ಮುಂಬೈ: ಪ್ರಸ್ತಾವಿತ ವಿದೇಶಿ ದೇಣಿಗೆ ನಿಯಂತ್ರಣ (ಈಅಖಂ) ತಿದ್ದುಪಡಿ ಮಸೂದೆ-2026 ಕುರಿತು ಅಮೆರಿಕ ಕಾಂಗ್ರೆಸ್ ಸದಸ್ಯ ರಿಲೇ ಮೂರೆ ವ್ಯಕ್ತಪಡಿಸಿರುವ ಟೀಕೆಯನ್ನು ಕೇಂದ್ರ ಸರಕಾರ ತಳ್ಳಿಹಾಕಿದೆ. ಶಾಸನಾತ್ಮಕ ವಿಷಯಗಳು ಭಾರತದ ಆಂತರಿಕ ವಿಚಾರವಾಗಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ವಿದೇಶಿ ದೇಣಿಗೆಯನ್ನು ನಿಯಂತ್ರಿಸುವ ಕಾನೂನುಗಳು ಜಾರಿಯಲ್ಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಪ್ರಸ್ತಾವಿತ ತಿದ್ದುಪಡಿಗಳು ಕ್ರಿಶ್ಚಿಯನ್ನರ ಮೇಲಿನ ನೇರ ದಾಳಿಯಾಗಿದ್ದು, ಇದರಿಂದ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಪಶ್ಚಿಮ ವರ್ಜೀನಿಯಾದ ರಿಪಬ್ಲಿಕನ್ ಪ್ರತಿನಿಧಿ ರಿಲೇ ಮೂರೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಕೇಂದ್ರ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತದಲ್ಲಿ ಕಾನೂನು ರೂಪಿಸುವುದಕ್ಕೆ ಸ್ಥಾಪಿತ ಪ್ರಜಾತಾಂತ್ರಿಕ ಪ್ರಕ್ರಿಯೆ ಇದೆ. ದೇಶೀಯ ಶಾಸನಗಳನ್ನು ಭಾರತದ ಸಾಂವಿಧಾನಿಕ ಮತ್ತು ಕಾನೂನು ಚೌಕಟ್ಟಿನಲ್ಲಿಯೇ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.
ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಸಂಘ-ಸಂಸ್ಥೆಗಳಿಗೆ ದೊರೆಯುವ ವಿದೇಶಿ ದೇಣಿಗೆಯನ್ನು ನಿಯಂತ್ರಿಸಲು ತಮ್ಮದೇ ಆದ ಕಾನೂನು ವ್ಯವಸ್ಥೆಯನ್ನು ಹೊಂದಿವೆ. ಆದ್ದರಿಂದ, ಭಾರತದ ಶಾಸನಾತ್ಮಕ ವಿಷಯಗಳ ಬಗ್ಗೆ ಹೊರಗಿನ ಟೀಕೆಗಳಿಗೆ ಅವಕಾಶವಿಲ್ಲ ಎಂಬ ಸಂದೇಶವನ್ನು ಅವರು ಪರೋಕ್ಷವಾಗಿ ನೀಡಿದರು.
ಆಗಸ್ಟ್ 4ರಂದು ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ರಿಲೇ ಮೂರೆ, ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ಯಾವುದೇ ಸಂಸ್ಥೆಯ ನೋಂದಣಿ ರದ್ದಾದರೆ ಅಥವಾ ನವೀಕರಣಗೊಳ್ಳದಿದ್ದರೆ, ಚರ್ಚ್ ಗಳು ಹಾಗೂ ಧಾರ್ಮಿಕ ದತ್ತಿಗಳನ್ನು ಭಾರತ ಸರಕಾರ ವಶಕ್ಕೆ ಪಡೆಯಲು ಪ್ರಸ್ತಾವಿತ ತಿದ್ದುಪಡಿಗಳು ಅವಕಾಶ ಕಲ್ಪಿಸುತ್ತವೆ ಎಂದು ಆರೋಪಿಸಿದ್ದರು.
ಇಂತಹ ತಿದ್ದುಪಡಿಗಳಿಂದ ಕ್ರಿಶ್ಚಿಯನ್ ಸಂಘ-ಸಂಸ್ಥೆಗಳೇ ಹೆಚ್ಚು ತೊಂದರೆಗೆ ಒಳಗಾಗಲಿವೆ. ಆದ್ದರಿಂದ, ಭಾರತ ಸರಕಾರ ಪ್ರಸ್ತಾವಿತ FCRA ತಿದ್ದುಪಡಿಗಳನ್ನು ಮರುಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದರು.
ಆದರೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ವಿದೇಶಿ ದೇಣಿಗೆಯನ್ನು ನಿಯಂತ್ರಿಸುವ ಕಾನೂನುಗಳು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲೂ ಜಾರಿಯಲ್ಲಿವೆ ಎಂದು ಪುನರುಚ್ಚರಿಸಿದೆ. ಜೊತೆಗೆ, ಭಾರತದ ಶಾಸನಾತ್ಮಕ ಪ್ರಕ್ರಿಯೆ ಸಂಪೂರ್ಣವಾಗಿ ದೇಶದ ಆಂತರಿಕ ವಿಚಾರವಾಗಿದ್ದು, ಅದನ್ನು ಅದೇ ನೆಲೆಯಲ್ಲಿ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿದೆ.

