ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಪಿತೂರಿ ನಡೆಸಿ, ಅವರ ವರ್ಚಸ್ಸಿಗೆ ಧಕ್ಕೆ ತಂದ ಆರೋಪದ ಮೇಲೆ ನಾಲ್ವರು ಯುಟ್ಯೂಬರ್‌ಗಳ (ಇನ್‌ಫ್ಲುಯೆನ್ಸರ್) ವಿರುದ್ಧ ಇಲ್ಲಿನ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಿಹಾರದ ಖ್ಯಾತ ಯೂಟ್ಯೂಬರ್ ಮನೀಶ್ ಕಶ್ಯಪ್ ಸೇರಿದಂತೆ, ದೇಸಿ ಬಾಯ್ಸ್ ಎನ್‌ಸಿಆರ್, ಹರ್ಷಿತ್ ರಾಠಿ ಮತ್ತು ಅಂಕಲೇಶ್ ಇನ್ವತೆ ಎಂಬುವವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಎಥೆನಾಲ್ ಇಂಧನ (ಇ-20) ಬಳಕೆಗೆ ಸಂಬಂಧಿಸಿದಂತೆ ದಾರಿ ತಪ್ಪಿಸುವ ಮಾಹಿತಿ ಹರಡಿ, ಯಾವುದೇ ಸೂಕ್ತ ಆಧಾರಗಳಿಲ್ಲದೆ ಗಡ್ಕರಿ ಅವರ ಹೆಸರನ್ನು ಎಳೆದು ತಂದು ಅಪಪ್ರಚಾರ ಮಾಡಿದ ಆರೋಪದ ಮೇಲೆ ಈ ಎಫ್‌ಐಆರ್ ದಾಖಲಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಈ ನಾಲ್ವರು ಆರೋಪಿಗಳು ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಎಥೆನಾಲ್ ಬಗ್ಗೆ ವಿವಾದಾತ್ಮಕ ವಿಡಿಯೊಗಳನ್ನು ಹಂಚಿಕೊಂಡಿದ್ದರು.
ಎಥೆನಾಲ್ ಇಂಧನ ಬಳಕೆಯಲ್ಲಿ ದೊಡ್ಡ ಮಟ್ಟದ ವಂಚನೆ ಹಾಗೂ ಅವ್ಯವಹಾರಗಳು ನಡೆಯುತ್ತಿವೆ ಎಂದು ಇವರು ತಮ್ಮ ವಿಡಿಯೊಗಳಲ್ಲಿ ಆರೋಪಿಸಿದ್ದರು.
ಕೇಂದ್ರ ಸಚಿವ ಗಡ್ಕರಿ ಅವರ ಎಥೆನಾಲ್ ನೀತಿಯನ್ನು ಈ ವಿಡಿಯೊಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಬಿಜೆಪಿ ಹೇಳಿತ್ತು. ಇದು ಗಡ್ಕರಿ ವಿರುದ್ಧ ಮಾಡುತ್ತಿರುವ ವ್ಯವಸ್ಥಿತ ಅಪಪ್ರಚಾರ ಎಂದು ಹೇಳಿರುವ ನಾಗ್ಪುರದ ಬಿಜೆಪಿ ನಾಯಕ ಶಿಶಿರ್ ತ್ರಿಪಾಠಿ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು.
ಕೇವಲ ವೀಕ್ಷಣೆ (ವೀವ್ಸ್) ಹಾಗೂ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಈ ಯುಟ್ಯೂಬರ್‌ಗಳು ಕೇಂದ್ರ ಸಚಿವರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಶಿಶಿರ್ ತ್ರಿಪಾಠಿ ದೂರಿದ್ದಾರೆ.

