ಗುವಾಹಟಿ: ಜನಗಣತಿಗೂ ಮುನ್ನ ಮಣಿಪುರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ ಆಗ್ರಹಿಸಿ ನಿಯೋಗವೊಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ದೆಹಲಿಯಲ್ಲಿ ಸೋಮವಾರ ಭೇಟಿ ಮಾಡಿದೆ. ಇತ್ತ ಮಣಿಪುರದಲ್ಲಿ ಮತ್ತೆ ಜನಾಂಗೀಯ ಘರ್ಷಣೆ ಶುರುವಾಗಿದೆ.
ಸೇನಾಪತಿ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳಲ್ಲಿ ನಾಗ ಮತ್ತು ಕುಕಿ ಸಮುದಾಯದ ನಡುವೆ ಘರ್ಷಣೆ ನಡೆದಿದೆ.
'ತಫೊವು ಕುಕಿ ಗ್ರಾಮದಲ್ಲಿ ಮುಂಜಾನೆ 2.30ರ ಸುಮಾರಿಗೆ 10ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಅದಾದ ಕೆಲವು ಗಂಟೆಗಳಲ್ಲೇ ಸೇನಾಪತಿ ಜಿಲ್ಲೆಯ ತಫೋವು ನಾಗ ಗ್ರಾಮದಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಯಿತು' ಎಂದು ಪೊಲೀಸರು ತಿಳಿಸಿದರು.
'ಕುಕಿ ಮತ್ತು ನಾಗ ಸಮುದಾಯಗಳ ಯುವಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಸಂಘರ್ಷ ತಡೆಗೆ ಸಿಆರ್‌ಪಿಎಫ್ ಮುಂದಾಗಿದ್ದು, ಸಿಬ್ಬಂದಿಯೊಬ್ಬರು ಗಾಯಗೊಂಡರು' ಎಂದು ಹೇಳಿದ್ದಾರೆ.
ಎನ್‌ಆರ್‌ಸಿಗೆ ಆಗ್ರಹ: ಈ ಮಧ್ಯೆ ಮಣಿಪುರದ 14 ನಾಗರಿಕ ಸಂಘಟನೆಗಳ ನಿಯೋಗ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿ ಮಾಡಿ, ಜನಗಣತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನವೇ ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ನವೀಕರಣ ನಡೆಸಲು ಆಗ್ರಹಿಸಿತು.
ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ರಿಜಿಜು ಭರವಸೆ ನೀಡಿದರು. ಮಣಿಪುರದ ಸದ್ಯದ ಸ್ಥಿತಿ ಬಗ್ಗೆ ಅಮಿತ್ ಶಾ ಅವರೊಂದಿಗೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಕೂಡ ದೆಹಲಿಗೆ ತೆರಳಿದ್ದಾರೆ.

