HEALTH TIPS

ವಂದೇ ಮಾತರಂನ ಆರೂ ಚರಣಗಳ ಗಾಯನಕ್ಕೆ ಕಾಂಗ್ರೆಸ್ ವಿರೋಧ; 1937ರ ನಿರ್ಧಾರಕ್ಕೆ ಬದ್ಧ

ನವದೆಹಲಿ: ಕೇಂದ್ರ ಸರ್ಕಾರ 'ವಂದೇ ಮಾತರಂ'ನ ಆರೂ ಚರಣಗಳನ್ನು ಹಾಡಲು ಹೊಸ ನಿಯಮ ತಂದಿದ್ದರೂ, ಕಾಂಗ್ರೆಸ್ ತನ್ನ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ತನ್ನ ದಶಕಗಳ ಹಳೆಯ ನಿರ್ಧಾರವನ್ನು ಪುನರುಚ್ಚರಿಸಿದೆ.


ಕಾಂಗ್ರೆಸ್‌ನ ಈ ನಿರ್ಧಾರವನ್ನು ಬಿಜೆಪಿಯು ರಾಷ್ಟ್ರವಿರೋಧಿ ಮತ್ತು ಅಲ್ಪಸಂಖ್ಯಾತರ ಓಲೈಕೆ ಎಂದು ಟೀಕಿಸಿದ್ದರೆ, ಇದು 1937ರ ಸ್ವಾತಂತ್ರ್ಯ ಹೋರಾಟ ಕಾಲದ ನಿರ್ಣಯ ಎಂದು ಕಾಂಗ್ರೆಸ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಕಾಂಗ್ರೆಸ್ ಸಮರ್ಥಿಸಿಕೊಂಡಿರುವ 1937ರ ಹಿನ್ನೆಲೆ ಏನು?

19ನೇ ಶತಮಾನದಲ್ಲಿ ಬಂಕಿಮಚಂದ್ರರು 'ವಂದೇ ಮಾತರಂ' ಗೀತೆಯನ್ನು ಸಂಸ್ಕೃತ ಮಿಶ್ರಿತ ಬೆಂಗಾಲಿ ಭಾಷೆಯಲ್ಲಿ ರಚಿಸಿ, ಬಳಿಕ ಅದನ್ನು 'ಆನಂದಮಠ' ಕಾದಂಬರಿಗೆ ಸೇರಿಸಿದರು. ಈ ಗೀತೆಯು ಕಾಲಕ್ರಮೇಣ ರಾಷ್ಟ್ರೀಯವಾದಿ ಚಳವಳಿಯ ಮುಖ್ಯ ಧ್ವನಿಯಾಯಿತು. 1905ರ ಬಂಗಾಳ ವಿಭಜನೆ ವಿರೋಧಿ ಹೋರಾಟದಲ್ಲಿ ಇದು ದೇಶಪ್ರೇಮಿಗಳನ್ನು ಒಂದಗೂಡಿಸಿತು.

ಆದರೆ 1937ರ ವೇಳೆಗೆ, ಇದರ ಬಳಕೆ ರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿ ಮಾರ್ಪಟ್ಟಿತು.

ಜವಾಹರಲಾಲ್ ನೆಹರೂ ಅವರು ಸುಭಾಷ್ ಚಂದ್ರ ಬೋಸ್ ಅವರಿಗೆ ಬರೆದ ಪತ್ರದಲ್ಲಿ, 'ಆನಂದಮಠ' ಕಾದಂಬರಿಯ ಹಿನ್ನೆಲೆಯು ಮುಸ್ಲಿಂ ಸಮುದಾಯದಲ್ಲಿ ಕಳವಳವನ್ನುಂಟುಮಾಡಬಹುದು ಎಂದು ಹೇಳಿದ್ದರು.

ಆದಾಗ್ಯೂ, ಗೀತೆಯ ಚರಣಗಳಲ್ಲಿ ದುರ್ಗೆ, ಲಕ್ಷ್ಮಿ, ಸರಸ್ವತಿ ಮುಂತಾದ ಹಿಂದೂ ದೇವತೆಗಳ ಉಲ್ಲೇಖಗಳಿದ್ದು, ಮಾತೃಭೂಮಿಯನ್ನು ದೇವಿಯ ರೂಪದಲ್ಲಿ ವರ್ಣಿಸಲಾಗಿದೆ. ಇದು ಏಕದೇವೋಪಾಸನೆಯನ್ನು ನಂಬುವ ಮುಸ್ಲಿಂ ಸಮುದಾಯದ ಕೆಲವು ನಾಯಕರ ಆಕ್ಷೇಪಕ್ಕೆ ಕಾರಣವಾಗಿತ್ತು. ಜೊತೆಗೆ 'ಆನಂದಮಠ' ಕಾದಂಬರಿಯ ಹಿನ್ನೆಲೆಯೂ ವಿವಾದಕ್ಕೆ ಗ್ರಾಸವಾಗಿತ್ತು.

