HEALTH TIPS

ಭಾರತದಲ್ಲಿ ಗೂಗಲ್ ನ 15 ಶತಕೋಟಿ ಡಾಲರ್ ವೆಚ್ಚದ ಡೇಟಾ ಸೆಂಟರ್ ಯೋಜನೆ: ಪರಿಸರವಾದಿಗಳಿಂದ ವಿರೋಧ ಏಕೆ?

ವಿಶಾಖಪಟ್ಟಣ: ಗೂಗಲ್ ಸಂಸ್ಥೆ ಭಾರತದಲ್ಲಿ ನಿರ್ಮಿಸಲು ಯೋಜಿಸಿರುವ ಬೃಹತ್ ಡೇಟಾ ಸೆಂಟರ್ನ ಕಾಮಗಾರಿ ಭರದಿಂದ ಸಾಗಿದೆ. ನಿಗದಿತ ಜಾಗದ ಬೆಟ್ಟವನ್ನು ಕೆಂಪು ಮಣ್ಣು ಕಾಣಿಸುವಂತೆ ಅಗೆದು, ಮೆಟ್ಟಿಲುಗಳ ಆಕಾರದಲ್ಲಿ ರೂಪಿಸಲಾಗಿದೆ. ಆದರೆ, ಪರಿಸರವಾದಿಗಳಿಂದ ಹೆಚ್ಚುತ್ತಿರುವ ವಿರೋಧವು ಅಮೆರಿಕದ ಈ ಟೆಕ್ ದೈತ್ಯನ 15 ಶತಕೋಟಿ ಡಾಲರ್ (1,42,707 ಕೋಟಿ ರೂ.) ಯೋಜನೆಗೆ ಅಡೆತಡೆಗಳನ್ನು ಉಂಟುಮಾಡುತ್ತಿದೆ.


ಪ್ರಧಾನಿ ನರೇಂದ್ರ ಮೋದಿ ಅವರ ಮಿತ್ರಪಕ್ಷದ ಆಡಳಿತವಿರುವ ಆಂಧ್ರಪ್ರದೇಶ ಸರಕಾರವು ಈ ಯೋಜನೆಯನ್ನು ಐತಿಹಾಸಿಕ ಮತ್ತು ಕ್ರಾಂತಿಕಾರಿ ಎಂದು ಬಣ್ಣಿಸಿದೆ. ನೀರಿನ ಸರಬರಾಜು ಮತ್ತು ವನ್ಯಜೀವಿಗಳಿಗೆ ಆಗುವ ಅಪಾಯಗಳನ್ನು ಪರಿಶೀಲಿಸದೆ ಯೋಜನೆಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆ ಎಂಬ ಆರೋಪಗಳನ್ನು ರಾಜ್ಯ ಸರಕಾರ ತಳ್ಳಿಹಾಕಿದೆ.

ಚಿರತೆಗಳು ಮತ್ತು ಚಿಪ್ಪುಹಂದಿಗಳ ನೆಲೆಯಾಗಿರುವ ವನ್ಯಜೀವಿ ಅಭಯಾರಣ್ಯದ ಪಕ್ಕದಲ್ಲೇ ಈ ಯೋಜನೆ ರೂಪುಗೊಳ್ಳುತ್ತಿರುವುದು ಹಾಗೂ ಕುಡಿಯುವ ನೀರಿನ ಮೇಲಾಗುವ ಪರಿಣಾಮಗಳ ಕುರಿತು ಹಲವು ಕಾನೂನು ಸವಾಲುಗಳು ಎದುರಾಗಿವೆ. ಇದು ಭಾರತದಲ್ಲಿ ಗೂಗಲ್ ನ ಅತಿದೊಡ್ಡ ಹೂಡಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು.

