ಕೋಲ್ಕತಾ: ಮಲೇಷ್ಯಾ ಏರ್ಲೈನ್ಸ್ ವಿಮಾನವೊಂದು ಶನಿವಾರ ರಾತ್ರಿ ಕೋಲ್ಕತ್ತಾದ ನೇತಾಜಿ ಸುಭಾಷ್ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪಿಸುತ್ತಿದ್ದಾಗ ಅದರ ಕಾಕ್ ಪಿಟ್ ನತ್ತ ಲೇಸರ್ ಕಿರಣ ಬೀರಲಾಗಿದೆ. ಇದರಿಂದ ವಿಮಾನವನ್ನು ಮತ್ತೊಮ್ಮೆ ಇಳಿಸುವ ಪ್ರಯತ್ನ ಮಾಡಬೇಕಾಯಿತು.
ಕೌಲಾಲಂಪುರದಿಂದ ಆಗಮಿಸುತ್ತಿದ್ದ ಎಂಎಚ್-184 ವಿಮಾನ ರಾತ್ರಿ ಸುಮಾರು 11.20ಕ್ಕೆ ಕೆಳಗೆ ಇಳಿಯಬೇಕಿತ್ತು. ಆದರೆ, ವಿಮಾನ ರನ್ವೇಯಿಂದ ಸುಮಾರು 8 ನಾಟಿಕಲ್ ಮೈಲ್ ದೂರದಲ್ಲಿದ್ದಾಗ ಪೈಲಟ್ ಮಧ್ಯಮಗ್ರಾಮ-ಬಾರಾಸತ್ ಕಡೆಯಿಂದ ಬರುತ್ತಿದ್ದ ಪ್ರಕಾಶಮಾನವಾದ ಲೇಸರ್ ಕಿರಣವನ್ನು ಗಮನಿಸಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಈ ಕಿರಣ ವಿಮಾನದ ಪೈಲಟ್ ಅವರ ದೃಷ್ಟಿಯ ಮೇಲೆ ಪರಿಣಾಮ ಉಂಟುಮಾಡಿತು. ಆದ್ದರಿಂದ ವಿಮಾನ ನಿಗದಿತ ಸಮಯಕ್ಕೆ ಭೂಸ್ಪರ್ಶ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಅದು ಮತ್ತೆ ಭೂಸ್ಪರ್ಶ ಮಾಡುವ ಮುನ್ನ ಆಕಾಶದಲ್ಲಿ ಒಂದು ಸುತ್ತು ಹಾಕಬೇಕಾಯಿತು.
ವಿಮಾನ ಅಂತಿಮವಾಗಿ ಸುಮಾರು 11.35ಕ್ಕೆ ಸುರಕ್ಷಿತವಾಗಿ ಕೆಳಗೆ ಇಳಿಯಿತು. ಈ ವಿಮಾನದಲ್ಲಿದ್ದ 159 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ನಂತರ ಮಲೇಷ್ಯಾ ಏರ್ಲೈನ್ಸ್ ಲೇಸರ್ ಬೆಳಕಿನ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿತು.
ಕೋಲ್ಕತ್ತಾ ವಿಮಾನ ನಿಲ್ದಾಣದ ಅಧಿಕಾರಿಗಳು ಎನ್‌ಎಸ್ಸಿಬಿಐ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.