ಈ ಹಂತದಲ್ಲಿ ಜವಾಹರಲಾಲ್ ನೆಹರೂ ಮತ್ತು ಸುಭಾಷ್ ಚಂದ್ರ ಬೋಸ್ ಅವರು ರವೀಂದ್ರನಾಥ ಟ್ಯಾಗೋರ್ ಅವರ ಅಭಿಪ್ರಾಯ ಕೇಳಿದಾಗ, ಟ್ಯಾಗೋರ್ ಅವರು ಗೀತೆಯ ಮೊದಲ ಎರಡು ಚರಣಗಳು ಮಾತೃಭೂಮಿಯ ನೈಸರ್ಗಿಕ ಸೌಂದರ್ಯ ಹಾಗೂ ನೆಲದ ಸಾತ್ವಿಕತೆಯನ್ನು ಬಣ್ಣಿಸುವುದರಿಂದ ಅವು ಒಗ್ಗಟ್ಟಿನ ಸಂಕೇತವಾಗಿವೆ; ಆದರೆ ನಂತರದ ನುಡಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಹುದು ಎಂದು ಸ್ಪಷ್ಟಪಡಿಸಿದ್ದರು.

ಇದರ ಆಧಾರದ ಮೇಲೆ, 1937ರ ಅಕ್ಟೋಬರ್‌ನಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯು ರಾಷ್ಟ್ರೀಯ ಸಮಾವೇಶಗಳಲ್ಲಿ 'ವಂದೇ ಮಾತರಂ'ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಅಧಿಕೃತವಾಗಿ ನಿರ್ಣಯಿಸಲಾಯಿತು.

ಮಹಾತ್ಮ ಗಾಂಧೀಜಿಯವರೂ ಕೂಡ ವಂದೇ ಮಾತರಂ ಗೀತೆಯನ್ನು ಸ್ವಾತಂತ್ರ್ಯ ಹೋರಾಟದ ಪ್ರಮುಖ ಸಂಕೇತ ಎಂದು ಕರೆದರು. ಆದರೆ ಕೋಮು ಸಂಘರ್ಷಕ್ಕೆ ಕಾರಣವಾಗುವ ಕಡೆಗಳಲ್ಲಿ ಅದನ್ನು ಬಲವಂತವಾಗಿ ಹೇರುವುದನ್ನು ವಿರೋಧಿಸಿದರು. 1939ರಲ್ಲಿ 'ಹರಿಜನ' ಪತ್ರಿಕೆಯಲ್ಲಿ ಬರೆದ ಅವರು, ಬಂಗಾಳ ವಿಭಜನೆ ವಿರೋಧಿ ಚಳವಳಿಯಲ್ಲಿ ಇದು ಶಕ್ತಿಯುತ ಘೋಷಣೆಯಾಗಿತ್ತು, ಆದರೆ ವಿಭಿನ್ನ ಸಮುದಾಯಗಳಿರುವ ಸಭೆಯಲ್ಲಿ ಈ ಗೀತೆಗಾಗಿ ನಾನು ಸಣ್ಣ ಜಗಳಕ್ಕೂ ಆಸ್ಪದ ಕೊಡುವುದಿಲ್ಲ ಎಂದು ಹೇಳಿದ್ದರು.

