ಇಸ್ಲಾಮಾಬಾದ್: ಪಾಕಿಸ್ತಾನದ ವಾಯವ್ಯ ದಿಕ್ಕಿನಲ್ಲಿರುವ ಖೈಬರ್ ಪಖ್ತೂಂಖ್ವಾ ಪ್ರಾಂದಾದ್ಯಂತ ಮಂಗಳವಾರ ಸುರಿದ ಭಾರೀ ಮಳೆ ಹಾಗೂ ದಿಢೀರ್ ಪ್ರವಾಹದಿಂದಾಗಿ ಸಂಭವಿಸಿದ ವಿವಿಧ ದುರಂತಗಳಲ್ಲಿ ಐವರು ಮಕ್ಕಳು ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ.
ಮನೆಗಳ ಛಾವಣಿ, ಗೋಡೆಗಳ ಕುಸಿತದಿಂದಾಗಿ ಹಲವಾರು ಮಂದಿ ಮೃತಪಟ್ಟಿದ್ದಾರೆ ಇಲ್ಲವೇ ಗಾಯಗೊಂಡಿದ್ದಾರೆ.
ಇದೇ ವೇಳೆ ಕೆಲವರು ದಿಢೀರ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆಂದು ಪ್ರಾಂತೀಯ ವಿಪತ್ತು ಪ್ರಾಧಿಕಾರದ ವರದಿ ತಿಳಿಸಿದೆ. ಮೃತರಲ್ಲಿ ಆರು ಮಂದಿ ಪುರುಷರು, ಐವರು ಮಕ್ಕಳು ಹಾಗೂ ಓರ್ವ ಮಹಿಳೆ ಸೇರಿದ್ದಾರೆ. ಎಂಟು ಪುರುಷರು, ಇಬ್ಬರು ಮಹಿಳೆಯರು ಹಾಗೂ ಎಂಟು ಮಂದಿ ಮಕ್ಕಳು ಗಾಯಗೊಂಡಿದ್ದಾರೆ.
ಪ್ರವಾಹಪೀಡಿತ ಪೇಷಾವರ, ಖೈಬರ್, ಮರ್ದಾನ್, ಬುನೆರ್, ಬಜಾವುರ್, ಕೆಳ ಚಿತ್ರಾಲ್, ಅಬೊಟ್ಟಾಬಾದ್, ಮನಸೆಹ್ರಾ, ತೋರ್ಘರ್ ಹಾಗೂ ಕುರ‌್ರಂ ಜಿಲ್ಲೆಗಳಲ್ಲಿ ಈ ದುರ್ಘಟನೆಗಳು ನಡೆದಿರುವುದಾಗಿ ತಿಳಿಸಿದೆ.

