ಉಜ್ಜೈನಿ: ಕೃತಕ ಬುದ್ಧಿಮತ್ತೆ ಅಥವಾ ಎಐ ದಿನದಿಂದ ದಿನಕ್ಕೆ ತಾಂತ್ರಿಕವಾಗಿ ಬೆಳೆಯುತ್ತಿದ್ದು, ದೈನಂದಿನ ಸಮಸ್ಯೆಗೂ ಪರಿಹಾರ ನೀಡಬಲ್ಲುದು ಎಂಬುದನ್ನು ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದ ಘಟನೆಯೊಂದು ಸಾಬೀತುಪಡಿಸಿದೆ.
ಗೋವಾ ಮೂಲದ ಇನ್‌ಸ್ಟಾಗ್ರಾಮ್ ಬಳಕೆದಾರ ಶುಭಾಂಗ್ ಬೋರ್ಕರ್ ಉಜ್ಜೈನಿಯಲ್ಲಿರುವ ಮಹಾಕಾಲ್ ದೇವಾಲಯದ ಹೊರಗೆ ಅಸಂಖ್ಯಾತ ಪಾದರಕ್ಷೆಗಳಲ್ಲಿ ತನ್ನ ಪಾದರಕ್ಷೆಯನ್ನು ಕಳೆದುಕೊಂಡಿದ್ದರು.
ಅಸಹಾಯಕರಾದ ಅವರು ಅಂತಿಮವಾಗಿ ಚಾಟ್ ಜಿಪಿಟಿಯ ಮೊರೆ ಹೋದರು. ಚಾಟ್‌ಜಿಪಿಟಿ ಅವರಿಗೆ ಪಾದರಕ್ಷೆಯನ್ನು ಹುಡುಕಿಕೊಟ್ಟಿದೆ.
ಶೂ ರ್ಯಾಕ್‌ಗಳಲ್ಲಿ ಕಳೆದು ಹೋದ ಪಾದರಕ್ಷೆಯನ್ನು ಪತ್ತೆ ಹಚ್ಚಲು ತಾನು ಚಾಟ್‌ಜಿಪಿಟಿಯನ್ನು ಹೇಗೆ ಬಳಸಿದೆ ಎಂಬುದನ್ನು ತೋರಿಸುವ ವೀಡಿಯೊವನ್ನು ಶುಭಾಂಗ್ ಬೋರ್ಕರ್ ಹಂಚಿಕೊಂಡಿದ್ದಾರೆ.
ವೀಡಿಯೊದಲ್ಲಿ ಶುಭಾಂಗ್ ಅವರು ಮೊದಲು ತಮ್ಮ ಸುತ್ತಲಿರುವ ಪಾದರಕ್ಷೆಗಳ ಸಾಲುಗಳನ್ನು ರೆಕಾರ್ಡ್ ಮಾಡಿದರು. ಅನಂತರ ಚಾಟ್‌ಜಿಪಿಟಿ ತೆರೆದು, ತಮ್ಮ ಪಾದರಕ್ಷೆ ಹೇಗಿವೆ ಎಂಬುದನ್ನು ತೋರಿಸುವ ಪ್ರತ್ಯೇಕ ಚಿತ್ರ ಹಾಗೂ ವೀಡಿಯೊವನ್ನು ಅಪ್‌ಲೋಡ್ ಮಾಡಿದರು.
ತಾನು ಉಜ್ಜೈನಿಯ ಮಹಾಕಾಲ್ ದೇವಾಲಯದಲ್ಲಿದ್ದು, ಹೊರಗೆ ಇರಿಸಿರುವ ತನ್ನ ಪಾದರಕ್ಷೆ ಕಳೆದು ಹೋಗಿವೆ ಎಂದು ವಿವರಿಸಿದರು. ಪರಿಶೀಲಿಸಿ ತಮ್ಮ ಪಾದರಕ್ಷೆಯನ್ನು ಗುರುತಿಸುವಂತೆ ಅವರು ಎಐಯನ್ನು ಕೋರಿದರು.
ಶುಭಾಂಗ್ ರ್ಯಾಕ್‌ಗಳ ಫೋಟೋಗಳನ್ನು ಕಳುಹಿಸುವುದನ್ನು ಮುಂದುವರಿಸಿದರು. ಚಾಟ್‌ಜಿಪಿಟಿ ಪ್ರತಿ ಚಿತ್ರವನ್ನು ವಿಶ್ಲೇಷಿಸಿತು. ಅನಂತರ ಅಂತಿಮವಾಗಿ ನಿರ್ದಿಷ್ಟ ಪಾದರಕ್ಷೆಯನ್ನು ಸೂಚಿಸಿತು. ರ್ಯಾಕ್‌ನ ಬಲಭಾಗವನ್ನು, ಅದರ ಕೆಳಗಿನ ರಾಕ್‌ನ ಮಧ್ಯಭಾಗವನ್ನು ಪರಿಶೀಲಿಸುವಂತೆ ಅದು ಹೇಳಿತು. ಅಲ್ಲದೆ, ಆ ಪಾದರಕ್ಷೆ ಅವರದ್ದೇ ಆಗಿರಬಹುದು ಎಂದು ತಿಳಿಸಿತು.
ಅನಂತರ ಶುಭಾಂಗ್ ಸ್ವತಃ ಆ ಸ್ಥಳವನ್ನು ಪರಿಶೀಲಿಸಿದರು. ಚಾಟ್ ಜಿಪಿಟಿ ಹೇಳಿದಂತೆ ನಿಜಕ್ಕೂ ಅವರ ಪಾದರಕ್ಷೆ ಅಲ್ಲಿತ್ತು.