ಸ್ವಾತಂತ್ರ್ಯದ ನಂತರ, 1950ರ ಜನವರಿ 24ರಂದು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ರಾಜೇಂದ್ರ ಪ್ರಸಾದ್ ಅವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಐತಿಹಾಸಿಕ ಪಾತ್ರ ವಹಿಸಿದ 'ವಂದೇ ಮಾತರಂ' ಗೀತೆಗೂ ಮತ್ತು 'ಜನ ಗಣ ಮನ' ಗೀತೆಗೆ ಸಮಾನವಾದ ಗೌರವ ಮತ್ತು ಸ್ಥಾನಮಾನ ನೀಡಲಾಗುವುದು ಎಂದು ಘೋಷಿಸಿದರು. ಆದರೆ ಎಷ್ಟು ನುಡಿಗಳನ್ನು ಹಾಡಬೇಕು ಎಂಬುದರ ಕುರಿತು ಸಂವಿಧಾನ ಸಭೆಯು ಯಾವುದೇ ಪ್ರತ್ಯೇಕ ನಿರ್ಣಯವನ್ನು ಅಂಗೀಕರಿಸಲಿಲ್ಲ.

ದಶಕಗಳ ಕಾಲ ವಂದೇ ಮಾತರಂನ ಎರಡು ಚರಣಗಳು ಮಾತ್ರ ವ್ಯಾಪಕವಾಗಿ ಬಳಕೆಯಲ್ಲಿತ್ತು. ಸ್ವಾತಂತ್ರ್ಯ ಬಂದಾಗಿನಿಂದ ಆಕಾಶವಾಣಿಯು 2 ನುಡಿಗಳ (65 ಸೆಕೆಂಡ್) ಆವೃತ್ತಿಯನ್ನೇ ಪ್ರಸಾರ ಮಾಡುತ್ತಿತ್ತು, 2026ರಲ್ಲಿ ವಂದೇ ಮಾತರಂ ಆರು ಚರಣಗಳಾಗಿ ಬದಲಾಯಿತು ಎಂದು ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ತಿಳಿಸಿತ್ತು.

ಈಗೇಕೆ ಮತ್ತೆ ವಿವಾದ?

ಕೇಂದ್ರ ಗೃಹ ಸಚಿವಾಲಯ 2026ರ ಜನವರಿ 28ರಂದು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದು, ಸುಮಾರು 3 ನಿಮಿಷ 10 ಸೆಕೆಂಡುಗಳ ಕಾಲಾವಧಿಯ ಆರೂ ಚರಣಗಳನ್ನು ಅಧಿಕೃತಗೊಳಿಸಿದೆ. ಪ್ರಮುಖ ಸರ್ಕಾರಿ ಸಮಾರಂಭಗಳಲ್ಲಿ ಇದನ್ನು ಹಾಡುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ.

ಸಂಸತ್ತು ಕೂಡ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆಗೆ (1971) ತಿದ್ದುಪಡಿ ತಂದಿದ್ದು, ರಾಷ್ಟ್ರಗೀತೆಗೆ ಇರುವಂತಹದ್ದೇ ಕಾನೂನು ರಕ್ಷಣೆಯನ್ನು 'ವಂದೇ ಮಾತರಂ'ಗೂ ವಿಸ್ತರಿಸಿದೆ.

ತಿದ್ದುಪಡಿ ಮಾಡಲಾದ ಕಾನೂನಿನ ಪ್ರಕಾರ, ರಾಷ್ಟ್ರಗೀತೆ ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದು ಅಥವಾ ಗೀತೆ ಹಾಡುತ್ತಿರುವ ಸಭೆಗೆ ಅಡ್ಡಿಪಡಿಸುವುದು ಅಪರಾಧವಾಗಿದ್ದು, 3 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಕಾನೂನು ಕೇವಲ ಉದ್ದೇಶಪೂರ್ವಕ ತಡೆ ಅಥವಾ ಅಡ್ಡಿಪಡಿಸುವಿಕೆಗೆ ಶಿಕ್ಷೆ ವಿಧಿಸುತ್ತದೆಯೇ ಹೊರತು, ಆರೂ ನುಡಿಗಳನ್ನು ಹಾಡಲೇಬೇಕೆಂದು ಎಲ್ಲೂ ಹೇಳುವುದಿಲ್ಲ.

ಕಾಂಗ್ರೆಸ್ ಸಮರ್ಥನೆ: ಗಾಂಧೀಜಿ, ನೆಹರೂ ಮತ್ತು ಸರ್ದಾರ್ ಪಟೇಲ್ ಅವರಂತಹ ನಾಯಕರು ತೆಗೆದುಕೊಂಡ ನಿರ್ಧಾರವನ್ನಷ್ಟೇ ನಾವು ಮುಂದುವರಿಸುತ್ತಿದ್ದೇವೆ. ಬಿಜೆಪಿ ರಾಷ್ಟ್ರಪ್ರೇಮದ ಹೆಸರಿನಲ್ಲಿ ಧ್ರುವೀಕರಣ ರಾಜಕಾರಣ ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಕಾಲದ ಹಿರಿಯ ನಾಯಕರ ನಿರ್ಧಾರವನ್ನು ಉಲ್ಲೇಖಿಸಿದ ಅವರು, ಇದು ಅಪರಾಧ ಎಂದಾದರೆ ಗಾಂಧೀಜಿ, ನೆಹರೂ ಮತ್ತು ವಲ್ಲಭಬಾಯಿ ಪಟೇಲ್ ಅವರ ವಿರುದ್ಧವೇ ಪ್ರಕರಣ ದಾಖಲಿಸಿ, ಕಳೆದ 80 ವರ್ಷಗಳಿಂದ ಏನು ನಡೆಯುತ್ತಿತ್ತೋ ಅದನ್ನೇ ನಾವು ಮಾಡಿದ್ದೇವೆ ಎಂದು ಖರ್ಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್-ಬಿಜೆಪಿ ನಡುವೆ ವಾಕ್ಸಮರ ಏಕೆ?

ಕೇಂದ್ರ ಸರ್ಕಾರವೇ ಅಧಿಕೃತ ಕಾರ್ಯಕ್ರಮಗಳಿಗೆ ಪೂರ್ಣ ಗೀತೆಯನ್ನು ಅಳವಡಿಸಿಕೊಂಡಿರುವಾಗ ಕಾಂಗ್ರೆಸ್ ಇನ್ನು ಮುಂದೆಯಾದರೂ 1937ರ ಸೂತ್ರವನ್ನು ಕೈಬಿಡಬೇಕು ಎಂಬುದು ಬಿಜೆಪಿಯ ವಾದ.

1937ರಲ್ಲಿ 'ಮುಸ್ಲಿಂ ಓಲೈಕೆ'ಗಾಗಿ ಕಾಂಗ್ರೆಸ್ ವಂದೇ ಮಾತರಂ ಗೀತೆಯನ್ನು ವಿಭಜಿಸಿತು ಮತ್ತು ಈ ನಿರ್ಧಾರವೇ ಮುಂದೆ ದೇಶ ವಿಭಜನೆಗೆ ಕಾರಣವಾದ ರಾಜಕೀಯಕ್ಕೆ ದಾರಿ ಮಾಡಿಕೊಟ್ಟಿತು ಎಂದು ಕೇಂದ್ರ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಕಾಂಗ್ರೆಸ್ ತನ್ನ ಕಾರ್ಯಕಾರಿ ಸಮಿತಿಯಲ್ಲಿ ರಾಷ್ಟ್ರವಿರೋಧಿ ನಿರ್ಧಾರ ತೆಗೆದುಕೊಂಡಿದೆ ಎಂದಿರುವ ಅಮಿತ್ ಶಾ, ಬಿಜೆಪಿಯು ಇದನ್ನು ಸಾರ್ವಜನಿಕವಾಗಿ ಮತ್ತು ಶಾಸನಸಭೆಗಳಲ್ಲಿ ತೀವ್ರವಾಗಿ ವಿರೋಧಿಸಲಿದೆ ಎಂದಿದ್ದಾರೆ.

ಆದರೆ ಕಾಂಗ್ರೆಸ್ ಅಮಿತ್ ಶಾ ವ್ಯಾಖ್ಯಾನವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಪಕ್ಷವು ದಶಕಗಳಿಂದ 1937ರ ನಿಲುವನ್ನೇ ಅನುಸರಿಸಿಕೊಂಡು ಬಂದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ವಾದಿಸಿದ್ದು, ಸ್ವಾತಂತ್ರ್ಯ ಹೋರಾಟದೊಂದಿಗೆ ನಿಕಟ ನಂಟು ಹೊಂದಿರುವ ಗೀತೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಸ್ತುತ ವಿವಾದವು ಕಾನೂನಾತ್ಮಕ ತೊಡಕಿಗಿಂತ, ಸ್ವಾತಂತ್ರ್ಯ ಹೋರಾಟ ಹಾಗೂ ಆಧುನಿಕ ರಾಷ್ಟ್ರೀಯತೆ ವಿಚಾರಗಳ ನಡುವಿನ ರಾಜಕೀಯ ಸಂಘರ್ಷವಾಗಿ ಮಾರ್ಪಟ್ಟಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries