ಪಾಟ್ನಾ: ವಶಪಡಿಸಿಕೊಳ್ಳಲಾಗಿದ್ದ ಜಲ್ಲಿಕಲ್ಲುಗಳು ತುಂಬಿದ್ದ ಟ್ರಕ್ ವೊಂದು ಬಿಹಾರದ ಮುಂಗೇರ್ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಿಂದ ನಾಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.
ಕಳೆದ ತಿಂಗಳು ಜಿಲ್ಲಾ ಗಣಿ ಇಲಾಖೆ ಅಧಿಕಾರಿಗಳು ಜಲ್ಲಿಕಲ್ಲುಗಳನ್ನು ಸಾಗಿಸುತ್ತಿದ್ದ ಈ ಟ್ರಕ್ ಅನ್ನು ವಶಪಡಿಸಿಕೊಂಡು ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು.
ಪೊಲೀಸ್ ಠಾಣೆಯ ಆವರಣದಿಂದ ಟ್ರಕ್ ನಾಪತ್ತೆಯಾಗಿರುವುದು ಶನಿವಾರ ನಮಗೆ ತಿಳಿದುಬಂದಿದ್ದು, ತಕ್ಷಣವೇ ಸಂಬಂಧಪಟ್ಟ ಠಾಣಾಧಿಕಾರಿ ಮತ್ತು ಗಣಿ ಅಧಿಕಾರಿಯನ್ನು ಕರೆಸಲಾಗಿತ್ತು. ವಶಪಡಿಸಿಕೊಂಡ ಟ್ರಕ್ ನಾಪತ್ತೆಯಾಗಿರುವ ವಿಷಯ ತನಗೆ ತಿಳಿದಿಲ್ಲ ಎಂದು ಠಾಣಾಧಿಕಾರಿ ಹೇಳಿದ್ದಾರೆ. ಕಳೆದ ತಿಂಗಳು ಗಣಿ ಅಧಿಕಾರಿಯಿಂದ ವಶಪಡಿಸಿಕೊಂಡ ಟ್ರಕ್ ಅನ್ನು ಸ್ವೀಕರಿಸಿದ್ದ ಪೊಲೀಸ್ ಠಾಣೆಯ ಸಂಬಂಧಪಟ್ಟ ಸಹಾಯಕ ಸಬ್ಇನ್ಸ್ಪೆಕ್ಟರ್ ನನ್ನೂ ಕರೆಸಲಾಗಿತ್ತು ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಮುಂಗೇರ್ ಎಸ್ಪಿ ಇಮ್ರಾನ್ ಮಸೂದ್ ಅವರು, ಇದು ಗಂಭೀರ ಘಟನೆಯಾಗಿದ್ದು, ಈ ಬಗ್ಗೆ ತನಿಖೆಗಾಗಿ ಉನ್ನತ ಮಟ್ಟದ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು.
ತನಿಖಾ ವರದಿಯ ಆಧಾರದಲ್ಲಿ ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದರು.

