HEALTH TIPS

ಪ್ರಧಾನ್ ರಾಜೀನಾಮೆ: ಪ್ರಜಾಪ್ರಭುತ್ವ, ವಿದ್ಯಾರ್ಥಿಗಳಿಗೆ ಸಂದ ಜಯ ಎಂದ ವಿಪಕ್ಷಗಳು

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಖಂಡಿಸಿ ದೇಶದಾದ್ಯಂತ ನಡೆದ ತೀವ್ರ ಪ್ರತಿಭಟನೆಗಳ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿರುವ ರಾಜೀನಾಮೆಯು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. 


ವಿರೋಧ ಪಕ್ಷಗಳ ನಾಯಕರು, ವಿವಿಧ ರಾಜಕೀಯ ಪಕ್ಷಗಳು ಹಾಗೂ ಪ್ರತಿಭಟನಾನಿರತ ವಿದ್ಯಾರ್ಥಿ ನಾಯಕರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದು, ಇದನ್ನು ವಿದ್ಯಾರ್ಥಿಗಳು ಮತ್ತು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದ್ದಾರೆ.

ರಾಹುಲ್ ಗಾಂಧಿ...

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ರಾಜೀನಾಮೆಯು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪುನರ್‌ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇಟ್ಟ 'ದೊಡ್ಡ ಹೆಜ್ಜೆ' ಎಂದು ಕರೆದಿದ್ದಾರೆ. ಜೊತೆಗೆ, ನಿರಂತರವಾಗಿ ಹೋರಾಡಿದ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಅಭಿನಂದಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪುನರ್‌ನಿರ್ಮಿಸಲು ಪ್ರಮುಖ ಹೆಜ್ಜೆಯಾಗಿದೆ. ಪ್ರಜಾಪ್ರಭುತ್ವಕ್ಕಾಗಿ, ದೇಶದ ಭವಿಷ್ಯಕ್ಕಾಗಿ ಹಾಗೂ ಸಂವಿಧಾನದ ರಕ್ಷಣೆಗಾಗಿ ಬೀದಿಗಿಳಿದು ಹೋರಾಡಿದ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಯುವಕರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ: ಸೋನಮ್ ವಾಂಗ್ಚುಕ್

ಶಿಕ್ಷಣ ಸುಧಾರಣಾವಾದಿ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಕೂಡ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು, ಪ್ರಜಾಸತ್ತಾತ್ಮಕ ಪ್ರತಿಭಟನೆ ಮತ್ತು ಸಾರ್ವಜನಿಕ ಹೊಣೆಗಾರಿಕೆಗೆ ಸಿಕ್ಕ ಪ್ರಮುಖ ಜಯ ಎಂದು ಬಣ್ಣಿಸಿದ್ದಾರೆ.

ಇದು ಪ್ರಜಾಪ್ರಭುತ್ವದ ಜಯವಾಗಿದೆ. ಶಾಂತಿ, ತಾಳ್ಮೆ ಮತ್ತು ಸತತ ಪ್ರಯತ್ನಕ್ಕೆ ಸಿಕ್ಕ ಫಲ. ಭಯವನ್ನು ಮೆಟ್ಟಿ ನಿಂತು ಹೋರಾಡಿದ ಇಂದಿನ ಯುವ ಪೀಳಿಗೆ ಮತ್ತು ಪ್ರತಿಯೊಬ್ಬ ನಾಗರೀಕರಿಗೂ ಅಭಿನಂದನೆಗಳು. ಹೊಣೆಗಾರಿಕೆಯಿಂದ ಆರಂಭವಾಗಿರುವ ಪಯಣ ಸುಧಾರಣೆಯತ್ತ ಸಾಗಬೇಕಿದೆ ಎಂದು ವಾಂಗ್ಚುಕ್ ತಿಳಿಸಿದ್ದಾರೆ.

ಅಭೀಜಿತ್ ದಿಪ್ಕೆ...

