ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ದಾಳಿ-ಪ್ರತಿದಾಳಿಗಳು ಮುಂದುವರಿದಿದ್ದು, ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣ ಬಂದ್ ಮಾಡಿರುವುದಾಗಿ ಇರಾನ್ ಭಾನುವಾರ ಘೋಷಿಸಿದೆ. ಆದರೆ ಎನ್‌ಬಿಸಿ ವಾಹಿನಿಯ 'ಮೀಟ್ ದಿ ಪ್ರೆಸ್' ಸಂದರ್ಶನದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ವಾಣಿಜ್ಯ ಹಡಗುಗಳ ಸಂಚಾರಕ್ಕೆ ಹೊರ್ಮುಜ್ ಜಲಸಂಧಿ ಮುಕ್ತವಾಗಿದೆ' ಎಂದು ಘೋಷಿಸಿದ್ದಾರೆ.
ಯುದ್ಧ ಆರಂಭವಾಗುವ ಮುನ್ನ ಈ ಜಲಸಂಧಿಯಲ್ಲಿ ಮುಕ್ತ ಸಂಚಾರವಿತ್ತು. ಆದರೆ ಈಗ ಇದರ ನಿಯಂತ್ರಣ ತನ್ನ ಕೈಯಲ್ಲಿದೆ ಎಂದು ಇರಾನ್ ವಾದಿಸುತ್ತಿದ್ದರೆ, ಅದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಅಮೆರಿಕ ಪಟ್ಟು ಹಿಡಿದಿದೆ.
'ಈ ಜಲಮಾರ್ಗದ ನಿಯಂತ್ರಣ ಇರಾನ್‌ಗೆ ದೊಡ್ಡ ಶಕ್ತಿಯಾಗಿದ್ದು, ಇದು ಹತ್ತಾರು ಅಣುಬಾಂಬ್‌ಗಳಿಗಿಂತಲೂ ಹೆಚ್ಚು ಮುಖ್ಯ' ಎಂದು ಇರಾನ್‌ನ ಪರಮೋಚ್ಚ ನಾಯಕನ ಸಲಹೆಗಾರರೊಬ್ಬರು ಹೇಳಿದ್ದಾರೆ. ಈ ಬಗ್ಗೆ 'ಎಎಫ್‌ಪಿ' ವರದಿ ಮಾಡಿದೆ.
ಮತ್ತೊಂದೆಡೆ, ಹೊರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಾಗಿ ಇರಾನ್ ಹೇಳಿಕೊಂಡಿದ್ದರೂ, ಹಡಗುಗಳ ಸಂಚಾರ ಎಂದಿನಂತೆ ಸಾಗುತ್ತಿದೆ ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಭಾನುವಾರ ಹೇಳಿದೆ.
'ಹೊರ್ಮುಜ್ ಜಲಸಂಧಿ ಇರಾನ್ ನಿಯಂತ್ರಣದಲ್ಲಿಲ್ಲ, ಸಂಚಾರ ಮುಕ್ತವಾಗಿದೆ' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಸೆಂಟ್ರಲ್ ಕಮಾಂಡ್, ಹಡಗುಗಳ ಸುಗಮ ಸಂಚಾರ ಖಚಿತಪಡಿಸಲು ಅಮೆರಿಕದ ಸೇನಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದೂ ತಿಳಿಸಿದೆ.
ಆದರೆ, ಮುಂದಿನ ಸೂಚನೆ ಬರುವವರೆಗೆ ಮತ್ತು ಈ ಪ್ರದೇಶದಲ್ಲಿ ಅಮೆರಿಕದ ಹಸ್ತಕ್ಷೇಪ ಕೊನೆಗೊಳ್ಳುವವರೆಗೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲಾಗುತ್ತದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್‌ಜಿಸಿ) ತಿಳಿಸಿದೆ. ಜತೆಗೆ ನಿಯಮ ಉಲ್ಲಂಘಿಸಿದ ಎರಡು ಹಡಗುಗಳನ್ನು ತಾವು ಗುರಿಯಾಗಿಸಿಕೊಂಡಿರುವುದಾಗಿ ಇರಾನ್ ತಿಳಿಸಿದೆ.
ಇದಕ್ಕೆ ಪ್ರತಿಯಾಗಿ ಇರಾನ್‌ನ ಸುಮಾರು 140 ಗುರಿಗಳನ್ನು ನಾಶಪಡಿಸಲಾಯಿತು ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ.
ಈ ಬಗ್ಗೆ 'ಸಿಎನ್‌ಎನ್' ಜೊತೆ ಮಾತನಾಡಿದ ಟ್ರಂಪ್, ನಾವು ನಿನ್ನೆ ರಾತ್ರಿ ಅವರ ಮೇಲೆ ಭೀಕರ ದಾಳಿ ನಡೆಸಿದ್ದೇವೆ" ಎಂದಿದ್ದಾರೆ. ಮುಂದುವರಿದು, ಅಮೆರಿಕ ಮತ್ತು ಇರಾನ್ ಶನಿವಾರ ಒಪ್ಪಂದಕ್ಕೆ ಬರುವ ಹಂತದಲ್ಲಿದ್ದವು. ಆದರೆ ಇದ್ದಕ್ಕಿದ್ದಂತೆ, ಎರಡು ಗಂಟೆಗಳ ಬಳಿಕ ಅವರು ಡ್ರೋನ್ ಮೂಲಕ ಹಡಗಿನ ಮೇಲೆ ದಾಳಿ ನಡೆಸಿದರು. ಅದಕ್ಕೆ ವಾಯುದಾಳಿ ನಡೆಸಿ ಭಾರಿ ಪೆಟ್ಟು ಕೊಟ್ಟಿದ್ದೇವೆ ಎಂದಿದ್ದಾರೆ.

