ಕುಂಬಳೆ: ಕಲಾಕುಂಚ ಕೇರಳ ಗಡಿನಾಡ ಘಟಕದ ವತಿಯಿಂದ ಕಾಸರಗೋಡಿನ ಅಸ್ಮಿತೆ ಎಂಬ ಸರಣಿ ಉಪನ್ಯಾಸ ಮಾಲೆಯ ಅಂಗವಾಗಿ ಕುಂಬ್ಳೆಯ ಚಾರಿತ್ರಿಕ ಮಹತ್ವ ಎಂಬ ವಿಷಯದ ಉಪನ್ಯಾಸ ಜರಗಿತು. ಕುಂಬ್ಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮವನ್ನು ನ್ಯಾಯವಾದಿ, ಪ್ರಸಿದ್ಧ ಹರಿಕಥಾ ಕಲಾವಿದ ಶಂನಾಡಿಗ ಕುಂಬ್ಳೆ ಉದ್ಘಾಟಿಸಿ ಮಾತನಾಡಿ, ಅಂದಿನ ಕುಂಬಳೆ ರಾಜ್ಯಕ್ಕೆ ಸೇರಿದ ಈ ದೇವಾಲಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಮರ್ಥನೀಯ. ನಮ್ಮ ಪ್ರಾದೇಶಿಕ ಹಿನ್ನೆಲೆಗೆ ಸಂಬಂಧಿಸಿದ ಚರಿತ್ರೆಯನ್ನು ಇಲ್ಲಿ ಮೆಲುಕು ಹಾಕುವುದು ಸೂಕ್ತ ಎಂದರು.
ಉಪನ್ಯಾಸ ನೀಡಿದ ಎಡನಾಡು ಕೃಷ್ಣ ಮೋಹನ ಭಟ್, ಶ್ರೀರಾಮ ನಡೆದಾಡಿದ ನೆಲವಿದು, ಇದು ದ್ವಾಪರದಲ್ಲಿ ಧರ್ಮರಾಜನ ಆಡಳಿತಕ್ಕೊಳಪಟ್ಟಿತ್ತು ಎಂಬ ಐತಿಹ್ಯವಿದೆ. ಹಿಂದೆ ಚೇರರು ಪಾಂಡ್ಯರ ಆಡಳಿತದಲ್ಲಿದ್ದ ಇಲ್ಲಿ ಮೂವರು ಕದಂಬ ವಂಶದ ಜಯಸಿಂಹ ಅರಸರು ಆಳ್ವಿಕೆ ನಡೆಸಿದ್ದುಂಟು. 15ನೇ ಶತಮಾನದಿಂದ ಮಾಯಿಪ್ಪಾಡಿ ಮನೆತನದ ರಾಮಂತರಸರು ಉಸ್ತುವಾರಿ ವಹಿಸಿದ್ದರು. ಇಷ್ಟರೊಳಗೆ ಈ ಪ್ರದೇಶದ ಧಾರ್ಮಿಕ ಸಾಂಸ್ಕøತಿಕ ವಲಯಗಳಲ್ಲಿ ಬಹಳಷ್ಟು ಉನ್ನತಿ ಆಗಿತ್ತು. ಪರಶುರಾಮ ಸೃಷ್ಟಿಯೆಂದು ಪೌರಾಣಿಕ ಮಾನ್ಯತೆ ಪಡೆದ ಇಲ್ಲಿ ಎರಡನೆಯ ಜಯಸಿಂಹನ ಕಾಲದಲ್ಲಿ ಮಾಧ್ವ ಮತದ ಪ್ರಚಾರ, ಕುಂಬಳೆ ದೇವಾಲಯದ ಉದ್ಧಾರಕಾರ್ಯ ಆಗಿತ್ತು. ಅಡೂರು ಕುಮಾರಮಂಗಲ ದೇವಾಲಯಗಳ ಹಿನ್ನೆಲೆ ಆರಿಕ್ಕಾಡಿ ಕಂಚಿಕಟ್ಟೆಗಳಲ್ಲಿ ಅರಮನೆಗಳ ನಿರ್ಮಾಣ, ಅನಂತಪುರದ ಭವ್ಯ ಮೊಸಳೆಗಳ ಕಥೆಗಳನ್ನು ವಿವರಿಸಿದರು. ತನ್ನ ತೀರ್ಥರೂಪರು ಮಾಯಿಪ್ಪಾಡಿ ವೆಂಕಟೇಶ ವರ್ಮ ರಾಜರ ಕಾರ್ಯದರ್ಶಿಯಾಗಿದ್ದರ ನೆನಪುಗಳನ್ನು ಹಂಚಿಕೊಂಡರು.
ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಸಂವಾದದಲ್ಲಿ ಭಾಗವಹಿಸಿ ಇಂತಹ ವೇದಿಕೆಯಲ್ಲಿ ಚಾರಿತ್ರಿಕ ಅಂಶಗಳನ್ನು ಚರ್ಚಿಸಿದಾಗ ಸಮರ್ಪಕವಾದ ಲೇಖನ ಮೂಡಿ ಬರಬರಲು ಸಹಾಯಕವಾಗುವುದು ಎಂದರು. ಕಾರ್ಯಕ್ರಮದಲ್ಲಿ ಘಟಕದ ಸ್ಥಾಪಕ ಅಧ್ಯಕ್ಷೆ ಜಯಲಕ್ಷ್ಮೀ ಕಾರಂತರು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸ ಪೂರ್ವದಲ್ಲಿ ಭಗವದ್ಗೀತಾ ಪಾರಾಯಣ ಜರಗಿತು. ಕಲಾಕುಂಚದ ಗೌರವಾಧ್ಯಕ್ಷ ವಿ.ಬಿ.ಕುಳಮರ್ವ ಉಪಸ್ಥಿತರಿದ್ದರು. ರಾಜಾರಾಮ್ ರಾವ್ ಸ್ವಾಗತಿಸಿ, ಜಯಲಕ್ಷ್ಮಿ ಆರ್ ಹೊಳ್ಳ ವಂದಿಸಿದರು. ಚೇತನಾ ಹೆಬ್ಬಾರ್ ಪ್ರಾರ್ಧಿಸಿದರು.

.jpg)
.jpg)
