ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯಲ್ಲಿ 2025ರಲ್ಲಿ 59 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು 2021ರಿಂದ 2025ರವರೆಗಿನ ಐದು ವರ್ಷಗಳಲ್ಲೇ ದಾಖಲಾದ ಅತ್ಯಧಿಕ ಸಂಖ್ಯೆಯಾಗಿದೆ. ಈ ಪೈಕಿ ಶೇ. 80ಕ್ಕೂ ಹೆಚ್ಚು ಪ್ರಕರಣಗಳು ಕಾನ್ಸ್ಟೇಬಲ್ ಹಂತದ ಸಿಬ್ಬಂದಿಗೆ ಸಂಬಂಧಿಸಿವೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
2021ರಿಂದ 2025ರವರೆಗಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಈ ಐದು ವರ್ಷಗಳಲ್ಲಿ ಒಟ್ಟು 262 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 202 ಮಂದಿ (ಶೇ. 77) ಕರ್ತವ್ಯದಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಉಳಿದ ಪ್ರಕರಣಗಳಲ್ಲಿ ಸಿಬ್ಬಂದಿ ರಜೆಯಲ್ಲಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು CRPF ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಿಬ್ಬಂದಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಖಾತರಿಪಡಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಪ್ರಕ್ರಿಯೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬದ ಸಮಸ್ಯೆಗಳೇ ಹೆಚ್ಚಿನ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣವಾಗಿರುವುದು ಪತ್ತೆಯಾಗಿದೆ. ಇದರೊಂದಿಗೆ ಸೇವೆಯ ಒತ್ತಡ ಹಾಗೂ ಕಠಿಣ ಕರ್ತವ್ಯಗಳೂ ಆತ್ಮಹತ್ಯೆಗೆ ಕಾರಣವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 3.25 ಲಕ್ಷ ಸಿಬ್ಬಂದಿ ಸಾಮರ್ಥ್ಯ ಹೊಂದಿರುವ CRPF ದೇಶದ ಅತಿದೊಡ್ಡ ಅರೆಸೇನಾ ಪಡೆಯಾಗಿದೆ. ಪಡೆಯ ಶೇ. 95ರಿಂದ 97ರಷ್ಟು ಕಾರ್ಯಾಚರಣಾ ಸಾಮರ್ಥ್ಯವನ್ನು ಬಂಡುಕೋರರ ನಿಗ್ರಹ, ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಿಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕ ಅಂಕಿ-ಅಂಶಗಳ ಪ್ರಕಾರ, 2025ರಲ್ಲಿ 59, 2024ರಲ್ಲಿ 46, 2023ರಲ್ಲಿ 57, 2022ರಲ್ಲಿ 43 ಹಾಗೂ 2021ರಲ್ಲಿ 57 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
ಜುಲೈ 2026ರವರೆಗಿನ ಒಟ್ಟು ಅಂಕಿ-ಅಂಶಗಳ ಪ್ರಕಾರ, ಕಳೆದ ಐದು ವರ್ಷಗಳ ಆತ್ಮಹತ್ಯೆ ಪ್ರಕರಣಗಳಿಗೆ ವರದಿಯಾಗಿರುವ 19 ಹೊಸ ಪ್ರಕರಣಗಳು ಸೇರಿ ಒಟ್ಟು 281 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 237 ಮಂದಿ ಅಧಿಕಾರೇತರ ಸಿಬ್ಬಂದಿಯಾಗಿದ್ದರೆ, 43 ಮಂದಿ ಅಧೀನ ಅಧಿಕಾರಿಗಳು ಹಾಗೂ ಒಬ್ಬರು ಉನ್ನತ ಹುದ್ದೆಯ ಅಧಿಕಾರಿಯಾಗಿದ್ದಾರೆ. ಒಟ್ಟು ಆತ್ಮಹತ್ಯೆ ಪ್ರಕರಣಗಳ ಪೈಕಿ ಶೇ. 84ರಷ್ಟು ಪ್ರಕರಣಗಳು ಅಧಿಕಾರೇತರ ಸಿಬ್ಬಂದಿಗೆ ಸಂಬಂಧಿಸಿವೆ.
ಆತ್ಮಹತ್ಯೆ ಮಾಡಿಕೊಂಡವರಲ್ಲಿ 128 ಮಂದಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದರೆ, 118 ಮಂದಿ ಗುಂಡು ಹಾರಿಸಿಕೊಂಡು ಜೀವ ಕಳೆದುಕೊಂಡಿದ್ದಾರೆ. 12 ಮಂದಿ ವಿಷ ಸೇವಿಸಿ ಮೃತಪಟ್ಟಿದ್ದು, ತಲಾ ಇಬ್ಬರು ಬೇರೆ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

