ಪೆಸಿಫಿಕ್ ಮಹಾಸಾಗರದಲ್ಲಿ 'ಡಿಮ್-ಸಮ್' ಹೆಸರಿನ ಚಂಡಮಾರುತ ತೀವ್ರಗೊಳ್ಳುತ್ತಿದೆ ಎಂದು ವರದಿಯಾಗಿದೆ.
ಹೌದು, ಜೂನ್‌ನಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಟೈಫೂನ್ (ತೂಫಾನು) ಋತು ಆರಂಭವಾಗುತ್ತದೆ. ಈ ಬಾರಿ ಉಷ್ಣವಲಯದ ಚಂಡಮಾರುತಗಳ ಸಾಲಿಗೆ ಹಾಂಕಾಂಗ್ ನಗರದ ಪ್ರಸಿದ್ಧ ಉಪಹಾರ 'ಡಿಮ್-ಸಮ್' ಹೆಸರು ಸೇರ್ಪಡೆಯಾಗಿದೆ.
ಹಾಂಕಾಂಗ್, ಪ್ರೀತಿಯ ಸಂಕೇತವೊಂದರ ಹೆಸರನ್ನು ಚಂಡಮಾರುತಕ್ಕೆ ಇಟ್ಟಿರುವುದು ಇದೇ ಮೊದಲೇನಲ್ಲ. ಚೀನಾ, ತೈವಾನ್ ಮತ್ತು ಜಪಾನ್‌ನಲ್ಲಿ ವ್ಯಾಪಕ ಮಳೆಗೆ ಕಾರಣವಾದ 'ಡಾಲ್ಫಿನ್' ಚಂಡಮಾರುತಕ್ಕೆ ನಗರದ ಅಧಿಕೃತ ಪ್ರಾಣಿ 'ಮ್ಯಾಸ್ಕಾಟ್'ನ ಹೆಸರನ್ನು ಇಡಲಾಗಿತ್ತು.
'ಡಾಲ್ಫಿನ್' ನಂತರ ಪೆಸಿಫಿಕ್ ಮಹಾಸಾಗರದಲ್ಲಿ ಮಕಾವು ಸಂಸ್ಥಾನವು ಚಮಚದಂತಹ ಕೊಕ್ಕಿನ ಹಕ್ಕಿಯ (Spoonbill Bird) ಹೆಸರಿಟ್ಟ 'ಪೈಲೌ' (Peilou) ಮತ್ತು ಲಾವೋಸ್‌ನ ಮರವೊಂದರ ಹೆಸರಿಟ್ಟ 'ಚಾನ್-ಹೋಮ್' (Chan-hom) ಚಂಡಮಾರುತಗಳು ರೂಪುಗೊಂಡಿವೆ.
ಹೆಸರು ಇಡಲು ಒಂದು ಪ್ರಕ್ರಿಯೆ
ಏಷ್ಯಾ ಪೆಸಿಫಿಕ್ ದೇಶಗಳು ಉಷ್ಣವಲಯದ ಚಂಡಮಾರುತಗಳನ್ನು ಎದುರಿಸಲು ನೆರವಾಗುವ ಉದ್ದೇಶದಿಂದ 1968ರಲ್ಲಿ ವಿಶ್ವಸಂಸ್ಥೆ ಮತ್ತು ವಿಶ್ವ ಹವಾಮಾನ ಸಂಸ್ಥೆಯು (ಡಬ್ಲ್ಯುಎಂಒ) 'ಟೈಫೂನ್ ಸಮಿತಿ'ಯನ್ನು ರಚಿಸಿತ್ತು. ಈ ಸಮಿತಿಯು ಚಂಡಮಾರುತಗಳಿಗೆ ಹೆಸರುಗಳನ್ನು ಸೂಚಿಸುತ್ತದೆ.
ಈ ಸಮಿತಿಯು 140 ಹೆಸರುಗಳ ಸಕ್ರಿಯ ಪಟ್ಟಿಯನ್ನು ನಿರ್ವಹಿಸುತ್ತದೆ. ಈ ಹೆಸರುಗಳನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಚಂಡಮಾರುತಗಳ ಸಂಭವಿಸುವ ಆವರ್ತನಕ್ಕೆ ಅನುಗುಣವಾಗಿ ಪ್ರತಿ ನಾಲ್ಕು ಅಥವಾ ಐದು ವರ್ಷಗಳಿಗೊಮ್ಮೆ ಇವುಗಳನ್ನು ಸರದಿಯಂತೆ ಬಳಸಲಾಗುತ್ತದೆ.
ಒಂದು ವೇಳೆ ಕೆಲ ಚಂಡಮಾರುತಗಳು ವ್ಯಾಪಕ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದ್ದರೆ, ಅವುಗಳ ಹೆಸರುಗಳನ್ನು ಕೈಬಿಡಲಾಗುತ್ತದೆ.
ಅಮೆರಿಕ, ಚೀನಾ, ಕೊರಿಯಾ, ಹಾಂಕಾಂಗ್, ಮಲೇಷ್ಯಾ ಸೇರಿದಂತೆ 'ಟೈಫೂನ್ ಸಮಿತಿ'ಯ 14 ಸದಸ್ಯ ರಾಷ್ಟ್ರಗಳು ತಲಾ 10 ಹೆಸರುಗಳನ್ನು ಸೂಚಿಸುತ್ತವೆ. ಹೀಗೆ ಸೂಚಿಸಿದ ಹೆಸರುಗಳನ್ನು ಆಯಾ ದೇಶಗಳ ಭಾಷೆ ಮತ್ತು ಸಂಸ್ಕೃತಿಯನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಹಾಗೆಯೇ ಪ್ರಾಣಿಗಳು, ಸಸ್ಯಗಳು, ಐತಿಹಾಸಿಕ ಮತ್ತು ಪೌರಾಣಿಕ ವ್ಯಕ್ತಿಗಳು ಹಾಗೂ ಆಹಾರ ಪದಾರ್ಥಗಳ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲಾಗುತ್ತದೆ.
ಸಮಿತಿಯು ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ಇತ್ತೀಚಿನ ಪಟ್ಟಿಯ ಪ್ರಕಾರ, ಡಿಮ್-ಸಮ್ ಜತೆಗೆ 'ಗೇಗುರಿ' (ಕೊರಿಯನ್ ಭಾಷೆಯಲ್ಲಿ ಕಪ್ಪೆ ಎಂದು ಕರೆಯಲಾಗುತ್ತದೆ), 'ಬುರಾಫಾ' (ಥಾಯ್ಲೆಂಡ್ ಪದ) ಮತ್ತು 'ತಿರೌ'ದಂತಹ (ಮೈಕ್ರೋನೇಷಿಯನ್ ಶುಭಾಶಯ) ಹೆಸರುಗಳು ಸೇರಿಕೊಳ್ಳಲಿವೆ.
ಚಂಡಮಾರುತ ಎಂದರೆ...
ಚಂಡಮಾರುತ ಹವಾಮಾನಕ್ಕೆ ಸಂಬಂಧಿಸಿದ ಘಟನೆ. ವಾಯುಭಾರ ಕುಸಿತದ ಕೇಂದ್ರ ಬಿಂದುವಿನ ಸುತ್ತ ಗರಿಷ್ಠ ಒತ್ತಡದ ವ್ಯವಸ್ಥೆ ರೂಪುಗೊಂಡಾಗ ಚಂಡಮಾರುತ ರೂಪುಗೊಳ್ಳುತ್ತದೆ. ಪರಸ್ಪರ ವಿರುದ್ಧ ವರ್ತಿಸುವ ಶಕ್ತಿಗಳು ಗಾಳಿ ರೂಪುಗೊಳ್ಳಲು ಕಾರಣವಾಗುತ್ತವೆ. ಇದರಿಂದ ಮಳೆ ಮೋಡಗಳು ನಿರ್ಮಾಣಗೊಳ್ಳುತ್ತವೆ. ಭೂ ಮೇಲ್ಮೈನಲ್ಲಿನ ಬಿಸಿ ಗಾಳಿಯ ಫಲವಾಗಿ ಸ್ಥಳೀಯವಾಗಿ ವಾಯುಭಾರ ಕುಸಿತ ಉಂಟಾಗಿ ಸಣ್ಣ ಪ್ರಮಾಣದ ಸುಂಟರಗಾಳಿ ನಿರ್ಮಾಣಗೊಳ್ಳುತ್ತದೆ.
