ರಾಂಚಿ: ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು, ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕೃತಿಗಳನ್ನು ದಹಿಸುವುದಾಗಿ ಭಾನುವಾರ ಘೋಷಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ 23ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಜೆಎಂಎಂ-ಕಾಂಗ್ರೆಸ್ ಮೈತ್ರಿ ಸರ್ಕಾರವು ವಿಫಲವಾಗಿರುವ ಕಾರಣ ರಾಜ್ಯದ ಎಲ್ಲಾ 24 ಜಿಲ್ಲೆಗಳಲ್ಲೂ ಪ್ರತಿಕೃತಿ ದಹಿಸಲು ನಿರ್ಧರಿಸಿರುವುದಾಗಿ ವಿದ್ಯಾರ್ಥಿಗಳಲು ತಿಳಿಸಿದ್ದಾರೆ. ಜತೆಗೆ ಆ.20ರಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿಯೂ ಘೋಷಿಸಿ, ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಬೆಂಬಲ ಕೋರಿದ್ದಾರೆ.
ಜತೆಗೆ 'ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಪರವಾಗಿ ಇರುವುದಾಗಿ ಹೇಳಿದ್ದಾರೆ. ಆದರೆ, ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಸೊರೇನ್ ಅವರು ರಾಹುಲ್ ಅವರ ಮಾತನ್ನು ಕೇಳುತ್ತಿಲ್ಲ ಎನ್ನುವುದಾದರೆ ಜೆಎಂಎಂಗೆ ನೀಡಿರುವ ಬೆಂಬಲವನ್ನು ಕಾಂಗ್ರೆಸ್ ಹಿಂಪಡೆಯಲಿ' ಎಂದೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

