HEALTH TIPS

ಕಾಶ್ಮೀರ ಸಂಪುಟ ವಿಸ್ತರಣೆ ಕಗ್ಗಂಟು: ಓಮರ್ ಅಬ್ದುಲ್ಲಾಗೆ ಧರ್ಮಸಂಕಟ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮತದಾರರು ಜನಪ್ರತಿನಿಧಿಗಳ ಸರ್ಕಾರವನ್ನು ಆಯ್ಕೆ ಮಾಡಿ ಎರಡು ವರ್ಷ ಕಳೆಯುತ್ತಾ ಬಂದಿದೆ. ಇದರ ನಡುವೆ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಸಚಿವ ಸಂಪುಟ ವಿಸ್ತರಣೆ ಕುರಿತಾದ ಧರ್ಮಸಂಕಟವನ್ನು ಎದುರಿಸುತ್ತಿದ್ದಾರೆ.


ಓಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪನೆ, ಉದ್ಯೋಗ ಸೃಷ್ಟಿ, ವಿದ್ಯುತ್ ಮತ್ತು ದೈನಂದಿನ ಆಡಳಿತಕ್ಕೆ ಸಂಬಂಧಿಸಿದ ಚುನಾವಣಾ ಭರವಸೆಗಳನ್ನು ಈಡೇರಿಸುವ ತೀವ್ರ ಒತ್ತಡದಲ್ಲಿದೆ.

ರಾಜ್ಯದ ಸ್ಥಾನಮಾನದ ವಿಚಾರ ಇನ್ನೂ ಇತ್ಯರ್ಥವಾಗಿಲ್ಲ. ಚುನಾವಣಾ ಪೂರ್ವ ಮಿತ್ರಪಕ್ಷವಾದ ಕಾಂಗ್ರೆಸ್ ಸರ್ಕಾರದಿಂದ ಹೊರಗುಳಿದಿದ್ದು, ನ್ಯಾಷನಲ್ ಕಾನ್ಫರೆನ್ಸ್ ಶಾಸಕರು ಹೆಚ್ಚಿನ ಅಧಿಕಾರದ ಪಾಲು ಬಯಸುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಬಿಜೆಪಿ, ನಮ್ಮ ಶಾಸಕರಿಗೆ ಹಣ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಲು ಯತ್ನಿಸುತ್ತಿದೆ ಎಂದು ಓಮರ್ ಬಹಿರಂಗವಾಗಿ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ.

ಈ ಹಿನ್ನೆಲೆಯಲ್ಲಿ ಓಮರ್ ಅಬ್ದುಲ್ಲಾ ಅವರು ಆಗಸ್ಟ್ 15ರ ಬಳಿಕ ಖಾಲಿ ಇರುವ ಮೂರು ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜಕೀಯ ಒತ್ತಡ...

ಸಂಪುಟ ವಿಸ್ತರಣೆ ಮಾಡುವುದರಿಂದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಳಗಿನ ರಾಜಕೀಯ ಒತ್ತಡ ಕೊಂಚ ಕಡಿಮೆ ಮಾಡಲು ನೆರವಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಆದರೆ, ಮೂರು ಸಚಿವ ಸ್ಥಾನಗಳು ಮಾತ್ರ ಖಾಲಿ ಇರುವುದರಿಂದ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗುವ ಭೀತಿಯೂ ಇದೆ. ಈಗಾಗಲೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸರ್ಕಾರಕ್ಕೆ, ಪಕ್ಷದೊಳಗಿನ ಅಸಮಾಧಾನವು ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಓಮರ್ ಅವರು ಶಾಸಕರ ಬಂಡಾಯಕ್ಕೆ ಅವಕಾಶ ನೀಡದೆಯೇ ಸರ್ಕಾರವನ್ನು ಮುನ್ನಡೆಸುವ 'ಧರ್ಮಸಂಕಟ'ಕ್ಕೆ ಸಿಲುಕಿದ್ದಾರೆ.

ಮೂರು ಸ್ಥಾನಗಳು ಮಾತ್ರ ಏಕೆ ಖಾಲಿ?

