HEALTH TIPS

ಎರಡು ಪ್ಲೇಟ್ ಕಲುಷಿತ ಆಹಾರ ನೀಡಿದ ಬಿರಿಯಾನಿ ಕೆಫೆಗೆ ₹ 96,500 ದಂಡ!

 ಪತ್ತನಂತಿಟ್ಟ: ಕಲುಷಿತ ಆಹಾರ ಸೇವಿಸಿ ಅನಾರೋಗ್ಯಕ್ಕೀಡಾಗಿದ್ದ ಮಹಿಳೆಗೆ ₹ 96,500 ಪರಿಹಾರ ನೀಡುವಂತೆ ಜಿಲ್ಲೆಯ ಬಿರಿಯಾನಿ ಕೆಫೆಯೊಂದಕ್ಕೆ ಕೇರಳಂನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. 


ರನ್ನಿ ಪಟ್ಟಣದಲ್ಲಿರುವ ಕಿಂಗ್ಸ್‌ ಬಿರಿಯಾನಿ ಕೆಫೆ ಮಾಲೀಕ ಮತ್ತು ವ್ಯವಸ್ಥಾಪಕ ಜಂಟಿಯಾಗಿ ಪರಿಹಾರ ಪಾವತಿಸಬೇಕು.

ಆಸ್ಪತ್ರೆ ವೆಚ್ಚವಾಗಿ ₹ 36,500, ಪರಿಹಾರವಾಗಿ ₹ 50,000 ಮತ್ತು ಮೊಕದ್ದಮೆ ವೆಚ್ಚವಾಗಿ ₹ 10,000 ಸೇರಿ ಒಟ್ಟು ₹ 96,500 ಅನ್ನು 30 ದಿನಗಳ ಒಳಗೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವೆಚೂಚಿರಾ ನಿವಾಸಿ ರೀನಾ ಥಾಮಸ್‌ ಅವರು ಬಿರಿಯಾನಿ ಕೆಫೆ ವಿರುದ್ಧ ದೂರು ದಾಖಲಿಸಿದ್ದರು.

ದೂರಿನಲ್ಲಿರುವ ಮಾಹಿತಿ ಪ್ರಕಾರ, ರನ್ನಿಯ ಚೇತೋಂಕರದಲ್ಲಿರುವ ಕೆಫೆಗೆ 2025ರ ಅಕ್ಟೋಬರ್‌ 21ರಂದು ತಮ್ಮ ಸಹೋದರಿ ಜೊತೆ ಹೋಗಿದ್ದಾಗ ಅರೇಬಿಯನ್‌ ಖಾದ್ಯ ಅಲ್ಫಹಮ್‌ಗೆ ಆರ್ಡರ್‌ ಮಾಡಿದ್ದರು. ರುಚಿಯಲ್ಲಿ ವ್ಯತ್ಯಾಸವಿರುವುದು ಗಮನಕ್ಕೆ ಬಂದಿತ್ತು. ಕೂಡಲೇ ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆದರೆ, ಆಹಾರದಲ್ಲೇನೂ ಸಮಸ್ಯೆ ಇಲ್ಲ. ನೀವು ತಪ್ಪಾಗಿ ಭಾವಿಸಿದ್ದೀರಿ ಎಂದು ಸಿಬ್ಬಂದಿ ತಿಳಿಸಿದ್ದರಿಂದ, ರೀನಾ ಅವರು ಆಹಾರ ಸೇವಿಸಿದ್ದರು. ಆದರೆ, ಅವರ ಸಹೋದರಿ ಹೆಚ್ಚೇನೂ ಸೇವಿಸದೆ, ಪ್ಲೇಟ್‌ನಲ್ಲಿ ಉಳಿದಿದ್ದನ್ನು ಪ್ಯಾಕ್‌ ಮಾಡಿಸಿಕೊಂಡಿದ್ದರು.

ನಂತರ ಡೆಬಿಟ್‌ ಕಾರ್ಡ್‌ ಮೂಲಕ ₹ 740 ಪಾವತಿಸಿ ಮನೆಗೆ ಮರಳಿದ್ದರು. ಮನೆಗೆ ಮರಳುವಷ್ಟರಲ್ಲಿ ರೀನಾ ಅವರಿಗೆ ಸುಸ್ತು, ಹೊಟ್ಟೆ ನೋವು, ತಲೆ ಸುತ್ತು ಕಾಣಿಸಿಕೊಂಡಿತ್ತು. ವಾಂತಿಯೂ ಆಗಿತ್ತು. ವೆಚೂಚಿರಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ, ಸರಿಹೋಗಿರಲಿಲ್ಲ. ಹಾಗಾಗಿ, ಕಾಂಜಿರಪ್ಪಳ್ಳಿಯ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವಾರ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು. ಸರಿಯಾಗಿ ಬೇಯಿಸದ ಹಾಗೂ ಕೆಟ್ಟಿದ್ದ ಆಹಾರ ಸೇವಿಸಿದ್ದರಿಂದ ಸಾಲ್ಮೊನೆಲ್ಲಾ ಸೋಂಕು ತಗುಲಿದೆ ಎಂಬುದಾಗಿ ವೈದ್ಯರು ತಿಳಿಸಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ರೀನಾ ಅವರ ಪುತ್ರ ಕೆಫೆ ಮಾಲೀಕರಿಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದರು. ಆದರೆ, ಸರಿಯಾದ ಸ್ಪಂದನೆ ದೊರೆತಿರಲಿಲ್ಲ. ನಂತರ, ₹ 6,000 ನೀಡುವುದಾಗಿ ಹೇಳಿದ್ದರು. ಅದಕ್ಕೆ ಒಪ್ಪದ ರೀನಾ, ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

ಈ ಸಂಬಂಧ ಆಯೋಗ ಮಾಲೀಕ ಮತ್ತ ವ್ಯವಸ್ಥಾಪಕ ಇಬ್ಬರಿಗೂ ನೋಟಿಸ್‌ ನೀಡಿತ್ತು. ಮಾಲೀಕ ಮಾತ್ರವೇ ವಿಚಾರಣೆಗೆ ಹಾಜರಾಗಿದ್ದರು.

ರೀನಾ ಅವರು ಚಿಕಿತ್ಸೆ ಪಡೆದಿದ್ದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗ, ಮಹಿಳೆಯ ಆರೋಪದಲ್ಲಿ ಸತ್ಯಾಂಶವಿದೆ ಎಂದು ಪರಿಗಣಿಸಿ ಹಾಗೂ ವ್ಯವಸ್ಥಾಪಕ ವಿಚಾರಣೆಗೆ ಗೈರಾಗಿರುವುದು ಆರೋಪಕ್ಕೆ ಪುಷ್ಟಿ ನೀಡಿದೆ ಎಂದು ಮನಗಂಡು ಆದೇಶ ಪ್ರಕಟಿಸಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries