ನವದೆಹಲಿ: ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಹಾಗೂ ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಬಹಿರಂಗ ಬೆಂಬಲ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಸ್‌ಎಡಿ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಶುಕ್ರವಾರ ಭೇಟಿಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಎಸ್‌ಎಡಿಯ ಈ ಹಠಾತ್ ನಿರ್ಧಾರವು ಪಂಜಾಬ್‌ನ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ಅಕಾಲಿದಳ ನಡುವೆ ಮೈತ್ರಿ ಮರುಸ್ಥಾಪನೆಯಾಗುತ್ತಿರುವುದರ ಸ್ಪಷ್ಟ ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಬೆಂಬಲಿಸಿ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸುಖಬೀರ್ ಸಿಂಗ್, 'ದೇಶದಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ತಕ್ಷಣವೇ ಜಾರಿಗೆ ತರಬೇಕು. ಜೊತೆಗೆ ಎಲ್ಲಾ ರಾಜ್ಯಗಳ ಶಾಸನ ಸಭೆಗಳ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಕೇಂದ್ರದ ಪ್ರಸ್ತಾಪಕ್ಕೆ ಎಸ್‌ಎಡಿ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.
'ಮಹಿಳಾ ಮೀಸಲಾತಿ ವಿಧೇಯಕವನ್ನು ತಕ್ಷಣ ಜಾರಿಗೆ ತರಲು ಶಿರೋಮಣಿ ಅಕಾಲಿದಳ ಆಗ್ರಹಿಸುತ್ತದೆ. ಮಹಿಳೆಯರ ಗೌರವ ಮತ್ತು ಸಮಾನತೆ ಪ್ರತಿಪಾದಿಸಿದ ಸಿಖ್ ಗುರುಗಳ ಬೋಧನೆಗಳಿಂದ ಎಸ್‌ಎಡಿ ಪ್ರೇರಣೆ ಪಡೆದಿದೆ. ಗುರುದ್ವಾರ ಪ್ರಬಂಧಕ್ ಸಮಿತಿಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಈಗಾಗಲೇ ಎಸ್‌ಎಡಿ ಮಾದರಿಯಾಗಿದೆ' ಎಂದು ಸುಖಬೀರ್ ಸಿಂಗ್ ಬರೆದುಕೊಂಡಿದ್ದಾರೆ.
'ಎಲ್ಲಾ ರಾಜ್ಯಗಳಿಗೂ ಸಮಾನ ಪ್ರಾತಿನಿಧ್ಯ ಸಿಗುವಂತೆ ಕ್ಷೇತ್ರ ವಿಂಗಡಣೆ ಮಾಡಬೇಕು, ಶಾಸನ ಸಭೆಗಳ ಸ್ಥಾನಗಳನ್ನು ಶೇ 50ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸುವ ಮಸೂದೆಯನ್ನು ಎಸ್‌ಎಡಿ ಬೆಂಬಲಿಸುತ್ತದೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರ ಕಳೆದ ಏಪ್ರಿಲ್‌ನಲ್ಲಿ ಕ್ಷೇತ್ರ ವಿಂಗಡಣೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಎಸ್‌ಎಡಿ ಅದನ್ನು ಕಟುವಾಗಿ ಟೀಕಿಸಿತ್ತು. ವಿಪಕ್ಷಗಳ ಜೊತೆಗೂಡಿ ವಿರುದ್ಧವಾಗಿ ಮತ ಚಲಾಯಿಸಿತ್ತು. ಪಂಜಾಬ್‌ಗೆ ಕೆಲವೇ ಸ್ಥಾನಗಳು ಹೆಚ್ಚಳವಾಗಲಿದ್ದು, ನೆರೆಯ ರಾಜ್ಯಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಹೇಳಿತ್ತು. ಈ ಮಸೂದೆಯು ಪಂಜಾಬ್‌ಗೆ ತಾರತಮ್ಯ ಎಸಗುತ್ತದೆ ಎಂದು ಎಸ್‌ಎಡಿ ದೂರಿತ್ತು. ಆದರೆ, ಈಗ ಮೈತ್ರಿ ಮಾತುಕತೆಗಳು ಕಾವು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಶೇ 50ರಷ್ಟು ಸೀಟು ಹೆಚ್ಚಳದ ಭರವಸೆಯೊಂದಿಗೆ ಮಸೂದೆಯನ್ನು ಬೆಂಬಲಿಸುವುದಾಗಿ ಎಸ್‌ಎಡಿ ಹೇಳಿದೆ.
ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ನಡುವಿನ 25 ವರ್ಷಗಳ ಮೈತ್ರಿ 2020ರಲ್ಲಿ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟದ ವೇಳೆ ಮುರಿದುಬಿದ್ದಿತ್ತು. ಆ ಸಮಯದಲ್ಲಿ ಅಕಾಲಿದಳವು ಎನ್‌ಡಿಎ ಒಕ್ಕೂಟದಿಂದ ಹೊರಬಂದಿತ್ತು.
2022ರ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಯನ್ನು ಎರಡೂ ಪಕ್ಷಗಳು ಸ್ವತಂತ್ರವಾಗಿ ಎದುರಿಸಿದ್ದವು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಅಕಾಲಿದಳ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

