ಡೈನೋಸಾರ್‌ಗಳ ಜನಪ್ರಿಯ ಹಾಲಿವುಡ್ ಚಲನಚಿತ್ರ ಸರಣಿಗಳಾದ 'ಜುರಾಸಿಕ್ ಪಾರ್ಕ್' ಹಾಗೂ 'ಜುರಾಸಿಕ್ ವರ್ಲ್ಡ್'ನಲ್ಲಿ ನಟಿಸಿದ್ದ, ನ್ಯೂಜಿಲೆಂಡ್ ನಟ ಸ್ಯಾಮ್ ನೀಲ್ (78) ಅವರು ಜುಲೈ 13ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಿಧನರಾಗಿದ್ದಾರೆ.
ನಟ ಸ್ಯಾಮ್ ನೀಲ್ ಅವರು ನಿಧನರಾಗಿರುವ ಸುದ್ದಿಯನ್ನು ಅವರ ಕುಟುಂಬವು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.
ಆದರೆ ಅವರ ಸಾವಿಗೆ ನಿಖರವಾದ ಕಾರಣವೇನು? ಎಂಬುದನ್ನು ಕುಟುಂಬವು ಸ್ಪಷ್ಟಪಡಿಸಿಲ್ಲ. ಜಾಗತಿಕ ಚಿತ್ರರಂಗವು ಸ್ಯಾಮ್ ನೀಲ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಅವರ ಕುಟುಂಬದವರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, 'ಸ್ಯಾಮ್ ನೀಲ್ ಅವರ ಮರಣವು ಅನಿರೀಕ್ಷಿತವಾಗಿದೆ. ಆದರೆ ಅವರು ಕ್ಯಾನ್ಸರ್‌ನಿಂದ ಮುಕ್ತರಾಗಿದ್ದರು. ಅವರನ್ನು ಇಷ್ಟು ದಿನ ಆರೈಕೆ ಮಾಡಿದ್ದಕ್ಕಾಗಿ ಸೇಂಟ್ ವಿನ್ಸೆಂಟ್ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗೆ ಕೃತಜ್ಞತೆ ಹೇಳಲು ಸ್ಯಾಮ್ ನೀಲ್ ಬಯಸುತ್ತಾರೆ' ಎಂದು ಬರೆದಿದ್ದಾರೆ.
'ಸ್ಯಾಮ್ ನೀಲ್ ಅವರು ತಮ್ಮ ಆರೋಗ್ಯದ ಕುರಿತು ಹಲವು ಬಾರಿ ಧೈರ್ಯದಿಂದ ಮಾತನಾಡಿದ್ದರು. ಜೀವನದ ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಕಳೆಯಲು ಪ್ರಯತ್ನಿಸುತ್ತಿದ್ದರು ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ.
ವರದಿಗಳ ಪ್ರಕಾರ 2022ರಲ್ಲಿ ಸ್ಯಾಮ್ ನೀಲ್ ಅಪರೂಪದ ರಕ್ತದ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಬಳಿಕ ಅವರು ಚಿಕಿತ್ಸೆ ಪಡೆಯುತ್ತಿರುವುದನ್ನು 2023ರಲ್ಲಿ ಬಹಿರಂಗಪಡಿಲಾಗಿತ್ತು. ಆದರೆ ಕಳೆದ ಏಪ್ರಿಲ್‌ನಲ್ಲಿ ಅವರು ಕ್ಯಾನ್ಸರ್‌ನಿಂದ ಗುಣಮುಖರಾಗಿರುವುದಾಗಿ ಹೇಳಲಾಗಿತ್ತು.
1977ರಲ್ಲಿ ಬಿಡುಗಡೆಯಾದ 'ಸ್ಲೀಪಿಂಗ್ ಡಾಗ್ಸ್' ಸಿನಿಮಾ ಮೂಲಕ ದೊಡ್ಡ ಯಶಸ್ಸು ಗಳಿಸಿದ್ದರು. ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶನದಲ್ಲಿ ಮೂಡಿಬಂದ 'ಜುರಾಸಿಕ್ ಪಾರ್ಕ್' ಸರಣಿ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡರು.