ಜಮ್ಮು ಮತ್ತು ಕಾಶ್ಮೀರವು ಸಂಪೂರ್ಣ ರಾಜ್ಯವಾಗಿರದೆ ಶಾಸನಸಭೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿದೆ. 2019ರ ಜಮ್ಮು ಮತ್ತು ಕಾಶ್ಮೀರ ಪುನರ್‌ರಚನಾ ಕಾಯ್ದೆಯ ಸೆಕ್ಷನ್ 53ರ ಪ್ರಕಾರ, ಸಚಿವರ ಸಂಖ್ಯೆ ವಿಧಾನಸಭೆಯ ಒಟ್ಟು ಬಲದ ಶೇಕಡ 10ಕ್ಕಿಂತ ಹೆಚ್ಚಿರುವಂತಿಲ್ಲ.

90 ಚುನಾಯಿತ ಸ್ಥಾನಗಳಿದ್ದು, ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ ಒಂಬತ್ತು ಸಚಿವರು ಮಾತ್ರ ಇರಲು ಸಾಧ್ಯ. ಓಮರ್ ಸರ್ಕಾರದಲ್ಲಿ ಪ್ರಸ್ತುತ ಆರು ಸಚಿವರಿದ್ದು, ಮೂರು ಸ್ಥಾನಗಳು ಖಾಲಿ ಉಳಿದಿವೆ.

ಕಡಿಮೆ ಸ್ಥಾನ: ಹೆಚ್ಚು ಆಕಾಂಕ್ಷಿಗಳು

ಕಾಶ್ಮೀರ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 41 ಶಾಸಕರನ್ನು ಹೊಂದಿದೆ. ವರದಿಗಳ ಪ್ರಕಾರ ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿದ್ದು, ಇದೇ ವಿಚಾರ ಓಮರ್ ಅವರಿಗೆ ಸಮಸ್ಯೆ ತಂದೊಡ್ಡಿದೆ. 'ಮಂತ್ರಿಗಿರಿ' ಒಬ್ಬರಿಗೆ ಸಂತಸ ತಂದರೆ, ಅವಕಾಶ ಸಿಗದವರಿಗೆ ಅಸಮಾಧಾನವಾಗಲಿದೆ.

ಲೆಕ್ಕಾಚಾರ ಜಟಿಲಗೊಳಿಸಿದ ಕಾಂಗ್ರೆಸ್

2024ರ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ 6 ಶಾಸಕರನ್ನು ಹೊಂದಿದ್ದರೂ ಸರ್ಕಾರದಿಂದ ಹೊರಗುಳಿದಿದೆ. ರಾಜ್ಯಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ಸಿಗುವವರೆಗೆ ಸಚಿವ ಸಂಪುಟ ಸೇರುವುದಿಲ್ಲ ಎಂಬುದು ಕಾಂಗ್ರೆಸ್‌ನ ನಿಲುವು.

ರಾಜ್ಯದ ಸ್ಥಾನಮಾನವೇ ಪ್ರಮುಖ ಸವಾಲು...

ರಾಜ್ಯದ ಸ್ಥಾನಮಾನ ಮರು ಸ್ಥಾಪಿಸಬೇಕೆಂಬ ಓಮರ್ ಅವರ ಪ್ರಮುಖ ರಾಜಕೀಯ ಬೇಡಿಕೆಯ ನಡುವೆಯೇ, ಸಂಪುಟ ವಿಸ್ತರಣೆಯ ವಿಚಾರ ಮುನ್ನೆಲೆಗೆ ಬಂದಿದೆ. ರಾಜ್ಯದ ಸ್ಥಾನಮಾನ ತಂದುಕೊಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದು, ಓಮರ್ ಅವರು ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ.

ಆದರೆ, ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ನಿರ್ಧಾರ ಮುಖ್ಯಮಂತ್ರಿ ಅವರ ಕೈಯಲ್ಲಿಲ್ಲ. ಇದು ಸಂಕೀರ್ಣ ರಾಜಕೀಯ ಸಮೀಕರಣವನ್ನು ಸೃಷ್ಟಿಸುತ್ತಿದೆ.