ಇತ್ತೀಚಿನ ವಾರಗಳಲ್ಲಿ ವಿಶಾಖಪಟ್ಟಣ ನಗರದಲ್ಲಿ ಹೋರಾಟಗಾರರು ಮತ್ತು ಮಕ್ಕಳು 'ನಾವು ಡೇಟಾವನ್ನು ಕುಡಿಯಲು ಸಾಧ್ಯವಿಲ್ಲ' ಎಂಬ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದ್ದಾರೆ. ಗೂಗಲ್ ಲೋಗೋಗೆ ಸಂಕೋಲೆ ತೊಡಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿವೆ.

ರವಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ರಾಯಿಟರ್ಸ್ ಪ್ರತಿನಿಧಿಗಳು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಅಭಿಯಾನ ಹಾಗೂ ಸಮುದ್ರ ತೀರದಲ್ಲಿ ಪ್ರತಿಭಟನೆ ನಡೆಸಲು ಹೋರಾಟಗಾರರು ಯೋಜನೆ ರೂಪಿಸುತ್ತಿದ್ದಾರೆ.

'ಜನರ ಜೀವನೋಪಾಯವನ್ನು ಬಲಿಕೊಟ್ಟು ಅಭಿವೃದ್ಧಿ ಮಾಡಬಾರದು' ಎಂದು ವಿಶಾಖಪಟ್ಟಣದ ನೀರಿನ ಕೊರತೆ ಮತ್ತು ಬೇಡಿಕೆಯ ಕುರಿತು ಅಂಕಿಅಂಶಗಳನ್ನು ಮಂಡಿಸಿದ 'ಗ್ರೀನ್ ವಿಶಾಖ' ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕ ರಾಜ ರಾಮ ಮೋಹನ್ ರಾಯ್ ಹೇಳಿದ್ದಾರೆ.

25 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನಗರಕ್ಕೆ ದಿನಕ್ಕೆ 480 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಆದರೆ, ಅಲ್ಲಿನ ಜಲಾಶಯ ಮತ್ತು ನದಿಗಳಿಂದ ದಿನಕ್ಕೆ ಕೇವಲ 410 ಮಿಲಿಯನ್ ಲೀಟರ್ ನೀರು ಪೂರೈಕೆಯಾಗುತ್ತಿದೆ ಎಂದು ಸರಕಾರ ಹೇಳುತ್ತದೆ. ಹೀಗಾಗಿ ನಗರದಲ್ಲಿ ನಿಯಂತ್ರಿತ ನೀರು ಪೂರೈಕೆ ಸಾಮಾನ್ಯವಾಗಿದೆ.

ಸರ್ವರ್ ಗಳನ್ನು ತಂಪಾಗಿಸಲು ಅಪಾರ ಪ್ರಮಾಣದ ನೀರು ಮತ್ತು ವಿದ್ಯುತ್ ಬಳಸುವುದರಿಂದ, ವಿಶ್ವದಾದ್ಯಂತ ಡೇಟಾ ಸೆಂಟರ್ಗಳ ವೇಗದ ವಿಸ್ತರಣೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಇದರ ಸಂಭಾವ್ಯ ಪರಿಣಾಮ ಇನ್ನಷ್ಟು ತೀವ್ರವಾಗಿರುತ್ತದೆ. ಅಮೆರಿಕದಲ್ಲಿಯೂ ಇಂತಹದ್ದೇ ಕಳವಳಗಳನ್ನು ವ್ಯಕ್ತಪಡಿಸಿ ಜುಲೈ ತಿಂಗಳಲ್ಲಿ 42 ರಾಜ್ಯಗಳಲ್ಲಿ ಹೋರಾಟಗಾರರು 142 ಪ್ರತಿಭಟನೆಗಳನ್ನು ನಡೆಸಿದ್ದರು.

