ಪಟ್ನಾ: ಉತ್ತರ ನೇಪಾಳದಲ್ಲಿ ಬುಧವಾರ ದಿಢೀರ್ ಪ್ರವಾಹ ಉಂಟಾಗಿದ್ದು, ಗಡಿ ಪ್ರದೇಶ ಮತ್ತು ತಗ್ಗು ಪ್ರದೇಶದ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಭೋಟೆ ಕೊಶಿ ಮತ್ತು ತ್ರಿಶೂಲಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರ ಪರಿಣಾಮ ಬಿಹಾರದಲ್ಲಿ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಇಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಘೋಷಿಸಲಾಗಿದೆ.
ನದಿ ನೀರಿನಲ್ಲಿ ದಿಢೀರ್ ಏರಿಕೆಯು ನೇಪಾಳದ ರಸುವಾ ಜಿಲ್ಲೆಯ ಟಿಮೂರ್ ಮತ್ತು ಸಮೀಪದ ಸ್ಯಾಫ್ರುಬೆಸಿಯಲ್ಲಿ ಭಾರಿ ವಿನಾಶ ಸೃಷ್ಟಿಸಿದೆ. ವಾಹನ ಮತ್ತು ಇತರೆ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ನೇಪಾಳ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಬಿಹಾರದ ಗಂದಕ್ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಪಶ್ಚಿಮ ಚಂಪಾರನ್ ಜಿಲ್ಲೆಯ ಬಗಹಾ ಅಧಿಕಾರಿಗಳಿಗೆ ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚಿಸಲಾಗಿದೆ. ವಾಲ್ಮೀಕಿ ನಗರ ಬ್ಯಾರೇಜ್‌ಗೆ ಭದ್ರತೆ ಹೆಚ್ಚಿಸಲಾಗಿದ್ದು, ಎಚ್ಚರವಹಿಸುವಂತೆ ನೀರಾವರಿ ಇಲಾಖೆಯು ಅಧಿಕಾರಿಗಳಿಗೆ ಸೂಚಿಸಿದೆ.
ಗಂದಕ್ ನದಿಪಾತ್ರದಲ್ಲಿ ವಾಸಿಸುವ ಜನರು ಮತ್ತು ತಗ್ಗುಪ್ರದೇಶಗಳ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು, ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
ಪರಿಸ್ಥಿತಿ ನಿರ್ವಹಣೆಗೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚಿಸಲಾಗಿದ್ದು, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಖುದ್ದು ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದ್ದಾರೆ.
ನೇಪಾಳದಲ್ಲಿ ಹೈ ಅಲರ್ಟ್
ಭೋಟೆ ಕೊಶಿ ಮತ್ತು ತ್ರಿಶೂಲಿ ನದಿಗಳ ಪ್ರವಾಹದ ಹಿನ್ನೆಲೆಯಲ್ಲಿ ರಸುವಾ, ನುವಾಕೋಟ್, ಧಾಡಿಂಗ್, ಚಿತಾವನ್ ಮತ್ತು ಗೊರ್ಖಾ ಜಿಲ್ಲೆಗಳ ಜನರು ಮುಂದಿನ ಆದೇಶದವರೆಗೂ ಎಚ್ಚರಿಕೆ ವಹಿಸುವಂತೆ ನೇಪಾಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಪ್ರವಾಹದ ಹಾನಿಯ ಪ್ರಮಾಣವು ಅತ್ಯಂತ ದೊಡ್ಡದಾಗಿದ್ದು, ಭಾರಿ ವಿನಾಶ ಆಗಿದೆ ಎಂದು ರಸುವಾದ ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಧ್ರುವ ಪ್ರಸಾದ್ ಅಧಿಕಾರಿ ತಿಳಿಸಿದ್ದಾರೆ.
ಕಸ್ಟಮ್ಸ್ ಇಲಾಖೆಯ ಕಟ್ಟಡದ ಬಳಿ ನಿಲ್ಲಿಸಿದ್ದ ಹಲವು ವಾಹನಗಳು ಮತ್ತು ವಸ್ತುಗಳು ಸಹ ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ರಸುವಾದ ಮುಖ್ಯ ಕಸ್ಟಮ್ಸ್ ಅಧಿಕಾರಿ ರಾಜೇಂದ್ರ ದುಂಗಾನಾ ತಿಳಿಸಿದ್ದಾರೆ.
ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸ್ ಅಧಿಕಾರಿಗಳನ್ನು ರಸುವಾ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ನೇಪಾಳದ ಪ್ರಧಾನಿ ಕಚೇರಿ ತಿಳಿಸಿದೆ.