ರಾಜೀನಾಮೆ ಸುದ್ದಿ ಹೊರಬಿದ್ದ ಬೆನ್ನಲ್ಲೇ ದೆಹಲಿಯ ಜಂತರ್ ಮಂತರ್‌ನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. 'ಕಾಕ್ರೋಚ್ ಜನತಾ ಪಾರ್ಟಿ' ಸಂಸ್ಥಾಪಕ ಅಭೀಜಿತ್ ದಿಪ್ಕೆ ಅವರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.

'ಮುನ್ನಾಭಾಯ್ ಎಂಬಿಬಿಎಸ್' ಸಿನಿಮಾದ ಪ್ರಸಿದ್ಧ ಡೈಲಾಗ್ ಉಲ್ಲೇಖಿಸಿದ ದಿಪ್ಕೆ, ಸುಬಹ್ ಹೋ ಗಯಿ ಮಾಮು (ಬೆಳಗಾಯಿತು ಮಾಮು) ಎಂದು ಉದ್ಗರಿಸಿದಾಗ ಪ್ರತಿಭಟನಾಕಾರರಿಂದ ಜೋರಾದ ಹರ್ಷೋದ್ಗಾರ ವ್ಯಕ್ತವಾಯಿತು.

ಶಾಂತಿಯುತ ಪ್ರತಿಭಟನೆ ಮಾಡಿದರೆ ಸರ್ಕಾರವನ್ನು ಮಂಡಿಯೂರುವಂತೆ ಮಾಡಬಹುದು ಎಂಬುದಕ್ಕೆ ಈ ರಾಜೀನಾಮೆಯೇ ಸಾಕ್ಷಿ. ನೆನಪಿಡಿ, ಕಾಕ್ರೋಚ್‌ಗಳ ಜೊತೆ ಆಟವಾಡಬೇಡಿ ಎಂದು ಬೆಂಬಲಿಗರಿಗೆ ಹೇಳಿದ ದಿಪ್ಕೆ, ಮೊಣಕಾಲುಗಳ ಮೇಲೆ ಕುಳಿತು ಸಂಭ್ರಮಿಸಿದರು. ಪ್ರತಿಭಟನಾಕಾರರು ಪರಸ್ಪರ ಅಪ್ಪಿಕೊಂಡು 'ಚಕ್ ದೇ! ಇಂಡಿಯಾ' ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದರು.

ಪ್ರಜಾಪ್ರಭುತ್ವದ ಉದಯವಾಗಿದೆ. ಇದು ಆರಂಭವಷ್ಟೇ, ಹೋರಾಟ ಇನ್ನೂ ಮುಗಿದಿಲ್ಲ ಎಂದರು.

ಪ್ರಿಯಾಂಕಾ ಗಾಂಧಿ...

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಸ್ವಾಗತಿಸಿದ್ದು, ದೇಶದ ಜನತೆಯು 'ತಮ್ಮ ದೇಶವನ್ನು ಮರಳಿ ತಮ್ಮದಾಗಿಸಿಕೊಳ್ಳಲು ತೊಡಗಿದ್ದಾರೆ' ಎಂದು ಹೇಳಿದ್ದಾರೆ.

ನನಗೆ ಹಲವು ಕಾರಣಗಳಿಂದ ಸಂತೋಷವಾಗಿದೆ. ಇದು ಭಾರತದ ಯುವಜನತೆಗೆ ಸಿಕ್ಕ ಜಯ. ಅಲ್ಲಿ ನೆರೆದು ಹೋರಾಡಿದ ಪ್ರತಿಯೊಬ್ಬರ ಬಗ್ಗೆಯೂ ನನಗೆ ಹೆಮ್ಮೆಯಿದೆ. ಮಹಾತ್ಮಾ ಗಾಂಧೀಜಿಯವರು ಕಲಿಸಿಕೊಟ್ಟ ಮಾರ್ಗದಲ್ಲೇ ಅವರು ಇದನ್ನು ಸಾಧಿಸಿ ತೋರಿಸಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಪ್ರಜಾಪ್ರಭುತ್ವದ ವಿಜಯ; ಶರದ್ ಪವಾರ್