►ಆರೋಪ ತಳ್ಳಿದ ಸರಕಾರ, ಪರಿಹಾರ ಒದಗಿಸಲು ಸಿದ್ಧ

ಯೋಜನೆಯು ಹತ್ತಿರದ ಜಲಾಶಯದ ಮೇಲೆ ಒತ್ತಡ ಹೇರುವ ಮೂಲಕ ನೀರಿನ ಲಭ್ಯತೆಯನ್ನು ಕುಗ್ಗಿಸುತ್ತದೆ ಎಂದು 'ಜಲ್ ಬಿರಾದರಿ' ಎಂಬ ಹೋರಾಟಗಾರರ ಗುಂಪು ಆರೋಪಿಸಿದೆ. ಈ ಆರೋಪಗಳ ವಿರುದ್ಧ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವಂತೆ ರಾಜ್ಯದ ಹೈಕೋರ್ಟ್ ಸೋಮವಾರ ಸರಕಾರಕ್ಕೆ ಸೂಚಿಸಿದೆ.

ಆಂಧ್ರಪ್ರದೇಶ ಹೈಕೋರ್ಟ್ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮುಂದಿನ ವಿಚಾರಣೆಯನ್ನು ಆಗಸ್ಟ್ 24ರಂದು ನಡೆಸಲಿದೆ.

ಯೋಜನೆಯ ಕುರಿತು ಹೋರಾಟಗಾರರ ಕಳವಳಗಳು ತಪ್ಪಾದವು ಮತ್ತು ದಾರಿತಪ್ಪಿಸುವಂತಿವೆ ಎಂದು ರಾಯಿಟರ್ಸ್ಗೆ ನೀಡಿದ ಹೇಳಿಕೆಯಲ್ಲಿ ಸರಕಾರ ತಿಳಿಸಿದೆ. ಆದರೆ, ಸಾರ್ವಜನಿಕರ ಸಲಹೆಗಳನ್ನು ಸ್ವೀಕರಿಸಲು ತಾವು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದೆ.

'ಇಂತಹ ಪ್ರತಿಭಟನೆಗಳು ಅವರ ಸಾಂವಿಧಾನಿಕ ಹಕ್ಕು. ಒಂದು ವೇಳೆ ಈ ಹಕ್ಕುಗಳಲ್ಲಿ ನಿಜವಾದ ಕಾಳಜಿಯಿದ್ದರೆ, ಸರಕಾರವು ಅವರೊಂದಿಗೆ ಮಾತುಕತೆ ನಡೆಸಿ, ವಾಸ್ತವಾಂಶಗಳನ್ನು ಸ್ಪಷ್ಟಪಡಿಸಲು ಮತ್ತು ಸೂಕ್ತ ಪರಿಹಾರ ನೀಡಲು ಬದ್ಧವಾಗಿದೆ' ಎಂದು ಹೇಳಿದೆ.

ಯೋಜನೆಯನ್ನು ಕಾನೂನುಬದ್ಧವಾಗಿ ಅಭಿವೃದ್ಧಿಪಡಿಸಲಾಗುವುದು ಮತ್ತು 'ಸ್ಥಳೀಯ ಜಲಸಂಪನ್ಮೂಲಗಳನ್ನು ರಕ್ಷಿಸಲು ಸುಧಾರಿತ ಏರ್-ಕೂಲಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು' ಎಂದು ಗೂಗಲ್ ಸಂಸ್ಥೆ ರಾಯಿಟರ್ಸ್ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

ಸೋಮವಾರ ರಾಯಿಟರ್ಸ್ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿತ್ತು. ಜೆಸಿಬಿ ಯಂತ್ರಗಳು ಮಣ್ಣು ಅಗೆಯುವ ಕೆಲಸದಲ್ಲಿ ನಿರತವಾಗಿದ್ದವು.

ಸುಮಾರು 1,88,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿರುವ ಈ ಬೃಹತ್ ಯೋಜನೆಗಾಗಿ ಗೂಗಲ್, ಭಾರತೀಯ ಉದ್ಯಮಿ ಗೌತಮ್ ಅದಾನಿ ಸಮೂಹದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಆದರೆ, ಈ ಕುರಿತು ಕೇಳಿದ ಪ್ರಶ್ನೆಗಳಿಗೆ ಅದಾನಿ ಸಮೂಹ ಪ್ರತಿಕ್ರಿಯಿಸಿಲ್ಲ ಎಂದು ರಾಯಿಟರ್ಸ್ ವರದಿ ಹೇಳಿದೆ.

