ಮ್ಯಾಡ್ರಿಡ್: ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಆತಿಥ್ಯದಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ.
ಫೈನಲ್ ಪಂದ್ಯವು ನ್ಯೂಯಾರ್ಕ್‌ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆಯಿತು. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಈ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ಪಡೆಯನ್ನು 1 - 0 ಗೋಲು ಅಂತರದಿಂದ ಬಗ್ಗು ಬಡಿದ ಸ್ಪೇನ್, ಈ ಟೂರ್ನಿಯಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
2024ರಲ್ಲಿ ನಡೆದ ಯೂರೋ ಕಪ್‌ನಲ್ಲಿಯೂ ಚಾಂಪಿಯನ್ ಎನಿಸಿರುವ ಸ್ಪೇನ್, ತಮ್ಮ ದೇಶದ ಅಭಿಮಾನಿಗಳಿಗೆ ಸತತ ಎರಡನೇ ಟ್ರೋಫಿಯನ್ನು ಸಮರ್ಪಿಸಿದೆ. ಇದು, ಸ್ಪೇನ್‌ನಾದ್ಯಂತ ಸಂಭ್ರಮದ ಅಲೆ ಎಬ್ಬಿಸಿದೆ.
ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಸೋಮವಾರ (ಜುಲೈ 21ರಂದು) ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ನಾಯಕ ರಾದ್ರಿ, ಯುವ ತಾರೆ ಲಮಿನ್ ಯಮಾಲ್ ಸೇರಿದಂತೆ ತಂಡದ ಆಟಗಾರರನ್ನು ಸ್ವಾಗತಿಸಲು, ಅವರನ್ನು ಕಣ್ತುಂಬಿಕೊಳ್ಳಲು ರಾಜಧಾನಿಯ ರಸ್ತೆಗಳಲ್ಲಿ ಲಕ್ಷಾಂತರ ಮಂದಿ ಜಮಾಯಿಸಿದ್ದರು.
ಸಿಬೆಲೆಸ್ ಸ್ಕ್ವೇರ್‌ನಲ್ಲಿ ಜನರು ಕಿಕ್ಕಿರಿದು ತುಂಬಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 10 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು ಎನ್ನಲಾಗುತ್ತಿದೆ.
ತಂಡದ ಕೆಂಪು ಬಣ್ಣದ ಜೆರ್ಸಿ ತೊಟ್ಟ ಅಭಿಮಾನಿಗಳು ಸಿಬೆಲೆಸ್ ಸ್ಕ್ವೇರ್ ಸುತ್ತಲಿನ ನಾಲ್ಕೂ ರಸ್ತೆಗಳಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಡ್ರೋನ್ ಕ್ಯಾಮೆರಾ ಕಣ್ಣಲ್ಲಿ 'ಕೆಂಪು ಸಮುದ್ರ'ದಂತೆ ಗೋಚರಿಸಿದೆ.
ಸ್ಪೇನ್ ಗೆಲುವು ಸಾಧಿಸಿದ್ದೇ ತಡ ಮ್ಯಾಡ್ರಿಡ್‌ನ ಬೀದಿ ಬೀದಿಗಳಲ್ಲಿ ಭಾನುವಾರ ರಾತ್ರಿಯಿಡೀ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ಅಲ್ಲಿನ ಕ್ಯಾಸ್ಟೆಲಾನಾ, ಮೇನ್ ಅವೆನ್ಯೂಗಳಲ್ಲಿ ಮದಿರೆಯ ಗಮ್ಮತ್ತಿನಲ್ಲಿ ಅಭಿಮಾನಿಗಳು ತೇಲಾಡಿದ್ದರು. ರಸ್ತೆ, ಕಾಲುಹಾದಿಗಳಲ್ಲಿ ಬಿಯರ್ ಖಾಲಿ ಕ್ಯಾನ್‌ಗಳು, ಗಾಜಿನ ಲೋಟಗಳು ಬಿದ್ದಿದ್ದವು. ಸ್ವಚ್ಛತಾ ಕರ್ಮಚಾರಿಗಳು ಸೋಮವಾರ ಬೆಳಿಗ್ಗೆ ಗುಡಿಸಿ ಹಾಕಿದ ತ್ಯಾಜ್ಯದ ರಾಶಿ ಬೆಟ್ಟದಷ್ಟಿತ್ತು.
ರಾತ್ರಿ ಇಡೀ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ದ ಹಲವು ಅಭಿಮಾನಿಗಳು ದಾರಿಯ ಇಕ್ಕೆಲಗಳಲ್ಲಿಯೇ ಮಲಗಿದ್ದ ದೃಶ್ಯಗಳೂ ಕಂಡು ಬಂದಿದ್ದವು.

