ಮುಂಬೈ: 'ದಾದರ್‌ನ ಪ್ರಭಾದೇವಿಯಲ್ಲಿರುವ ಸಿದ್ದಿವಿನಾಯಕ ದೇವಾಲಯಕ್ಕೆ ಭಕ್ತರು ನೀಡಿದ ಸುಮಾರು ₹18 ಕೋಟಿಯಷ್ಟು ದೇಣಿಗೆಯನ್ನು ಕಳ್ಳತನ ಮಾಡಲಾಗಿದೆ' ಎಂದು ಮಹಾರಾಷ್ಟ್ರ ನವನಿರ್ಮಾಣ ಪಕ್ಷದ ಅಧ್ಯಕ್ಷ ರಾಜ್ ಠಾಕ್ರೆ ಆರೋಪಿಸಿದ್ದಾರೆ.ಎಂಎನ್‌ಎಸ್ ವಿದ್ಯಾರ್ಥಿ ಸೇನಾದ 20ನೇ ವರ್ಷಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು 'ದೇವಾಲಯದಲ್ಲಿ ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದಂತೆ ಟ್ರಸ್ಟಿಗಳು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಪತ್ರ ಬರೆದಿದ್ದಾರೆ' ಎಂದು ತಿಳಿಸಿದ್ದಾರೆ.
ಆದರೆ, ಈ ಬಗ್ಗೆ ಏಕನಾಥ ಶಿಂದೆ, ದೇವಾಲಯದ ಟ್ರಸ್ಟಿಗಳು ಕೂಡ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
'ದೇವಾಲಯದ ದೇಣಿಗೆಯಿಂದಲೇ ₹18 ಕೋಟಿ ಕಳ್ಳತನ ಮಾಡಲಾಗಿದೆ. ವಿದ್ಯಾರ್ಥಿಗಳು ಸರ್ಕಾರವನ್ನು ನಂಬುತ್ತಿಲ್ಲ. ಹಾಗಿದ್ದ ಮೇಲೆ ವಿದ್ಯಾರ್ಥಿಗಳು ಯಾರನ್ನು ನಂಬಬೇಕು? ಎಂದು ಪ್ರಶ್ನಿಸಿದ್ದಾರೆ.
ರಾಮಮಂದಿರ ದೇವಾಲಯದಲ್ಲಿ ನಡೆದ ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ರಾಜ್‌ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.
'ರಾಮಮಂದಿರವು ಭಾವನಾತ್ಮಕ ವಿಚಾರವಾಗಿದೆ. ಅದೇ ದೇವಾಲಯದಲ್ಲಿ ಕಳ್ಳತನ ನಡೆದಿದ್ದರೆ, ಮಕ್ಕಳನ್ನು ಯಾರ ಕಡೆ ನೋಡಬೇಕು. ಬಾಲರಾಮನ ಪ್ರತಿಷ್ಠಾಪನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ದೇವಾಲಯದ ಒಳಗೆ ತೆರಳಿ ಪೂಜೆ ಸಲ್ಲಿಸಿದ್ದರು. ಆದರೆ, ದೇವಾಲಯದಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಿಲ್ಲ? ಅಯೋಧ್ಯೆಯಲ್ಲಿ ಇವರ ಪಕ್ಷ ಸಂಸದರು ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆ ಆ ನಗರದ ಜೊತೆಗೆ ಸಂಪರ್ಕ ಏಕೆ ಕಡಿತಗೊಂಡಿದೆ? ಎಂದು ಈ ವೇಳೆ ಪ್ರಶ್ನಿಸಿದ್ದಾರೆ.

