ಟೆಹರಾನ್: ರಾಜಧಾನಿಯಲ್ಲಿ ನಡೆಯುತ್ತಿರುವ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಸಾವಿರಾರು ಜನರು, ಉನ್ನತಾಧಿಕಾರಿಗಳು ಭಾನುವಾರ ಭಾಗಿಯಾದರು. ಈ ವೇಳೆ, ದುಃಖಿತರು 'ಪ್ರತೀಕಾರ, ಪ್ರತೀಕಾರ' ಎಂಬ ಘೋಷಣೆ ಮೊಳಗಿಸಿದರು.
ಇರಾನ್ ಹಾಗೂ ಅಮೆರಿಕ ಸೇನಾ ಪಡೆಗಳು ಫೆಬ್ರುವರಿ 28ರಂದು ನಡೆಸಿದ ದಾಳಿ ವೇಳೆ ಹತ್ಯೆಯಾಗಿರುವ ಅಲಿ ಖಮೇನಿ ಅವರ ಅಂತಿಮ ಸಂಸ್ಕಾರವನ್ನು ನಾಲ್ಕು ತಿಂಗಳ ಬಳಿಕ ನೆರವೇರಿಸಲಾಗುತ್ತಿದೆ.
ಅಲಿ ಖಮೇನಿ ಹತ್ಯೆ ನಂತರ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಪುತ್ರ ಮೊಜ್ತಬಾ ಅವರು, ಸಂಘರ್ಷ ಶುರುವಾದಾಗಿನಿಂದಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದೀಗ, ಪ್ರಾರ್ಥನೆಗೂ ಬಾರದಿರುವುದು ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ 'ಇಂಟರ್ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಇರಾನ್ನ ರಾಜಕೀಯ ವ್ಯವಸ್ಥೆಯಲ್ಲಿ ಉನ್ನತ ನಾಯಕರು ಇಂತಹ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗುವುದಕ್ಕೆ ಮಹತ್ವವಿದೆ.
ಫೆಬ್ರುವರಿ 28ರ ದಾಳಿ ವೇಳೆ ಮೊಜ್ತಬಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. ಹೀಗಾಗಿ, ಅವರ ಸದ್ಯದ ಸ್ಥಿತಿ ಹೇಗಿದೆ ಎಂಬುದರಿಂದ ಮೊದಲ್ಗೊಂಡು, ದೇಶದ ಆಂತರಿಕ ಬೆಳವಣಿಗೆ, ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಖಮೇನಿ ಅಂತ್ಯಸಂಸ್ಕಾರ: ಪ್ರಾರ್ಥನೆಗೆ ಹಾಜರಾದ ಮೂವರು ಮಕ್ಕಳು, ಮೊಜ್ತಬಾ ಸುಳಿವಿಲ್ಲಖಮೇನಿ ಅಂತ್ಯಸಂಸ್ಕಾರದ ಹಿಂದೆ ಅಡಗಿರುವ ಇರಾನ್ನ ಧಾರ್ಮಿಕ-ರಾಜಕೀಯ ಲೆಕ್ಕಾಚಾರಗಳು!
ಶೋಕಾಚರಣೆಯ ಎರಡನೇ ದಿನ (ಭಾನುವಾರ) ಮೊಜ್ತಬಾ ಅವರ ಮೂವರು ಸಹೋದರರು ಹಾಗೂ ಕುಟುಂಬ ಸದಸ್ಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು ಎಂಬುದಾಗಿ ಇರಾನ್ನ ಸರ್ಕಾರಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ನೂತನ ನಾಯಕ ಮೊಜ್ತಬಾ ಭದ್ರತಾ ಕಾರಣಗಳಿಂದಾಗಿ ಬಂಕರ್ನಲ್ಲೇ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.
ಒಗ್ಗಟ್ಟಿನ ಪ್ರದರ್ಶನ
ಮೊಜ್ತಬಾ ಅವರು ಪ್ರಾರ್ಥನೆಗೆ ಗೈರಾಗಿದ್ದರೂ, ಇರಾನ್ ಆಡಳಿತದ ಒಗ್ಗಟ್ಟು ಪ್ರದರ್ಶನಕ್ಕೆ ಅಲಿ ಖಮೇನಿ ಅಂತ್ಯಕ್ರಿಯೆ ವೇದಿಕೆಯಾಗಿದೆ. ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಮೆರಿಕದೊಂದಿಗೆ ಮಾತುಕತೆ ನಡೆಸುವ ವಿಚಾರದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಪ್ರಮುಖ ರಾಜಕೀಯ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಪರಸ್ಪರ ದೇಶದ್ರೋಹ, ಬಂಡಾಯ, ಸಂಚು ಹಾಗೂ ನೂತನ ಸರ್ವೋಚ್ಚ ನಾಯಕನ ಆದೇಶ ಉಲ್ಲಂಘನೆಯಂತಹ ಗಂಭೀರ ಆರೋಪಗಳನ್ನು ಮಾಡಿಕೊಂಡಿದ್ದರು.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಮುಖ್ಯಸ್ಥ ಅಹ್ಮದ್ ವಾಹಿದಿ ಅವರೂ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಗ್ರ್ಯಾಂಡ್ ಮೊಸಲ್ಲಾ ಮಸೀದಿ ಸಂಕೀರ್ಣದಿಂದ ಹೊರಬರುತ್ತಿದ್ದಂತೆ, ಅವರತ್ತ ಜಮಾಯಿಸಿದ ಜನರು, 'ಪ್ರತೀಕಾರ.. ಪ್ರತೀಕಾರ..' ಎಂದು ಕೂಗಿದರು.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್ ಅವರು ಭಾನುವಾರ ಪ್ರಾರ್ಥನೆಗೆ ಹಾಜರಾಗಿದ್ದರು.
ಅಲಿ ಖಮೇನಿ ಅವರ ಪತ್ನಿ, ಪುತ್ರಿ, ಅಳಿಯ, ಸೊಸೆ, 14 ತಿಂಗಳ ಮೊಮ್ಮಗಳೂ ಇರಾನ್-ಅಮೆರಿಕ ದಾಳಿ ವೇಳೆ ಹತ್ಯೆಯಾಗಿದ್ದಾರೆ. ಇಂದು (ಸೋಮವಾರ) ಅವರೆಲ್ಲರ ಪಾರ್ಥಿವ ಶರೀರಗಳನ್ನು ಟೆಹರಾನ್ನಲ್ಲಿ ಮೆರವಣಿಗೆ ನಡೆಸಲು ಯೋಜಿಸಲಾಗಿದೆ.

