾನತು ಕ್ರಮ ಕೈಗೊಳ್ಳಲಾಗಿತ್ತು.

ಹೋಟೆಲ್ ಇತರ ನಿಯಮಗಳನ್ನು ಪಾಲಿಸುತ್ತಿರುವಾಗ, ಇಂತಹ ಒಂದು ಸಣ್ಣ ಲೋಪಕ್ಕಾಗಿ ಅಮಾನತುಗೊಳಿಸುವಂತಹ ತೀವ್ರ ಕ್ರಮ ಕೈಗೊಳ್ಳುವುದು ಎಷ್ಟು ಸರಿ ಎಂದು ಪೀಠವು ವಿಚಾರಣೆ ಸಂದರ್ಭದಲ್ಲಿ ಪ್ರಶ್ನಿಸಿತು.

'ಕಳೆದ ವಾರ ನಮ್ಮ ಡೆಸ್ಕ್ ಮೇಲೆಯೂ ಒಂದು ಜಿರಳೆ ಇತ್ತು. ಅಲ್ಲೊಂದು ನೊಣವೂ ಇದೆ ' ಎಂದು ಮುಖ್ಯ ನ್ಯಾಯಮೂರ್ತಿ ಅವರು ತಮಾಷೆಯಾಗಿ ಹೇಳಿದರು.

ಅಮಾನತು ಆದೇಶವನ್ನು ರದ್ದುಗೊಳಿಸಿದ ನ್ಯಾಯಾಲಯ, ಹೋಟೆಲ್‌ನ ಪರವಾನಗಿಯನ್ನು ತಕ್ಷಣವೇ ಮರುಸ್ಥಾಪಿಸುವಂತೆ ಮತ್ತು ಆಹಾರ ವ್ಯವಹಾರ ಚಟುವಟಿಕೆಗಳನ್ನು ಪುನರಾರಂಭಿಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತು.

ಆಹಾರ ಸುರಕ್ಷತಾ ನಿಯಮಗಳನ್ನು ಎಲ್ಲೆಡೆ ಸಮಾನವಾಗಿ ಜಾರಿಗೊಳಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ ಪೀಠವು, ಮಂತ್ರಾಲಯ ಮತ್ತು ಹೈಕೋರ್ಟ್ ಕ್ಯಾಂಟೀನ್ ಸೇರಿದಂತೆ ಎಲ್ಲ ಸರಕಾರಿ ಮತ್ತು ಅರೆ-ಸರಕಾರಿ ಹೋಟೆಲ್‌ಗಳ ತಪಾಸಣೆ ನಡೆಸಿ, ವೀಡಿಯೊ ರೆಕಾರ್ಡಿಂಗ್‌ಗಳೊಂದಿಗೆ ತಪಾಸಣೆಯ ವಿವರಗಳನ್ನು ಸಲ್ಲಿಸುವಂತೆ ಎಫ್‌ಡಿಎಗೆ ನಿರ್ದೇಶನ ನೀಡಿತು.

ಪ್ರಕರಣದ ಮುಂದಿನ ವಿಚಾರಣೆಯು ಜು.31ರಂದು ನಡೆಯಲಿದೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries