ಕಠ್ಮಂಡು: : ನೇಪಾಳದಲ್ಲಿ ಆಡಳಿತದ ವಿರುದ್ಧ ಜೆನ್-ಝೀಗಳು ನಡೆಸಿದ ಹೋರಾಟದ ಅಲೆಯಲ್ಲಿ ಅಧಿಕಾರಕ್ಕೇರಿದವರು ಬಾಲೇಂದ್ರ ಶಾ. ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದು ಈಗಷ್ಟೇ ನೂರು ದಿನಗಳನ್ನು ಪೂರೈಸಿರುವ ಅವರಿಗೆ, ಅದೇ ಜೆನ್-ಝೀಗಳು ತಲೆನೋವಾಗಿ ಪರಿಣಮಿಸಿದ್ದಾರೆ.
ರಾಷ್ಟ್ರ ರಾಜಧಾನಿ ಕಠ್ಮಂಡುವಿನಲ್ಲಿ ಸರ್ಕಾರದ ಭೂಮಿಯನ್ನು ಅತಿಕ್ರಮಿಸಿರುವ ಕೊಳಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸದೆ, ತೆರವುಗೊಳಿಸಲು ಮುಂದಾಗಿರುವುದು ಇದೀಗ ಜೆನ್-ಝೀಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಈ ಕ್ರಮವನ್ನು ಖಂಡಿಸಿ, ನೂರಾರು ಮಂದಿ ಕಠ್ಮಂಡುವಿನಲ್ಲಿ ಭಾನುವಾರ (ಜುಲೈ 12) ಪ್ರತಿಭಟನೆಗೆ ಇಳಿದಿದ್ದಾರೆ.
ಜೆನ್-ಝೀಗಳ ಹೀರೋ
2012ರವರೆಗೂ ಅಷ್ಟೇನೂ ಪರಿಚಿತರಲ್ಲದ ಬಾಲೇಂದ್ರ, ಮುನ್ನೆಲೆಗೆ ಬಂದದ್ದು ಆ ನಂತರವೇ. ಹಾಡು ಬರೆದು, ಸಂಗೀತ ಸಂಯೋಜಿಸಿ ತಾವೇ ಹಾಡುತ್ತಿದ್ದ ಅವರು, 2012ರಲ್ಲಿ ತಮ್ಮ ಮೊದಲ ಹಿಪ್ ಹಾಪ್ ಹಾಡು ಬಿಡುಗಡೆ ಮಾಡಿದ್ದರು. 2013ರಲ್ಲಿ ಯೂಟ್ಯೂಬ್ ರ‍್ಯಾಪ್ ಸರಣಿಯಲ್ಲಿ ಪಾಲ್ಗೊಂಡು ಹೆಸರು ಮಾಡಿದ್ದರು.
ಸಾಮಾಜಿಕ ಸಂಗತಿಗಳು, ಭ್ರಷ್ಟಾಚಾರ, ಅಸಮಾನತೆ, ನಗರ ಜೀವನದ ಬಗ್ಗೆ ಅನೇಕ ಹಾಡುಗಳನ್ನು ಬರೆದು, ಹಾಡಿ, ಪ್ರಸ್ತುತಪಡಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಅವರ 'ಸಡಕ್ ಬಾಲಕ್', 'ಬಲಿದಾನ' ಮುಂತಾದ ಹಾಡುಗಳು ಯುವಜನರಲ್ಲಿ ಸಂಚಲನ ಸೃಷ್ಟಿಸಿದ್ದವು.
ನಂತರ ರಾಜಕೀಯದತ್ತ ಚಿತ್ತ ಹರಿಸಿದ ಬಾಲೇಂದ್ರ, ನೇಪಾಳದಲ್ಲಿ ಪರ್ಯಾಯ ರಾಜಕಾರಣದ ಪ್ರಯತ್ನ ಆರಂಭಿಸಿದರು. ಅಕಾಲಿಕವಾಗಿ ಸಾವಿಗೀಡಾದ ಉಜ್ವಲ್ ಥಾಪಾ ಅವರ ಬೆಂಬಲಿಗರ ಬಲದೊಂದಿಗೆ 2022ರಲ್ಲಿ ಕಠ್ಮಂಡುವಿನ ಮೇಯರ್ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅಚ್ಚರಿ ಎಂಬಂತೆ ಚುನಾಯಿತರಾಗಿದ್ದರು.
ನೇರ ಆಡಳಿತ ಶೈಲಿ ಮತ್ತು ನಿರ್ಭೀತ ಮಾತಿನ ಮೂಲಕ ಬಾಲೇಂದ್ರ ಜನಪ್ರಿಯತೆ ಹೆಚ್ಚಿಸಿಕೊಂಡರು. ಕಾನೂನಿನ ಕಟ್ಟುಪಾಡುಗಳನ್ನು ಬದಿಗಿಟ್ಟು ತೋಚಿದ್ದನ್ನು ತ್ವರಿತವಾಗಿ ಮಾಡಿ ಮುಗಿಸುವ ಅವರ ರೀತಿ, ಬದಲಾವಣೆಗಾಗಿ ತುಡಿಯುತ್ತಿದ್ದ ಯುವಕರಿಗೆ ಇಷ್ಟವಾಗಿತ್ತು.
ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಜನವಿರೋಧಿ ನೀತಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆ ಮೇಲಿನ ನಿರ್ಬಂಧ ಖಂಡಿಸಿ ಕಳೆದ ವರ್ಷ ಭಾರಿ ಪ್ರತಿಭಟನೆಗಳು ನಡೆದಿದ್ದವು.
ಕಮ್ಯುನಿಸ್ಟ್ ಪಾರ್ಟಿ (ಸಿಪಿಎನ್ ಯುಎಂಎಲ್) ದುರಾಡಳಿತದಿಂದ ಬೇಸತ್ತಿದ್ದ, ಬಡತನದಂತಹ ಸಮಸ್ಯೆಗಳಿಂದ ಬಸವಳಿದಿದ್ದ ನೇಪಾಳ ಜೆನ್ ಝೀಗಳಿಗೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದ, ವ್ಯಾಪಾರಿ ಹಿತಾಸಕ್ತಿಯೂ ಇಲ್ಲದ ಬಾಲೇಂದ್ರ ಬಗ್ಗೆ ಸಹಜವಾಗಿಯೇ ಒಲವು ಮೂಡಿತು. ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದ ಜೆನ್ ಝೀಗಳು, ಕೆ.ಪಿ. ಶರ್ಮಾ ಓಲಿ ಅವರ ಸರ್ಕಾರವನ್ನು ಪತನಗೊಳಿಸಿದ್ದರು. ಬಾಲೇಂದ್ರ ಅವರೇ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಬೇಕು ಎನ್ನುವುದು ಆಗ ಪ್ರತಿಭಟನಕಾರರ ಒತ್ತಾಯವಾಗಿತ್ತು. ಆಗ ಅದನ್ನು ನಿರಾಕರಿಸಿದರಾದರೂ, ಅವರ ಕಣ್ಣು ಪ್ರಧಾನಿ ಪಟ್ಟದ ಮೇಲೆ ಇದ್ದೇ ಇತ್ತು.
ಜನವರಿಯಲ್ಲಿ ಮೇಯರ್ ಹುದ್ದೆಗೆ ರಾಜೀನಾಮೆ ನೀಡಿ, ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಸೇರಿದರು. ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಬದಲಾವಣೆಗಾಗಿ ತಹತಹಿಸುತ್ತಿದ್ದ ನೇಪಾಳದ ಜೆನ್ ಝೀಗಳ ಕೃಪಾಕಟಾಕ್ಷದಿಂದ ಆರ್‌ಎಸ್‌ಪಿಗೆ ಭಾರಿ ಬಹುಮತವೂ ದೊರೆಯಿತು. ಬಾಲೇಂದ್ರ 37ನೇ ವಯಸ್ಸಿನಲ್ಲೇ ನೇಪಾಳದ 47ನೇ ಪ್ರಧಾನಿಯಾದರು. ಆ ಮೂಲಕ ದೇಶದ ಪ್ರಧಾನಿಯಾದ ಅತಿ ಕಿರಿಯ ಎನಿಸಿಕೊಂಡರು.
ಮತ್ತದೇ ಕಿಡಿ
ಕಠ್ಮಂಡುವಿನಲ್ಲಿ ಅತಿಕ್ರಮಣ ತೆರವುಗೊಳಿಸಿ, ಅಲ್ಲಿನ ನಿವಾಸಿಗಳನ್ನು ತಾತ್ಕಾಲಿಕ ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲು ಸರ್ಕಾರ ಮುಂದಾಗಿದೆ. ಇದು ಜೆನ್-ಝಿಗಳಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ.
'ಜಾಯಿಂಟ್ ನ್ಯಾಷನಲ್ ಸ್ಕ್ವಾಟರ್ಸ್ ಫ್ರಂಟ್' ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೂರಾರು ಮಂದಿ, ನಿರಾಶ್ರಿತರ ಅಮಾನವೀಯ ಪರಿಸ್ಥಿತಿಯನ್ನು ಎತ್ತಿತೋರಿಸಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. 'ಬಡವರ ಮೇಲಿನ ದೌರ್ಜನ್ಯ ಕೊನೆಗೊಳಿಸಿ', 'ಮಾನವ ಹಕ್ಕುಗಳನ್ನು ಗೌರವಿಸಿ', 'ಅಕ್ರಮ ಬಂಧನ ನಿಲ್ಲಿಸಿ', 'ಕೊಳಗೇರಿ ನಿವಾಸಿಗಳಿಗೆ ಆಶ್ರಯ ಕಲ್ಪಿಸಿ' ಎಂಬಿತ್ಯಾದಿ ಘೋಷಣಾ ಫಲಕಗಳು ರಾರಾಜಿಸಿದವು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಲವು ಕಾರ್ಯಕರ್ತರು, ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬಂಧನಕ್ಕೊಳಗಾಗಿರುವ ಜೆನ್-ಝೀಗಳನ್ನು ಬೆಂಬಲಿಸಿ ಬೀದಿಗಿಳಿದ ಹತ್ತಕ್ಕೂ ಹೆಚ್ಚು ಮಂದಿಯನ್ನು ಕೋಶಿ ಪ್ರಾಂತ್ಯದಲ್ಲಿ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.
ನಿಲ್ಲಿಸಿದ್ದ ಸ್ಕೂಟರ್‌ಗೆ ಪೊಲೀಸರು ವ್ಹೀಲ್ ಲಾಕ್ ಮಾಡಿದ್ದಾರೆ ಎಂದು ಆರೋಪಿಸಿ 25 ವರ್ಷದ ಯುವಕನೊಬ್ಬ ಈ ತಿಂಗಳ ಆರಂಭದಲ್ಲಿ ಬೆಂಕಿ ಹಚ್ಚಿಕೊಂಡಿದ್ದ. ಆ ಘಟನೆಯೂ ಸದ್ಯದ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಇಂತಹ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿರುವುದನ್ನು 'ನೇಪಾಳಿ ಕಾಂಗ್ರೆಸ್' ಅಧ್ಯಕ್ಷ ಗಗನ್ ಕುಮಾರ್ ಥಾಪಾ ಟೀಕಿಸಿದ್ದಾರೆ. ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕಠ್ಮಂಡು ನೆರೆಹೊರೆಯ ಹಲವು ಪ್ರದೇಶಗಳ ಮತ್ತು ನೇಪಾಳದ ಇತರ ಭಾಗಗಳಲ್ಲಿ ಏಪ್ರಿಲ್‌ನಿಂದಲೇ ತೆರವು ಕಾರ್ಯಾಚರಣೆ ಆರಂಭವಾಗಿದೆ. ಈವರೆಗೆ ಸುಮಾರು 2,500 ಕುಟುಂಬಗಳು ನಿರಾಶ್ರಿತವಾಗಿವೆ. ಅವುಗಳಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ಕಠ್ಮಂಡುವಿನಲ್ಲಿ ತೆರೆಯಲಾಗಿರುವ ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿವೆ. ಅಲ್ಲಿರುವ ಸಾಕಷ್ಟು ಮಂದಿ, ಬೇರೆಲ್ಲಾದರೂ ಹೋಗಲು ತಮಗೆ ಜಾಗವಿಲ್ಲ ಎಂದು ಹೇಳಿ, ಕೇಂದ್ರವನ್ನು ತೊರೆಯಲು ನಿರಾಕರಿಸಿದ್ದಾರೆ.

