ರಾಂಚಿ: ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯು ರವಿವಾರ 23ನೇ ದಿನಕ್ಕೆ ಕಾಲಿಟ್ಟಿದ್ದು, ಉಪವಾಸ ಸತ್ಯಾಗ್ರಹವು 13ನೇ ದಿನವೂ ಮುಂದುವರಿದಿದೆ. ಈ ನಡುವೆ, ಉಪವಾಸನಿರತ ಪ್ರತಿಭಟನಾಕಾರ ಪ್ರೇಮ್ ನಾಯಕ್, ತನ್ನ ಆರೋಗ್ಯ ತೀವ್ರ ಹದಗೆಟ್ಟಿದ್ದು, ತಾನು ಹೆಚ್ಚು ದಿನ ಬದುಕುವ ಭರವಸೆ ಇಲ್ಲ ಎಂದು ಹೇಳಿದ್ದಾರೆ.
'ಸರಕಾರ ಈ ವಿಷಯದಲ್ಲಿ ಗಂಭೀರವಾಗಿಲ್ಲ. ನನ್ನ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ, ನಾನು ಇನ್ನು ಹೆಚ್ಚು ಕಾಲ ಬದುಕುತ್ತೇನೆ ಎಂದು ಅನಿಸುತ್ತಿಲ್ಲ' ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ್ ಹೇಳಿದರು.
ಶುಕ್ರವಾರ ತನಗೆ ಜ್ವರ ಬಂದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಅಧಿಕಾರಿಗಳು ಯತ್ನಿಸಿದ್ದರಾದರೂ ತಾನು ಅದಕ್ಕೆ ನಿರಾಕರಿಸಿದ್ದಾಗಿ ಅವರು ತಿಳಿಸಿದ್ದಾರೆ. ಇನ್ನೋರ್ವ ನಾಯಕ ದೇವೇಂದ್ರನಾಥ್ ಮಹತೋ ಅವರನ್ನು ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು, ಆದರೆ ಅವರಿಗೆ ಮರಳಲು ಅವಕಾಶ ನೀಡುತ್ತಿಲ್ಲ. ಆಂದೋಲನವನ್ನು ಮುರಿಯುವುದು ಸರಕಾರದ ಉದ್ದೇಶವಾಗಿದೆ ಎಂದು ನಾಯಕ್ ಆರೋಪಿಸಿದರು.
ಕ್ರಮ ಕೈಗೊಳ್ಳುವುದಾಗಿ ಸೊರೇನ್ ಭರವಸೆ :
ಸಿಎಂ ಸೊರೇನ್ ಅವರು ಪರೀಕ್ಷಾ ಅಕ್ರಮಗಳ ಕುರಿತು ನಿಷ್ಪಕ್ಷ ತನಿಖೆಯ ಭರವಸೆ ನೀಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಭ್ರಷ್ಟಾಚಾರದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