ಎನ್‌ಸಿಪಿ (ಶರದ್) ನಾಯಕ ಶರದ್ ಪವಾರ್ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂತರ್‌ನಲ್ಲಿ ಯುವಜನತೆ ತೋರಿದ ಹೋರಾಟ ಮತ್ತು ದೃಢಸಂಕಲ್ಪ ನಿಜಕ್ಕೂ ಶ್ಲಾಘನೀಯ. ಪ್ರತಿಭಟನಾಕಾರರ ಬೇಡಿಕೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವರು ಕೊನೆಗೂ ರಾಜೀನಾಮೆ ನೀಡಿದ್ದಾರೆ. ಈ ಹೋರಾಟ ಪ್ರಜಾಪ್ರಭುತ್ವ ಶಕ್ತಿಯ ಸಂಕೇತವಾಗಿದೆ. ಇದು ದೇಶದ ಯುವಶಕ್ತಿಯ ಏಕತೆಗೆ ಸಿಕ್ಕ ಬಹುದೊಡ್ಡ ಜಯ ಎಂದು ಬಣ್ಣಿಸಿದ್ದಾರೆ.

ಮೋದಿಯವರ ಹಠಮಾರಿತನಕ್ಕೆ ಆದ ಸೋಲು; ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲು ದೇಶದಾದ್ಯಂತ ಬೀದಿಗಿಳಿದು ಧ್ವನಿ ಎತ್ತಿದ ನಮ್ಮ ಲಕ್ಷಾಂತರ ಯುವಕರ ಜಯವಿದು. ಇದು ಸತ್ಯಕ್ಕೆ ಸಿಕ್ಕ ಜಯ ಮತ್ತು ಮೋದಿಯವರ ಹಠಮಾರಿತನಕ್ಕೆ ಆದ ಸೋಲು. ಈ ಭ್ರಷ್ಟ ಸರ್ಕಾರದಿಂದಾಗಿ ತಮ್ಮ ರಕ್ತ ಸಂಬಂಧಿಗಳನ್ನು, ಮಕ್ಕಳನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಸಿಕ್ಕ ಜಯವಿದು ಎಂದು ಬರೆದುಕೊಂಡಿದ್ದಾರೆ.

ಅರವಿಂದ್ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದ (ಆಪ್) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಕೂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ಈ ರಾಜೀನಾಮೆಯನ್ನು ಪ್ರಜಾಪ್ರಭುತ್ವದ ಮಹಾನ್ ಜಯ ಎಂದಿದ್ದಾರೆ.

ಸಿದ್ಧರಾಮಯ್ಯ...

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ದೇಶದ ಎಚ್ಚೆತ್ತ ವಿದ್ಯಾರ್ಥಿ-ಯುವಜನರ ಗೆಲುವಾಗಿದೆ. ಅವರೆಲ್ಲರನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿಜಯವಾಗಿದೆ. ಬಿಸಿಲು-ಮಳೆ-ಹಸಿವು-ಆರೋಗ್ಯವನ್ನು ಲೆಕ್ಕಿಸದೆ ದೆಹಲಿಯಲ್ಲಿ ಬೀಡುಬಿಟ್ಟು ಪೊಲೀಸರ ದೌರ್ಜನ್ಯದಿಂದಲೂ ಪ್ರಚೋದನೆಗೆ ಒಳಗಾಗದೆ ಶಾಂತಿಯುತ ಹೋರಾಟವನ್ನು ನಡೆಸಿದ ಲಕ್ಷಾಂತರ ವಿದ್ಯಾರ್ಥಿ-ಯುವಜನರು ದೇಶದಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಸಿಜೆಪಿ ನಡುವೆ ಮೂರನೇ ಹಂತದ ಸಂಧಾನ ಸಭೆ ನಡೆಯುವುದಕ್ಕೂ ಕೆಲವೇ ಗಂಟೆಗಳ ಮೊದಲು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಪರಿಸ್ಥಿತಿಯನ್ನು ದೇಶ ವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ರಾಜೀನಾಮೆ ನೀಡಿರುವುದಾಗಿ ಪ್ರಧಾನ್‌ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries