ಮಂಜೇಶ್ವರ: ಮದ್ರಸದಿಂದ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಬೆದರಿಸಿದ ಬಗ್ಗೆ ವಿಚಾರಿಸಲು ತೆರಳಿದವರ ಮೇಲೆ ಹೆಲ್ಮೆಟ್‍ನಿಂದ ಬಡಿದು, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿ ಸೈಫುದ್ದೀನ್ ಯಾನೆ ಪೂಚ ಸೈಫುದ್ದೀನ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಎಸ್‍ಐ ಕೆ.ಪಿ. ಶರತ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.
ಇತರ ಆರೋಪಿಗಳಾದ ಮೊರತ್ತಣೆ ನಿವಾಸಿ ರಾಸಿಕ್ (30), ಕಡಂಬಾರಿನ ರಾಫಿ, ಶಫೀಫ್ ಎಂಬವರು ತಲೆಮರೆಸಿಕೊಂಡಿದ್ದಾರೆ.
ಬುಡಾಜೆ ಕಡಂಬಾರ್ ಕಾಲೆ ಸಮೀಪದ ಇಬ್ರಾಹಿಂ ಖಲೀಲ್ (36)ಎಂಬವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಬುಧವಾರ ರಾತ್ರಿ ಬಡಾಜೆ ಕನಿಲದಲ್ಲಿ ಘಟನೆ ನಡೆದಿದ್ದು, ಮದ್ರಸಾದಿಂದ ಮನೆಗೆ ತೆರಳುತ್ತಿದ್ದ ಬಾಲಕಿಯರನ್ನು ರಾಸಿಕ್, ರಾಫಿ, ಶಫೀಫ್ ಎಂಬವರ ತಂಡ ಬೆದರಿಸಿದ್ದು, ಈ ಬಗ್ಗೆ ವಿಚಾರಿಸಲು ತೆರಳಿದ್ದ ಇಬ್ರಾಹಿಂ ಖಲೀಲ್ ಹಾಗೂ ಸಹೋದರನಿಗೆ ತಂಡ ಹಲ್ಲೆ ನಡೆಸಿತ್ತು.


