ನವದೆಹಲಿ: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು ಹಿಂದುಳಿದ ವರ್ಗದ (ಮುಸ್ಲಿಂ) ಮೀಸಲಾತಿ ಪಡೆಯಲು ಅರ್ಹರಲ್ಲ ಎಂಬ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ಮತಾಂತರದ ಬಳಿಕ ಬಿಸಿಎಂ ಮೀಸಲಾತಿ ಪಡೆಯಲು ವ್ಯಕ್ತಿ ಅರ್ಹ ಎಂದು ತಮಿಳುನಾಡು ಸರ್ಕಾರವು ಆದೇಶಿಸಿತ್ತು. ಆದರೆ, ಈ ಆದೇಶವು ಅಸಾಂವಿಧಾನಿಕ ಎಂದು 2024ರ ಮಾರ್ಚ್‌ನಲ್ಲಿ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್, ಆದೇಶವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ನ್ಯಾಯಮೂರ್ತಿಗಳಾದ ಪ್ರಶಾಂತಕುಮಾರ್ ಮಿಶ್ರಾ ಮತ್ತು ಶ್ರೀ ಚಂದ್ರಶೇಖರ್ ಅವರ ಪೀಠವು ಶುಕ್ರವಾರ ವಿಚಾರಣೆ ನಡಿಸಿತು.
'ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವು ಮೀಸಲಾತಿ ಸೌಲಭ್ಯದಿಂದ ವಂಚಿತವಾಗಬಾರದು ಎಂಬ ಸದುದ್ದೇಶದಿಂದ ಸರ್ಕಾರವು ಈ ಆದೇಶವನ್ನು ಹೊರಡಿಸಿದೆ. ಆದ್ದರಿಂದ ಹೈಕೋರ್ಟ್ ಆದೇಶವನ್ನು ಅಮಾನ್ಯಗೊಳಿಸಬೇಕು' ಎಂದು ರಾಜ್ಯ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಹಾಗೂ ಸಿದ್ಧಾರ್ಥ ಲೂಥ್ರಾ ವಾದಿಸಿದರು.

