ನವದೆಹಲಿ; 'ನ್ಯಾಯಾಂಗ ಕಲಾಪದ ವರದಿಯ ಜತೆಗೆ ವಿಚಾರಣಾ ಪ್ರಕ್ರಿಯೆಯ ಆಡಿಯೊ- ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮತ್ತು ಅಪ್‌ಲೋಡ್ ಮಾಡುವುದನ್ನು ನಿರ್ಬಂಧಿಸಿದ್ದ ತನ್ನ ಇತ್ತೀಚಿನ ಮಧ್ಯಂತರ ಆದೇಶವು, ಮಾಧ್ಯಮ ಸಂಸ್ಥೆಗಳಿಗೆ ನ್ಯಾಯಾಂಗ ಕಲಾಪವನ್ನು ವರದಿ ಮಾಡುವುದನ್ನು ನಿರ್ಬಂಧಿಸುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಸಾಮಾಜಿಕ ಜಾಲತಾಣ ಮತ್ತು ಇತರೆ ಡಿಜಿಟಲ್ ವೇದಿಕೆಗಳಲ್ಲಿ ನ್ಯಾಯಾಂಗ ಕಲಾಪದ ಆಡಿಯೊ-ವಿಡಿಯೊ ತುಣುಗಳನ್ನು ಪೋಸ್ಟ್ ಮಾಡುವುದು ಮತ್ತು ಅಪ್‌ಲೋಡ್ ಮಾಡುವುದನ್ನು ನಿಷೇಧಿಸುವ ಜುಲೈ 24ರ ಮಧ್ಯಂತರ ಆದೇಶದ ಬಗ್ಗೆ ಕೆಲವು ಗೊಂದಲಗಳು ಮುಂದುವರಿದಿರುವುದು ಕೋರ್ಟ್ ಗಮನಕ್ಕೆ ಬಂದ ನಂತರ, ಈ ಸ್ಪಷ್ಟೀಕರಣ ಹೊರಬಿದ್ದಿದೆ.
'ನ್ಯಾಯಾಂಗ ಕಲಾಪವನ್ನು ವರದಿ ಮಾಡುವಾಗ, ವಿಚಾರಣಾ ಪ್ರಕ್ರಿಯೆಯ ಆಡಿಯೊ-ವಿಡಿಯೊ ರೆಕಾರ್ಡಿಂಗ್‌ಗಳ ಬಳಕೆಗೆ ಹೇರಿದ್ದ ನಿರ್ಬಂಧವು ಸೀಮಿತವಾಗಿದೆ, ಇದನ್ನು ಮಾಧ್ಯಮ ಸಂಸ್ಥೆಗಳ ವರದಿಯ ಮೇಲಿನ ಸಂಪೂರ್ಣ ನಿಷೇಧ ಎಂದು ಅರ್ಥೈಸಬಾರದು' ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಹೇಳಿದೆ.
'ಸುದ್ದಿಸಂಸ್ಥೆಗಳು ನ್ಯಾಯಾಂಗ ಕಲಾಪದ ವರದಿಯನ್ನು ಮುಕ್ತವಾಗಿ ಮಾಡಬಹುದು. ಆದರೆ, ಪೂರ್ವಾನುಮತಿ ಇಲ್ಲದೆ ವಿಚಾರಣಾ ಪ್ರಕ್ರಿಯೆಯ ಆಡಿಯೊ-ವಿಡಿಯೊ ತುಣುಗಳನ್ನು ವರದಿಯಲ್ಲಿ, ಡಿಜಿಟಲ್ ವೇದಿಕೆಗಳಲ್ಲಿ ಬಳಸಿಕೊಳ್ಳುವಂತಿಲ್ಲ' ಎಂದು ನ್ಯಾಯಪೀಠ ಹೇಳಿದೆ.
'ಒಟ್ಟಾರೆಯಾಗಿ ಮಾಧ್ಯಮ ಸಂಸ್ಥೆಗಳು ನ್ಯಾಯಾಂಗ ಕಲಾಪ ವರದಿ ಮಾಡುವುದನ್ನು ಮುಂದುವರಿಸಬಹುದು. ಆದರೆ, ಅವು ಜುಲೈ 31ರಂದು ಹೊರಡಿಸಲಾದ ಆದೇಶದ ಪ್ಯಾರಾ 10ರಲ್ಲಿನ ನಿರ್ಬಂಧಗಳಿಗೆ ಬದ್ಧವಾಗಿರಬೇಕು' ಎಂದು ಎಂದು ಪೀಠವು ತಿಳಿಸಿದೆ.
ಪತ್ರಕರ್ತೆ ಹರ್ಷಿತಾ ಗ್ರೋವರ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ, ಕೆಲವು ಸಾಮಾಜಿಕ ಜಾಲತಾಣಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.

