HEALTH TIPS

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ: ಹೊರ್ಮುಜ್ ಜಲಸಂಧಿ ಮತ್ತೆ ಬಂದ್

 ದುಬೈ (ಎಪಿ/ ಎಎಫ್‌ಪಿ): ಹೊರ್ಮುಜ್ ಜಲಸಂಧಿ ದಾಟುತ್ತಿದ್ದ ಹಡಗಿನ ಮೇಲೆ ಇರಾನ್‌ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಸೇನೆಯು ಭಾನುವಾರ ಬೆಳಿಗ್ಗೆ ಇರಾನ್‌ನ ಹಲವು ಸ್ಥಳಗಳ ಮೇಲೆ ಭಾರಿ ವಾಯುದಾಳಿ ನಡೆಸಿದೆ.


ಈ ದಾಳಿಗೆ ಇರಾನ್‌ ಸೇನೆ ತಿರುಗೇಟು ನೀಡಿದ್ದು, ಬಹರೇನ್, ಕುವೈತ್‌, ಕತಾರ್‌ ಮತ್ತು ಒಮಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳತ್ತ ಕ್ಷಿಪಣಿಗಳನ್ನು ಹಾರಿಸಿದೆ.

ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣ ಬಂದ್‌ ಮಾಡಿರುವುದಾಗಿ ಘೋಷಿಸಿದೆ.

'ಈ ಘಟನೆಯ (ಅಮೆರಿಕದ ದಾಳಿ) ನಂತರ, ಮುಂದಿನ ಸೂಚನೆ ಬರುವವರೆಗೆ ಮತ್ತು ಈ ಪ್ರದೇಶದಲ್ಲಿ ಅಮೆರಿಕದ ಹಸ್ತಕ್ಷೇಪ ಕೊನೆಗೊಳ್ಳುವವರೆಗೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲಾಗುತ್ತದೆ' ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ ಕೋರ್‌ (ಐಆರ್‌ಜಿಸಿ) ತಿಳಿಸಿದೆ.

'ಕೆಲವು ಹಡಗುಗಳು ನಮ್ಮ ಎಚ್ಚರಿಕೆಯನ್ನು ನಿರ್ಲಕ್ಷಿಸಿದವು. ನಾವು ಅನುಮತಿ ನೀಡಿದ ಮಾರ್ಗದಲ್ಲೇ ಸಂಚರಿಸುವಂತೆ ಅವುಗಳಿಗೆ ಸೂಚಿಸಿದೆವು. ಎಚ್ಚರಿಕೆ ನೀಡಲು ಹಡಗೊಂದರ ಮೇಲೆ ದಾಳಿ ನಡೆಸಲಾಯಿತು' ಎಂದು ಹೇಳಿದೆ.

ಆದರೆ, ಹೊರ್ಮುಜ್‌ ಜಲಸಂಧಿ ಎಲ್ಲಾ ನೌಕೆಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ. 'ಹೊರ್ಮುಜ್‌ನಲ್ಲಿ ನೌಕೆಗಳ ಸುಗಮ ಸಂಚಾರ ಖಚಿತಪಡಿಸಲು ಅಮೆರಿಕದ ಸೇನಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಜಲಸಂಧಿಯ ಮೇಲೆ ಇರಾನ್‌ಗೆ ಯಾವುದೇ ನಿಯಂತ್ರಣ ಇಲ್ಲ' ಎಂದು ಸೇನೆಯ ಸೆಂಟ್ರಲ್‌ ಕಮಾಂಡ್‌ ಹೇಳಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡಾ 'ಹಡಗುಗಳ ಸಂಚಾರಕ್ಕೆ ಹೊರ್ಮುಜ್‌ ಮುಕ್ತವಾಗಿದೆ' ಎಂದಿದ್ದಾರೆ.

140 ಗುರಿಗಳು ನಾಶ: ಬುಧವಾರ ಮತ್ತು ಗುರುವಾರ ಇರಾನ್‌ ಮೇಲೆ ದಾಳಿ ನಡೆಸಿದ್ದ ಅಮೆರಿಕ, ಭಾನುವಾರ ಮತ್ತೊಂದು ಸುತ್ತಿನ ದಾಳಿ ನಡೆಸಿತು. ಈ ಬೆಳವಣಿಗೆಯಿಂದ ಪಶ್ಚಿಮ ಏಷ್ಯಾ ಯುದ್ಧಕ್ಕೆ ಶಾಶ್ವತ ಅಂತ್ಯಹಾಡಲು ನಡೆಯುತ್ತಿರುವ ಪ್ರಯತ್ನಗಳಿಗೆ ಹಿನ್ನಡೆ ಉಂಟಾಗಿದೆ.

ದಾಳಿಯಲ್ಲಿ ಇರಾನ್‌ನ ಸುಮಾರು 140 ಗುರಿಗಳನ್ನು ನಾಶಪಡಿಸಲಾಯಿತು ಎಂದು ಸೆಂಟ್ರಲ್‌ ಕಮಾಂಡ್‌ ಹೇಳಿದೆ. ಈ ಹಿಂದಿನ ಎರಡು ಸುತ್ತುಗಳ ದಾಳಿಗೆ ಹೋಲಿಸಿದರೆ, ಭಾನುವಾರ ದೊಡ್ಡ ಪ್ರಮಾಣದ ದಾಳಿ ನಡೆದಿದೆ.

'ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ಕೇಂದ್ರಗಳು, ಶಸ್ತ್ರಾಸ್ತ್ರ ಸಂಗ್ರಹಾಗಾರ, ಸಂವಹನ ಉಪಕರಣಗಳು ಮತ್ತು ಇತರ ತಾಣಗಳ ಮೇಲೆ ದಾಳಿ ನಡೆಸಲಾಯಿತು. ಈ ದಾಳಿಗಳು ಹಡಗುಗಳ ಸಂಚಾರಕ್ಕೆ ಬೆದರಿಕೆ ಹಾಕುವ ಇರಾನ್‌ನ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ' ಎಂದು ಅಮೆರಿಕ ಸೇನೆ ತಿಳಿಸಿದೆ.

ಬಂದರ್‌ ಅಬ್ಬಾಸ್, ಸಿರಿಕ್, ಜಸ್ಕ್‌, ಕ್ವೆಶ್ಮ್‌ ದ್ವೀಪ ಮತ್ತು ಇರಾಕ್‌ ಜತೆ ಗಡಿ ಹಂಚಿಕೊಂಡಿರುವ ಖುಜೆಸ್ತಾನ್‌ ಪ್ರಾಂತ್ಯದಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ.

ಹಲವೆಡೆ ಮೊಳಗಿದ ಸೈರನ್: ಇರಾನ್‌ ಕ್ಷಿಪಣಿ ದಾಳಿ ಆರಂಭಿಸಿದ ಬೆನ್ನಲ್ಲೇ ಕೊಲ್ಲಿಯ ಹಲವು ರಾಷ್ಟ್ರಗಳಲ್ಲಿ ಎಚ್ಚರಿಕೆಯ ಸೈರನ್‌ ಮೊಳಗಿದವು. ಇರಾನ್‌ ಹಾರಿಸಿದ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಕತಾರ್ ಸೇನೆ ತಿಳಿಸಿದೆ. ಬಹರೇನ್‌ ಮತ್ತು ಯುಎಇಯ ಹಲವು ನಗರಗಳಲ್ಲೂ ವಾಯುದಾಳಿಯ ಎಚ್ಚರಿಕೆ ನೀಡುವ ಸೈರನ್‌ಗಳು ಮೊಳಗಿದವು.

'ಯಾವುದೇ ಕ್ಷಿಪಣಿ ನಮ್ಮ ಗಡಿಯೊಳಗೆ ಪ್ರವೇಶಿಸಿಲ್ಲ' ಎಂದು ಯುಎಇ ಸರ್ಕಾರ ತಿಳಿಸಿದೆ. ಮೇ ತಿಂಗಳ ಬಳಿಕ ಇರಾನ್‌, ಯುಎಇ ಮೇಲೆ ದಾಳಿ ಮಾಡಿಲ್ಲ. ಆಗ್ನೇಯ ಒಮಾನ್‌ನ ತಾಣವೊಂದಕ್ಕೆ ಡ್ರೋನ್‌ ಅಪ್ಪಳಿಸಿರುವುದಾಗಿ ಒಮಾನ್‌ನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಮಾಡಿದೆ.

'ಒಮಾನ್‌ನ ದುಖ್ಮ್‌ ಬಂದರಿನಲ್ಲಿರುವ ಅಮೆರಿಕದ ನೌಕಾ ಪಡೆಗಳ ಕೇಂದ್ರಗಳು ಮತ್ತು ವಿಮಾನವಾಹಕ ನೌಕೆಗಳಿಗೆ ಇಂಧನ ತುಂಬಿಸುವ ಸೌಲಭ್ಯಗಳನ್ನು ನಾಶಪಡಿಸಲಾಗಿದೆ' ಎಂದು ಐಆರ್‌ಜಿಸಿ ತಿಳಿಸಿದೆ.

ಅಮೆರಿಕದ ದಾಳಿಯಿಂದ ತನ್ನ ಒಬ್ಬ ಯೋಧ ಬಲಿಯಾಗಿರುವುದಾಗಿ ಇರಾನ್‌ ಹೇಳಿದೆ.

ಕತಾರ್‌ನಲ್ಲಿ ಕ್ಷಿಪಣಿಯ ಅವಶೇಷ ಬಿದ್ದು ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ವಿದೇಶಾಂಗ ಸಚಿವರು ದೂರವಾಣಿ ಸಂಭಾಷಣೆ ನಡೆಸಿದ್ದು,ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. 


'ಭಾರಿ ಪೆಟ್ಟು ಕೊಟ್ಟೆವು'

ಅಮರಿಕ ಮತ್ತು ಇರಾನ್‌ ಶನಿವಾರ ಒಪ್ಪಂದಕ್ಕೆ ಬರುವ ಹಂತದಲ್ಲಿದ್ದವು. ಆದರೆ ಇದ್ದಕ್ಕಿದ್ದಂತೆ ಎರಡು ಗಂಟೆಗಳ ಬಳಿಕ ಅವರು ಡ್ರೋನ್‌ ಮೂಲಕ ಹಡಗಿನ ಮೇಲೆ ದಾಳಿ ನಡೆಸಿದರು. ಅದಕ್ಕೆ ವಾಯುದಾಳಿ ನಡೆಸಿ ಭಾರಿ ಪೆಟ್ಟು ಕೊಟ್ಟಿದ್ದೇವೆ. ಅವರಲ್ಲಿ ಏನೋ ಸಮಸ್ಯೆ ಇದೆ.


-ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries