ನವದೆಹಲಿ: ಲುಟಿಯೆನ್ಸ್ ದಿಲ್ಲಿಯಲ್ಲಿರುವ ಕೇಂದ್ರ ಸಚಿವರ ನಿವಾಸಗಳ ನಿರ್ವಹಣೆಗೆ ಸರಕಾರ ಮಾಡುತ್ತಿರುವ ವೆಚ್ಚವನ್ನು ಕಾಕ್ರೋಚ್ ಜನತಾ ಪಾರ್ಟಿ(CJP) ಪ್ರಶ್ನಿಸಿದೆ. ಈ ಹಣವನ್ನು ಸರಕಾರಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಬಳಸಬಹುದಿತ್ತು ಎಂದು ಪಕ್ಷವು ಹೇಳಿದೆ.
ಕೇಂದ್ರ ಸಚಿವರ ನಿವಾಸಗಳ ವಾರ್ಷಿಕ ನಿರ್ವಹಣಾ ವೆಚ್ಚವು 2014-15ರಲ್ಲಿ 27 ಕೋಟಿ ರೂ. ಇದ್ದದ್ದು, 2025-26ರಲ್ಲಿ ದಾಖಲೆಯ 92 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಈ ವರದಿಯ ಬೆನ್ನಲ್ಲೇ ಸಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
'ನಿಮ್ಮ ಆಡಂಬರದ ಮನೆಗಳನ್ನು ಸರಿಪಡಿಸುವುದನ್ನು ನಿಲ್ಲಿಸಿ, ಶಾಲೆಗಳನ್ನು ಸರಿಪಡಿಸಿ. 92 ಕೋಟಿ ರೂ. ಎಂದರೆ 10 ಹೊಸ ವಿಶ್ವ ದರ್ಜೆಯ ಸರಕಾರಿ ಶಾಲೆಗಳನ್ನು ನಿರ್ಮಿಸಬಹುದು. ಹಣ ಲಭ್ಯವಿದೆ; ಆದರೆ ಸರಕಾರಿ ಶಾಲೆಗಳಿಗೆ ಅದನ್ನು ಬಳಸುವ ಉದ್ದೇಶ ಕಾಣುತ್ತಿಲ್ಲ' ಎಂದು CJP ಹೇಳಿದೆ.
RTI ಮೂಲಕ ಮಾಹಿತಿ ಪಡೆಯಲಾಗಿದೆ ಎಂದು ಹೇಳಲಾದ ಪೋಸ್ಟ್ ನಲ್ಲಿ ಉಲ್ಲೇಖಿಸಿರುವ ಅಂಕಿಅಂಶಗಳ ಪ್ರಕಾರ, ಸಚಿವರ ನಿವಾಸಗಳ ನಿರ್ವಹಣೆಗೆ 2014ರಿಂದ 2019ರ ನಡುವೆ 133.9 ಕೋಟಿ ರೂ., 2019ರಿಂದ 2024ರ ನಡುವೆ 250 ಕೋಟಿ ರೂ. ಮತ್ತು 2024ರಿಂದ 2026ರ ನಡುವೆ 174.5 ಕೋಟಿ ರೂ. ಖರ್ಚಾಗಿದೆ. 12 ವರ್ಷಗಳ ಅವಧಿಯಲ್ಲಿ ಒಟ್ಟು 547.68 ಕೋಟಿ ರೂ. ವೆಚ್ಚವಾಗಿದೆ ಎಂದು ತಿಳಿಸಲಾಗಿದೆ.
'ಸ್ಕೂಲ್ ಠೀಕ್ ಕರೋ' ಅಭಿಯಾನ
ಗ್ರಾಮೀಣ ಸರಕಾರಿ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಸಿಜೆಪಿ ನಡೆಸುತ್ತಿರುವ 'ಸ್ಕೂಲ್ ಠೀಕ್ ಕರೋ' ಅಭಿಯಾನದ ನಡುವೆಯೇ ಈ ವಿಚಾರ ಮುನ್ನೆಲೆಗೆ ಬಂದಿದೆ.
CJP ಆಗಸ್ಟ್ 15ರಂದು 'ಸ್ಕೂಲ್ ಠೀಕ್ ಕರೋ' ಅಭಿಯಾನ ಆರಂಭಿಸಿತ್ತು. ಶಾಲೆಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು ಹಾಗೂ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಮತ್ತು ಮಧ್ಯಾಹ್ನದ ಊಟ ಸೇರಿದಂತೆ ಮೂಲಸೌಕರ್ಯಗಳನ್ನು ಸುಧಾರಿಸಬೇಕು ಎಂದು ಪಕ್ಷವು ಆಗ್ರಹಿಸಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾರಿಗೆ ಸಮಸ್ಯೆಯನ್ನೂ ಅಭಿಯಾನದಲ್ಲಿ ಪಕ್ಷ ಪ್ರಸ್ತಾಪಿಸಿದೆ. ಸಾರ್ವಜನಿಕ ಹಣ ಬೇರೆಡೆ ಲಭ್ಯವಿರುವಾಗ ಸರಕಾರಿ ಶಾಲೆಗಳು ಮೂಲಸೌಕರ್ಯದ ಕೊರತೆಯಿಂದ ಬಳಲಬಾರದು ಎಂದು CJP ಹೇಳಿದೆ.
'ಹಣದ ಕೊರತೆ ಎಂದಿಗೂ ಸಮಸ್ಯೆಯಾಗಿರಲಿಲ್ಲ. ಉದ್ದೇಶದ ಕೊರತೆಯೇ ಸಮಸ್ಯೆ' ಎಂದು ಪಕ್ಷವು Xನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ ಹೇಳಿದೆ.