ಬಿಜೆಪಿ-ನ್ಯಾಷನಲ್ ಕಾನ್ಫರೆನ್ಸ್ ಜಟಾಪಟಿ

ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಬಿಜೆಪಿ, ನಮ್ಮ ಶಾಸಕರಿಗೆ ಹಣ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡುತ್ತಿದೆ ಎಂದು ಓಮರ್ ಆರೋಪಿಸಿದ್ದಾರೆ. ಈ ಆರೋಪ ತಳ್ಳಿಹಾಕಿರುವ ಬಿಜೆಪಿ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದೆ.

ಸದ್ಯದ ಮಟ್ಟಿಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದೊಳಗೆ ಬಿಕ್ಕಟ್ಟು ತಲೆದೂರುವ ಸಾಧ್ಯತೆ ಕಡಿಮೆ. ಆದರೆ, ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಆಂತರಿಕ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ ಎಂಬ ಭೀತಿ ಓಮರ್ ಅವರಲ್ಲಿದೆ.

ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ರಾಜಕೀಯ ಇತಿಹಾಸವು ಪಕ್ಷದೊಳಗಿನ ಆಂತರಿಕ ಅಸಮಾಧಾನ ಮತ್ತು ಸಂಘಟಿತ ವಿರೋಧ ಪಕ್ಷಗಳು ಒಂದಾದಾಗ ಆಡಳಿತ ಪಕ್ಷಗಳು ಅಧಿಕಾರ ಕಳೆದುಕೊಂಡಿರುವ ಉದಾಹರಣೆಗಳಿವೆ.

ಸಂಪುಟ ವಿಸ್ತರಣೆ ವಿಳಂಬವಾದ್ರೆ ಅಪಾಯ ಸಾಧ್ಯತೆ

ಸಂಪುಟ ವಿಸ್ತರಣೆ ವಿಳಂಬವಾದಷ್ಟೂ ಖಾಲಿ ಇರುವ ಸಚಿವ ಸ್ಥಾನಗಳ ಬಗ್ಗೆ ರಾಜಕೀಯ ಕೆಸರೆರಚಾಟ ಜೋರಾಗಲಿದೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಶಾಸಕರ ಸಿಡಿದೇಳುವ ಸಾಧ್ಯತೆಯೂ ಹೆಚ್ಚಿದೆ. ವಿರೋಧ ಪಕ್ಷಗಳು ಸರ್ಕಾರವನ್ನು ಆಂತರಿಕವಾಗಿ ಅಸ್ಥಿರವಾಗಿದೆ ಎಂದು ಬಿಂಬಿಸಬಹುದು.

ಅಸಲಿ ಧರ್ಮಸಂಕಟ...

ಓಮರ್ ಅವರು ಒಂದೇ ಬಾರಿಗೆ ಹಲವು ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಉತ್ತಮ ಆಡಳಿತ ನಡೆಸಲು ಸಚಿವರ ಅಗತ್ಯವಿದೆ. ಶಾಸಕರು ಸರ್ಕಾರದಲ್ಲಿ ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕಿದೆ. ಜತೆಗೆ, ಕಾಂಗ್ರೆಸ್‌ಗೆ ರಾಜಕೀಯ ಅವಕಾಶವನ್ನು ಕಾಯ್ದಿರಿಸಬೇಕಾಗಿದೆ. ರಾಜ್ಯದ ಸ್ಥಾನಮಾನಕ್ಕಾಗಿ ಕೇಂದ್ರದ ಮೇಲೆ ಒತ್ತಡ ಮುಂದುವರಿಸಬೇಕಿದೆ. ಮತ್ತು ಆಂತರಿಕ ಅಸಮಾಧಾನವು ವಿಪಕ್ಷಗಳಿಗೆ ಅವಕಾಶವಾಗದಂತೆ ತಡೆಯಬೇಕಿದೆ.

ಈ ಎಲ್ಲಾ ಕಾರಣಗಳಿಂದಾಗಿ ಆಗಸ್ಟ್ 15ರ ಬಳಿಕ ಸಂಪುಟ ವಿಸ್ತರಣೆ ಕುರಿತು ಓಮರ್ ತೆಗದುಕೊಳ್ಳುವ ನಿರ್ಧಾರ ಹೆಚ್ಚು ಮಹತ್ವದಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries