ಕಾಸರಗೋಡು: ಗಡಿನಾಡಿನಲ್ಲಿ ಕನ್ನಡ ವಿದ್ಯಾರ್ಥಿಗಳು ಸೃಜನಶೀಲ ಬರೆವಣಿಗೆಗಳ ಮೂಲಕ ಕನ್ನಡದ ಅಸ್ಮಿತೆಯನ್ನು ಉಳಿಸುವ ರಾಯಭಾರಿಗಳಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ತಿಳಿಸಿದ್ದಾರೆ.
ಅವರು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವೇದಿಕೆ ಸ್ನೇಹರಂಗದ ವಾರ್ಷಿಕ ಚಟುವಟಿಕೆಗಳ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕನ್ನಡ ಧ್ವನಿ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಕಾಲೇಜಿನ ಕನ್ನಡ ವಿದ್ಯಾರ್ಥಿಗಳು ಕನ್ನಡ ಧ್ವನಿ ಪತ್ರಿಕೆಯ ಮೂಲಕ ಕತೆ, ಕವನ ಪ್ರಕಟಿಸುವುದರೊಂದಿಗೆ ತಮ್ಮ ಸಋಜನಶೀಲತೆ ಮರೆಯುವುದರ ಜತೆಗೆ ಕನ್ನಡದ ಸಾಹಿತ್ಯ ಸೇವೆಯನ್ನು ನಡೆಸುತ್ತ ಬಂದಿದ್ದಾರೆ. ವಿದ್ಯಾರ್ಥಿಗಳು ಗಡಿನಾಡಿನಲ್ಲಿ ನಡೆಸುತ್ತಿರುವ ಸಾಂಸ್ಕೃತಿಕ ಹೋರಾಟ ನಿರಂತರವಾಗಿರಲಿಎಂದು ತಿಳಿಸಿದರು.
ಕಾಲೇಜಿನ ಉಪಪ್ರಾಂಶುಪಾಲೆ ಡಾ.ಮಿನಿ ಪಿ.ವಿ ಸಮಾರಂಭ ಉದ್ಘಾಟಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಎಸ್. ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶಿವಶಂಕರ ಪಿ. ಚಿಲುಮೆ ಭಿತ್ತಿಪತ್ರಿಕೆಯನ್ನು ಬಿಡಗಡೆಗೊಳಿಸಿದರು.
ಕಾಲೇಜು ಕಚೇರಿ ಅಧೀಕ್ಷಕ ದಿನೇಶ ಕೆ. ಎಸ್. ಉಪಸ್ಥಿತರಿದ್ದರು. ಸ್ನೇಹರಂಗದ ಮಾರ್ಗದರ್ಶಕ ಡಾ.ಶ್ರೀಧರ ಎನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸ್ನೇಹರಂಗದ ಅಧ್ಯಕ್ಷ ಎ. ವಿವೇಕ್ ಸ್ವಾಗತಿಸಿದರು. ಕನ್ನಡ ಧ್ವನಿ ಸಂಪಾದಕಿ ಸ್ಫೂರ್ತಿ ಎಂ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಭರತ್ ಕೆ.ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಮತ್ತು ಉದಯೋನ್ಮುಖ ಕಲಾವಿದರ ಕೂಡುವಿಕೆಯಿಂದ 'ಕೃಷ್ಣಸಂಧಾನ' ಎಂಬ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಹೊಸಮೂಲೆ ಗಣೇಶ ಭಟ್, ಚೆಂಡೆಮದ್ದಳೆಯಲ್ಲಿ ಶ್ರೀಧರ ವಿಟ್ಲ, ಲಕ್ಶ್ಮೀಶ ಬೆಂಗ್ರೊಡಿ ಸಹಕರಿಸಿದರು.
ಮುಮ್ಮೇಳದಲ್ಲಿ ಕೃಷ್ಣನಾಗಿ ಪ್ರಸಾದ್ ಸವಣೂರು, ದುರ್ಯೋಧನನಾಗಿ ದಿನೇಶ ಶೆಟ್ಟಿ ಕಾವಳಕಟ್ಟೆ, ವಿದುರನಾಗಿ ದುರ್ಗಾಶಂಕರ ಅಡಿಗ ಶೇಡಿಕಾವು ಸಹಕರಿಸಿದರು. ನಂತರ ಸ್ನೇಹರಂಗದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.



