ನವದೆಹಲಿ: ವಾರದಲ್ಲಿ ಐದು ದಿನ ಬ್ಯಾಂಕ್ ಕೆಲಸದ ಅವಧಿ ಜಾರಿ ವಿಳಂಬ, ಕಾರ್ಯಕ್ಷಮತೆ ಆಧರಿತ ಪ್ರೋತ್ಸಾಹ ಧನ ಯೋಜನೆ ಮತ್ತು ಪಿಂಚಣಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆಯು(ಯುಎಫ್‌ಬಿಯು) ಸೆಪ್ಟೆಂಬರ್ 11ರಂದು ದೇಶದಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದೆ.
ನಿಗದಿಯಂತೆ ಮುಷ್ಕರ ನಡೆದರೆ, ದೇಶದ ಹಲವೆಡೆ ಬ್ಯಾಂಕಿಂಗ್ ಸೇವೆ ಮೇಲೆ ಪರಿಣಾಮ ಬೀರಲಿದೆ. ಅದರಲ್ಲೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 4 ದಿನಗಳ ಕಾಲ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸೆಪ್ದಂಬರ್ 11 ಶುಕ್ರವಾರವಾಗಿದ್ದು, ನಂತರದ ಎರಡು ದಿನ ಬ್ಯಾಂಕ್‌ಗಳಿಗೆ ರಜೆ ಇದೆ. ಸೆಪ್ಟೆಂಬರ್ 14ರಂದು ಕೆಲ ರಾಜ್ಯಗಳಲ್ಲಿ ಗಣೇಶ ಚತುರ್ಥಿ ಹಿನ್ನೆಲೆ ಸರ್ಕಾರಿ ರಜೆ ಘೋಷಿಸಲಾಗಿದೆ.
ಯುಎಫ್‌ಬಿಯು 9 ಬ್ಯಾಂಕ್‌ಗಳ ನೌಕರರು ಮತ್ತು ಅಧಿಕಾರಿಗಳ ಸಂಘಟನೆಗಳ ಒಕ್ಕೂಟವಾಗಿದ್ದು, ಬೇಡಿಕೆಗೆ ಸ್ಪಂದಿಸದಿದ್ದರೆ ಸೆಪ್ಟೆಂಬರ್ 28ಕ್ಕೆ ದೇಶದಾದ್ಯಂತ ಮತ್ತೊಮ್ಮೆ ಮುಷ್ಕರದ ಬೆದರಿಕೆಯನ್ನೂ ಒಡ್ಡಿದೆ. ಆ ಬಳಿಕವೂ ತಮ್ಮ ಬೇಡಿಕೆಗಳಿಗೆ ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಮತ್ತು ಸರ್ಕಾರ ಕಿವಿಗೊಡದಿದ್ದರೆ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೂ ಒಕ್ಕೂಟ ನಿರ್ಧರಿಸಿದೆ.
2024ರ ಮಾರ್ಚ್ 8ರಲ್ಲಿ ಸಹಿ ಹಾಕಲಾದ 12ನೇ ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಸ್ತಾವನೆಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಒಪ್ಪಿಗೆ ಸೂಚಿಸಿತ್ತು, ಈ ಒಪ್ಪಂದದ ಅನ್ವಯ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿದ್ದು, ಕೆಲಸದ ಅವಧಿಯಲ್ಲಿ 40 ನಿಮಿಷ ಹೆಚ್ಚಿಸಲಾಗುತ್ತದೆ.
ಈ ಒಪ್ಪಂದದನ್ವಯ ಬ್ಯಾಂಕ್‌ಗಳ ಕೆಲಸದ ಅವಧಿ ನಿಗದಿಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದ್ದರೂ ಅದು ಎರಡು ವರ್ಷದಿಂದ ನೆನಗುದಿಗೆ ಬಿದ್ದಿದೆ.