ಪಶ್ಚಿಮ ಪೆಸಿಫಿಕ್ ಮಹಾಸಾಗರದ ಮೇಲೆ ರೂಪುಗೊಂಡು ಏಷ್ಯಾದ ಮೇಲೆ ಪರಿಣಾಮ ಬೀರುವ ಚಂಡಮಾರುತಗಳನ್ನು 'ಟೈಫೂನ್' ಎಂದು ಕರೆಯಲಾಗುತ್ತದೆ.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹವಾಮಾನ ಮುನ್ಸೂಚನೆಗಳನ್ನು ಸೂಕ್ಷ್ಮ ಸೇನಾ ಗುಪ್ತಚರ ಮಾಹಿತಿ ಎಂದು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಜಪಾನಿನ ಆಕ್ರಮಣಕಾರಿ ಪಡೆಗಳು ಏಷ್ಯಾದ ಹಲವು ದೇಶಗಳ ಹವಾಮಾನ ತಜ್ಞರು ಕೆಲಸ ಮಾಡದಂತೆ ತಡೆದಿದ್ದವು ಎಂದು ಫಿಲಿಪೈನ್ಸ್ ಹವಾಮಾನ ಇಲಾಖೆಯ ಇತಿಹಾಸಕಾರ ರೇ ಲಿರಿಯೋಸ್ ತಿಳಿಸಿದ್ದಾರೆ. ಯುದ್ಧದ ನಂತರ, ಆ ದೇಶಗಳು ಅಮೆರಿಕದ ಪೆಸಿಫಿಕ್ ಪ್ರಾಂತ್ಯವಾದ ಗುವಾಮ್‌ನಲ್ಲಿರುವ ಮಿಲಿಟರಿ ಹವಾಮಾನ ತಜ್ಞರನ್ನು ನೆಚ್ಚಿಕೊಂಡಿದ್ದವು.
ಗಾಳಿಯ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು, ಅಮೆರಿಕದ ಹವಾಮಾನ ತಜ್ಞರು ಮೊದಲು ತಮ್ಮ ಹೆಂಡತಿ ಮತ್ತು ಗೆಳತಿಯರ ಹೆಸರುಗಳನ್ನು ಒಳಗೊಂಡಿದ್ದ ಪಟ್ಟಿಯನ್ನು ಸಿದ್ಧಪಡಿಸಿದ್ದರು. 1970ರ ದಶಕದಲ್ಲಿ ಲಿಂಗ ಸಮಾನತೆ ಚಳವಳಿಯಿಂದಾಗಿ ಅಮೆರಿಕ ಸರ್ಕಾರ ಪುರುಷರ ಹೆಸರುಗಳನ್ನು ಸೇರಿಸಲು ಮುಂದಾಯಿತು ಎಂದು ಹಾಂಕಾಂಗ್ ಮೂಲದ ಲ್ಯಾಮ್ ಚಿಯು ಯಿಂಗ್ ತಿಳಿಸಿದ್ದಾರೆ.
1990ರ ದಶಕದಲ್ಲಿ ಟೈಫೂನ್ ಸಮಿತಿಯ ಸದಸ್ಯರು ಅಮೆರಿಕದ ಹೆಸರುಗಳ ಬದಲಿಗೆ ಪ್ರಾದೇಶಿಕ ಹೆಸರುಗಳನ್ನು ಬಳಸಲು ಒತ್ತಾಯಿಸಿದ್ದರು. ಕೆಲವರು ಈ ಪ್ರಕ್ರಿಯೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದರು.
'ಇತರ ಭಾಷೆಗಳಲ್ಲಿ ಅಸಭ್ಯ ಅಥವಾ ನಕಾರಾತ್ಮಕ ಅರ್ಥಗಳನ್ನು ನೀಡುವ ಹೆಸರುಗಳನ್ನು ಟೈಫೂನ್ ಸಮಿತಿಯು ತಿರಸ್ಕರಿಸಿತ್ತು. ರಾಜಕೀಯ ನಾಯಕರು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ಗಣ್ಯರ ಹೆಸರುಗಳನ್ನು ಸಹ ಇಡುವಂತಿರಲಿಲ್ಲ' ಎಂದು ಲಿರಿಯೋಸ್ ಎಂಬುವರು ಹೇಳಿದ್ದಾರೆ.
2005ರಲ್ಲಿ ಹಾಂಕಾಂಗ್‌ನಲ್ಲಿ ಸಾರ್ವಜನಿಕರು ಸೂಚಿಸಿದ್ದ ಎರಡು ಹೆಸರುಗಳನ್ನು ಸಮಿತಿಯು ತಿರಸ್ಕರಿಸಿತ್ತು. ಪ್ರಾಚೀನ ಚೀನೀ ಸಮರ ಕಲೆಯಾದ 'ತೈಚಿ' ಹೆಸರು ಜಪಾನೀಸ್ ಪುರುಷನ ಹೆಸರು ಎಂದು ತಪ್ಪಾಗಿ ತಿಳಿಯುವ ಸಾಧ್ಯತೆಯಿತ್ತು. ಅದೇ ರೀತಿ 'ಕಪೋಕ್' ಹೆಸರು ಕೆಲವು ಭಾಷೆಗಳಲ್ಲಿ ಲೈಂಗಿಕ ಅಂಗಗಳ ಅಸಭ್ಯ ಪದದಂತೆ ಕೇಳಿಸುತ್ತಿತ್ತು ಎಂದು ಮಿಸ್ಟರ್ ಲ್ಯಾಮ್ ಹೇಳಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, 'ಡಿಮ್-ಸಮ್' ಹೆಸರು ಯಾವುದೇ ವಿವಾದಕ್ಕೆ ಒಳಗಾಗಲಿಲ್ಲ. 2024ರಲ್ಲಿ ಸಾರ್ವಜನಿಕರು ಇದನ್ನು 'ಸ್ಪ್ಯಾರೋ' (ಗುಬ್ಬಚ್ಚಿ) ಮತ್ತು 'ಶುಯಿ-ಸಿನ್' (ಡ್ಯಾಫೋಡಿಲ್ ಹೂವಿನ ಕ್ಯಾಂಟೋನೀಸ್ ಪದ) ಜತೆಗೆ ಆಯ್ಕೆ ಮಾಡಿದ್ದಾರೆ ಎಂದು ಲೂಯಿ ಯುಕ್ ಸಿಂಗ್ ತಿಳಿಸಿದ್ದಾರೆ.
ಡಿಮ್-ಸಮ್ ಮತ್ತು ಡಾಲ್ಫಿನ್ ಹೊರತಾಗಿ, ಹಾಂಕಾಂಗ್ 'ಬನ್ಯಾನ್' (ಆಲದ ಮರ) ಮತ್ತು 'ಲಯನ್‌ರಾಕ್' ಹೆಸರುಗಳನ್ನು ಸಲ್ಲಿಸಿದೆ.
ಜಪಾನ್ ಹವಾಮಾನ ಸಂಸ್ಥೆಯು 'ಕೊಯಿನು' ಮತ್ತು 'ಕೊಗುಮಾ'ನಂತಹ ನಕ್ಷತ್ರಪುಂಜಗಳ ಹೆಸರುಗಳನ್ನು ಕೊಡುಗೆಯಾಗಿ ನೀಡುತ್ತೇವೆ ಎಂದು ತಿಳಿಸಿದೆ. ಸಮಿತಿಯ ಪಟ್ಟಿಯಲ್ಲಿ ಚೀನೀ ಜಾನಪದ ನಾಯಕಿ 'ಮುಲಾನ್', ಮೈಕ್ರೋನೇಷಿಯನ್ ಪ್ರಕೃತಿ ದೇವತೆ 'ಸಿನ್ಲಾಕು' ಮತ್ತು ವಿಯೆಟ್ನಾಂನ ಪರ್ವತ ದೇವರು 'ಸನ್ ತಿನ್ಹ್'ನಂತಹ ಪೌರಾಣಿಕ ಪಾತ್ರಗಳೂ ಸೇರಿವೆ.
'ನಾವು ಉಚ್ಚರಿಸಲು ಸುಲಭವಾದ ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳ ಹೆಸರುಗಳನ್ನು ಸಲ್ಲಿಸುತ್ತೇವೆ ಎಂದು ಮಲೇಷ್ಯಾ ಹವಾಮಾನ ಇಲಾಖೆಯ ವಕ್ತಾರ ಮಾಜ್ಲಿ ಬಿನ್ ಮೊಹಮ್ಮದ್ ಹೇಳಿದ್ದಾರೆ. ವಿಯೆಟ್ನಾಂನ 'ಹಾ ಲಾಂಗ್ ಬೇ', ಥೈಲ್ಯಾಂಡ್‌ನ 'ಖಾನುನ್' (ಹಲಸಿನ ಹಣ್ಣು) ಮತ್ತು ಫಿಲಿಪೈನ್ಸ್‌ನ 'ಅಮುಯಾವೊ ಪರ್ವತ' ಸೇರಿದಂತೆ ಇತರ ದೇಶಗಳು ಪ್ರಕೃತಿಯಿಂದ ಸ್ಫೂರ್ತಿ ಪಡೆಯುತ್ತವೆ.
ಫಿಲಿಪೈನ್ಸ್ ಸಾಮಾನ್ಯವಾಗಿ ಟೈಫೂನ್ (ಚಂಡಮಾರುತ) ಬರುವ ಹಾದಿಯಲ್ಲಿರುವ ಮೊದಲ ದೇಶಗಳಲ್ಲಿ ಒಂದಾಗಿರುವುದರಿಂದ, ಫಿಲಿಪೈನ್ಸ್ ಹವಾಮಾನ ತಜ್ಞರು ಚಂಡಮಾರುತಗಳಿಗೆ ಸ್ಥಳೀಯ ಹೆಸರನ್ನೇ ಹೆಚ್ಚಾಗಿ ನೀಡುತ್ತಾರೆ ಎಂದು ಲಿರಿಯೋಸ್ ಹೇಳಿದ್ದಾರೆ.
ಉದಾಹರಣೆಗೆ ಜೂನ್ ಆರಂಭದಲ್ಲಿ ಫಿಲಿಪೈನ್ಸ್ ಮತ್ತು ಜಪಾನ್‌ನಲ್ಲಿ ಭಾರಿ ಪ್ರವಾಹಕ್ಕೆ ಕಾರಣವಾದ 'ಜಾಂಗ್ಮಿ' ಟೈಫೂನ್ ಅನ್ನು ಫಿಲಿಪೈನ್ಸ್‌ನಲ್ಲಿ 'ಡೊಮೆಂಗೊ'ದ ಸ್ಥಳೀಯ ಹೆಸರು 'ಡೊಮೆಂಗ್' ಎಂದು ಕರೆಯಲಾಗುತ್ತಿತ್ತು.
ವ್ಯಾಪಕ ಹಾನಿ: ಪಟ್ಟಿಯಿಂದ ಕಿಕ್‌ಔಟ್
ಚಂಡಮಾರುತಗಳು ವ್ಯಾಪಕ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದ್ದರೆ, ಅವುಗಳ ಹೆಸರುಗಳನ್ನು ಕೈಬಿಡಲಾಗುತ್ತದೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ.
2013ರಲ್ಲಿ ಫಿಲಿಪೈನ್ಸ್‌ನಲ್ಲಿ ಭೀಕರ ಚಂಡಮಾರುತದಿಂದಾಗಿ 6,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ 'ಯೋಲಾಂಡಾ' ಎಂಬ ಸ್ಥಳೀಯ ಹೆಸರನ್ನು ಬಳಸುವುದನ್ನು ನಿಲ್ಲಿಸಲಾಗಿತ್ತು. ಟೈಫೂನ್ ಸಮಿತಿಯು 2015ರಲ್ಲಿ ಆ ಬಿರುಗಾಳಿಯ ಅಧಿಕೃತ ಹೆಸರು 'ಹೈಯಾನ್' ಅನ್ನು ಕೈಬಿಟ್ಟಿತ್ತು.
2024ರಲ್ಲಿ ಫಿಲಿಪೈನ್ಸ್‌ನಲ್ಲಿ ಹತ್ತಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ 'ಮ್ಯಾನ್-ಯಿ' ಹೆಸರನ್ನು ತೆಗೆದು ಹಾಕಲಾಗಿತ್ತು. ಈ ವರ್ಷ ಸಮಿತಿಯು 'ಮ್ಯಾನ್-ಯಿ' ಜಾಗಕ್ಕೆ 'ಡಿಮ್-ಸಮ್' ಹೆಸರನ್ನು ಪಟ್ಟಿಗೆ ಸೇರಿಸಿದೆ.
ಮಾನವನ ಕೊಡುಗೆ?: ಮಾನವ ನಿರ್ಮಿತ ಜಾಗತಿಕ ತಾಪಮಾನವು ಸಾಗರಗಳ ಮೇಲಿನ ಮೇಲ್ಮೈ ಉಷ್ಣತೆ ಹೆಚ್ಚಳಗೊಳ್ಳಲು ಕಾರಣವಾಗುತ್ತಿದೆ. 1970ರಿಂದೀಚೆಗೆ ಸಾಗರಗಳ ಮೇಲ್ಮೈ ಉಷ್ಣತೆ 1 ಡಿಗ್ರಿ ಫ್ಯಾರನ್‌ಹೈಟ್ ಹೆಚ್ಚಳಗೊಂಡಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಬಿರುಗಾಳಿ ರೂಪುಗೊಳ್ಳಲು ಇದು ಕೂಡ ಕೊಡುಗೆ ನೀಡುತ್ತಿದೆ ಎನ್ನಲಾಗಿದೆ.