►ವನ್ಯಜೀವಿ ಮತ್ತು ಶಬ್ದ ಮಾಲಿನ್ಯ

ಕೇವಲ 860 ಮೀಟರ್ ದೂರದಲ್ಲಿರುವ ಕಂಬಾಲಕೊಂಡ ವನ್ಯಜೀವಿ ಅಭಯಾರಣ್ಯದ ಮೇಲೆ ಭಾರೀ ನಿರ್ಮಾಣ ಕಾಮಗಾರಿ ಮತ್ತು ಶಬ್ದ ಮಾಲಿನ್ಯವು ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅಭಯಾರಣ್ಯಕ್ಕೆ ಯೋಜನೆಯ ಕುರಿತು ಕೇಳಿದ ಪ್ರಶ್ನೆಗೆ, ಕಾನೂನುಬದ್ಧವಾಗಿ ಅಗತ್ಯವಿರುವ ದೂರಕ್ಕಿಂತಲೂ ದೂರದಲ್ಲಿ ಯೋಜನೆಯಿದೆ ಎಂದು ಸರಕಾರ ತಿಳಿಸಿದೆ. 'ನಾವು ಯಾರಿಗೂ ತೊಂದರೆಯಾಗದಂತೆ ಶಾಂತಿಯುತವಾಗಿ ಕಾರ್ಯನಿರ್ವಹಿಸಲು ಶಬ್ದ- ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುತ್ತೇವೆ' ಎಂದು ಗೂಗಲ್ ಹೇಳಿದೆ.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಯೋಜನೆಯಿಂದ ನೀರು ಬಳಸುವುದರ ಪರಿಣಾಮಗಳನ್ನು ಸೂಕ್ತವಾಗಿ ಪರಿಶೀಲಿಸದೆ ಸರಕಾರ ಯೋಜನೆಗೆ ಅನುಮತಿ ನೀಡಿದೆ ಎಂದು ಆರೋಪಿಸಿ 'ಮಾನವ ಹಕ್ಕುಗಳ ವೇದಿಕೆ' (Human Rights Forum) ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ (NGT) ಮೂರು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದು, ಕಾಮಗಾರಿಗೆ ತಡೆ ನೀಡುವಂತೆ ಆಗ್ರಹಿಸಿದೆ.

ಮುಂಬರುವ ಡೇಟಾ ಸೆಂಟರ್ ಗಳಿಗೆ ಗ್ರಾಮೀಣ ಅಥವಾ ವಸತಿ ಉದ್ದೇಶದ ನೀರನ್ನು ಬಳಸುವುದಿಲ್ಲ ಹಾಗೂ ಹತ್ತಿರದ ಜಲಾಶಯದ ನೀರನ್ನೂ ಬಳಸುವುದಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

ರವಿವಾರದ ಸಭೆಯಲ್ಲಿ, ಈಗಾಗಲೇ ನಗರವು ನೀರಿನ ಅಭಾವ ಎದುರಿಸುತ್ತಿರುವಾಗ, ಸರಕಾರವು ಯೋಜನೆಗೆ 20 ವರ್ಷಗಳ ಕಾಲ 'ಖಾತರಿ' ನೀರು ಪೂರೈಕೆಯ ಭರವಸೆ ನೀಡಿರುವ ಬಗ್ಗೆ 'ಗ್ರೀನ್ ವಿಶಾಖ' ಆತಂಕ ವ್ಯಕ್ತಪಡಿಸಿದೆ.

'ಕೊನೆಗೆ ಇದರಿಂದ ತೊಂದರೆ ಅನುಭವಿಸುವವರು ಇಲ್ಲಿನ ಸಾರ್ವಜನಿಕರು' ಎಂದಿದ್ದಾರೆ ರಾಯ್.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries