ನವದೆಹಲಿ: ಕೇಂದ್ರ ಸರಕಾರದ ಒಟ್ಟು 15 ಸಚಿವಾಲಯಗಳು ಮತ್ತು ಇಲಾಖೆಗಳಿಂದ 54,282.32 ಕೋಟಿ ರೂ. ಮೌಲ್ಯದ 33,973 ಬಳಕೆಯ ಪ್ರಮಾಣಪತ್ರಗಳು (ಯುಸಿ) ಬಾಕಿ ಉಳಿದಿವೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ತನ್ನ ಹಣಕಾಸು ಲೆಕ್ಕಪರಿಶೋಧನಾ ವರದಿಯಲ್ಲಿ ಬೆಟ್ಟು ಮಾಡಿದ್ದಾರೆ.
ಸರಕಾರಿ ಅನುದಾನ ಮತ್ತು ವೆಚ್ಚಗಳನ್ನು ನಿಯಂತ್ರಿಸುವ ಸಾರ್ವಜನಿಕ ಹಣಕಾಸು ನಿಯಮಗಳ ಗಂಭೀರ ಉಲ್ಲಂಘನೆಯನ್ನು ಎತ್ತಿ ತೋರಿಸಿರುವ ವರದಿಯು,ಈ ಅನುದಾನಗಳು ಉದ್ದೇಶಿತ ಕಾರ್ಯಗಳಿಗೆ ಬಳಕೆಯಾಗಿವೆಯೇ ಎಂಬ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ.
ಸಂಸತ್ತಿನಲ್ಲಿ ಮಂಡಿಸಲಾದ '2024-2025ನೇ ಸಾಲಿನ ಕೇಂದ್ರ ಸರಕಾರದ ಲೆಕ್ಕಪತ್ರಗಳ ಕುರಿತಾದ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿ'ಯಲ್ಲಿ ಈ ಅಂಶಗಳನ್ನು ವಿವರವಾಗಿ ಉಲ್ಲೇಖಿಸಲಾಗಿದೆ.
ಪ್ರಮುಖ ಸುಸ್ತಿದಾರರು:
ವರದಿಯ ಪ್ರಕಾರ, ಅತ್ಯಧಿಕ ಮೊತ್ತದ ಪ್ರಮಾಣಪತ್ರಗಳನ್ನು ನೀಡಲು ಬಾಕಿ ಉಳಿಸಿಕೊಂಡಿರುವ ಪ್ರಮುಖ ಇಲಾಖೆಗಳು
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ: 18,272.91 ಕೋಟಿ ರೂ.ಮೊತ್ತದ ಯುಸಿಗಳನ್ನು ನೀಡಲು ವಿಫಲವಾಗಿದೆ.
ಉನ್ನತ ಶಿಕ್ಷಣ ಇಲಾಖೆ: 14,359.76 ಕೋಟಿ ರೂ.ಮೊತ್ತದ ಯುಸಿಗಳನ್ನು ಸಲ್ಲಿಸಿಲ್ಲ.
ಒಟ್ಟಾರೆಯಾಗಿ, ಈ ಎರಡು ಇಲಾಖೆಗಳೇ ಪರಿಶೀಲನೆಯಾಗದ ಒಟ್ಟು ವೆಚ್ಚದ ಸಿಂಹಪಾಲನ್ನು ಹೊಂದಿವೆ.
ಇತರ ಸಚಿವಾಲಯಗಳು ಮತ್ತು ಇಲಾಖೆಗಳು:
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ,ಆಯುಷ್ ಸಚಿವಾಲಯ, ಔಷಧಿ ಇಲಾಖೆ,ಸಂಸ್ಕೃತಿ ಸಚಿವಾಲಯ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕಂದಾಯ ಇಲಾಖೆ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಯೋಜನಾ ಸಚಿವಾಲಯ,ಹಡಗು,ಬಂದರು ಮತ್ತು ಜಲಮಾರ್ಗಗಳ ಸಚಿವಾಲಯ,ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ದಶಕಗಳಿಂದ ಬಾಕಿ ಉಳಿದಿರುವ ಯುಸಿಗಳು:
ಸಲ್ಲಿಕೆಯಾಗದ ಒಟ್ಟು 33,973 ಪ್ರಮಾಣಪತ್ರಗಳ ಪೈಕಿ 13,926 ಯುಸಿಗಳು (ಒಟ್ಟು 38,287.52 ಕೋಟಿ ರೂ.) ಕಳೆದ ಮೂರು ಹಣಕಾಸು ವರ್ಷಗಳಲ್ಲಿ (ವಿತ್ತವರ್ಷ 2021-22 ರಿಂದ 2023-24) ನೀಡಲಾದ ಅನುದಾನಕ್ಕೆ ಸಂಬಂಧಿಸಿವೆ.
ಕೆಲವು ಬಾಕಿ ಅನುದಾನಗಳು 1985-86ರ ವಿತ್ತವರ್ಷದಷ್ಟು ಹಳೆಯದಾಗಿವೆ.
ಸಚಿವಾಲಯಗಳು ಮತ್ತು ಇಲಾಖೆಗಳು ಬಾಕಿ ಇರುವ ಯುಸಿಗಳ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಗೆಹರಿಸುತ್ತಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ನಿಧಿಗಳನ್ನು ಉದ್ದೇಶಿತ ಕಾರ್ಯಕ್ಕಾಗಿಯೇ ಬಳಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಯುಸಿಗಳನ್ನು ಪಡೆಯುವುದೇ ಏಕೈಕ ಮಾರ್ಗವಾಗಿರುವುದರಿಂದ ಅನುದಾನ ಪಡೆಯುವ ಸಂಸ್ಥೆಗಳಿಂದ ಸಮಯಕ್ಕೆ ಸರಿಯಾಗಿ ಯುಸಿ ಸಲ್ಲಿಕೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಇಲಾಖೆಗಳು ಬಲವಾದ ವ್ಯವಸ್ಥೆಯನ್ನು ರೂಪಿಸಬೇಕು ಎಂದು ವರದಿಯು ಒತ್ತಿ ಹೇಳಿದೆ.
ಶಾಸನಬದ್ಧ ನಿಯಮಗಳ ಉಲ್ಲಂಘನೆ
ಸಾಮಾನ್ಯ ಹಣಕಾಸು ನಿಯಮಗಳು,2017ರ ನಿಯಮ 238(1) ಮತ್ತು(2)ರ ಪ್ರಕಾರ ಸಂಸ್ಥೆಗಳಿಗೆ ನೀಡಲಾಗುವ ಮರುಕಳಿಸದ ಅನುದಾನಗಳಿಗೆ ನೈಜ ಬಳಕೆಯ ಪ್ರಮಾಣಪತ್ರದ ಅಗತ್ಯವಿರುತ್ತದೆ.
ವಿತ್ತವರ್ಷ ಮುಗಿದ 12 ತಿಂಗಳೊಳಗೆ ಯುಸಿಗಳನ್ನು ಸಲ್ಲಿಸಬೇಕು.
ನಿಗದಿತ ಅವಧಿಯಲ್ಲಿ ಯುಸಿಗಳನ್ನು ಸಲ್ಲಿಸದಿದ್ದರೆ ಅಂತಹ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಅಥವಾ ಭವಿಷ್ಯದ ಅನುದಾನ, ಸಬ್ಸಿಡಿ ಹಾಗೂ ಆರ್ಥಿಕ ನೆರವನ್ನು ತಡೆಹಿಡಿಯಲು ಸಚಿವಾಲಯಗಳಿಗೆ ಅಧಿಕಾರವಿರುತ್ತದೆ.
ಸರಕಾರದ ಪ್ರತಿಕ್ರಿಯೆ:
ಶಿಕ್ಷಣ ಸಚಿವಾಲಯ: ಯುಸಿಗಳಿಗೆ ಸಂಬಂಧಿಸಿದ ಡೇಟಾವನ್ನು ಮೇಲ್ವಿಚಾರಣೆ ಮಾಡಲು ಮತ್ತು ಟ್ರ್ಯಾಕ್ ಮಾಡಲು ಐಟಿ ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತನ್ನ ಉತ್ತರದ ಮೂಲಕ ತಿಳಿಸಿದೆ.
ಸಂಸ್ಕೃತಿ,ಆಯುಷ್,ಬುಡಕಟ್ಟು ವ್ಯವಹಾರಗಳು,ಔಷಧಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳು ಹಳೆಯ ದಾಖಲೆಗಳನ್ನು ಪರಿಶೀಲಿಸಲು ಮತ್ತು ಬಾಕಿ ನಿವಾರಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿವೆ.
ರಸ್ತೆ ಸಾರಿಗೆ,ಆರೋಗ್ಯ ಮತ್ತು ಹಡಗು ಸಚಿವಾಲಯ ಸೇರಿದಂತೆ ಹಲವು ಇಲಾಖೆಗಳು ಸಲ್ಲಿಕೆಯನ್ನು ಶೀಘ್ರಗೊಳಿಸಲು ಅನುಷ್ಠಾನಗೊಳಿಸುವ ಸಂಸ್ಥೆಗಳೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿವೆ.
ಉಳಿದ ಕೆಲವು ಸಚಿವಾಲಯಗಳು ಸಿಎಜಿಗೆ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯು ತಿಳಿಸಿದೆ.
ಕೃಪೆ: thewire.in

