ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ ಆಡಳಿತ ಸಮಿತಿಯ ನೇತೃತ್ವದಲ್ಲಿ ಓಣಂ ಹಬ್ಬದ ಸಂಭ್ರಮಾಚರಣೆ ಶುಕ್ರವಾರ ಪಂಚಾಯಿತಿ ಸಭಾಂಗಣದಲ್ಲಿ ಜರಗಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅವರು ಆಕರ್ಷಕವಾದ ಹೂವಿನ ರಂಗೋಲಿಯ ಮುಂದೆ ದೀಪಬೆಳಗಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು. ಸೌಹಾರ್ದತೆ ಮತ್ತು ಸಮೃದ್ಧಿಯ ಸಂಕೇತವಾಗಿರುವ ಓಣಂ ಹಬ್ಬವು ಜನರಲ್ಲಿ ಒಗ್ಗಟ್ಟು ಹಾಗೂ ಭ್ರಾತೃತ್ವವನ್ನು ಬೆಳೆಸುತ್ತದೆ. ಒಂದು ದಿನದ ಮಟ್ಟಿಗೆ ತಮ್ಮ ಎಲ್ಲಾ ಒತ್ತಡಗಳನ್ನು ಬದಿಗೊತ್ತಿ ಸಮಾರಂಭದಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳು ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿಗಳ ಅವಿಸ್ಮರಣೀಯ ದಿನವಾಗಿದೆ ಎಂದರು.
ಆಚರಣೆಯ ಭಾಗವಾಗಿ ಆಯೋಜಿಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಜನಪ್ರತಿನಿಧಿಗಳು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅವರು ಶ್ರೀಕೃಷ್ಣನ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹಿರಿಯ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೆ., ಮಾಹಿನ್ ಕೇಳೋಟ್ ಸಹಿತ ಎಲ್ಲ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಒಪ್ಪನ ಹಾಗೂ ಹಾಡುಗಾರಿಕೆ ಮೂಲಕ ಮಹಿಳಾ ಸದಸ್ಯರು ಗಮನಸೆಳೆದರು. ಸಂಗೀತ ಕುರ್ಚಿ, ಸುಂದರಿಗೆ ಬೊಟ್ಟು ಇರಿಸುವುದು ಮೊದಲಾದ ಸ್ಪರ್ಧೆಗಳು ಪೈಪೋಟಿಯಿಂದ ಕೂಡಿತ್ತು. ಸಮಾರಂಭದಲ್ಲಿ ಪಂಚಾಯಿತಿ ಆಡಳಿತ ಸಮಿತಿಯ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

.jpg)
.jpg)
