ನವದೆಹಲಿ/ಜೈಪುರ/ಕೊಲ್ಲಂ (PTI): 'ವಂದೇ ಮಾತರಂ' ರಾಷ್ಟ್ರೀಯ ಗೀತೆಗೆ ಕಾಂಗ್ರೆಸ್ ಅಪಮಾನ ಮಾಡಿದೆ' ಎನ್ನುವ ಬಿಜೆಪಿ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ.
'ನವದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ 'ವಂದೇ ಮಾತರಂ' ಪೂರ್ಣ ಗೀತೆ ಹಾಡುವುದಕ್ಕೆ ಪಕ್ಷದ ನಾಯಕಿ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದರು' ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
ಇದನ್ನು ಅಲ್ಲಗಳೆದಿರುವ ಕಾಂಗ್ರೆಸ್, 'ಪೂರ್ಣ ಗೀತೆ ಹಾಡುವುದನ್ನು ತಡೆಯಲು ಪ್ರಯತ್ನಿಸಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಲ್ಪ ಹೊತ್ತು ನಿಂತಿದ್ದರಿಂದ ಅವರಿಗಾಗಿ ಒಂದು ಕುರ್ಚಿ ನೀಡುವಂತೆ ಸೋನಿಯಾ ಗಾಂಧಿ ಅವರು ಕೇಳಿದ್ದರು' ಎಂದು ಸ್ಪಷ್ಟಪಡಿಸಿದೆ.
'ಗಮನ ಬೇರೆಡೆ ಸೆಳೆಯುವ ಪ್ರಯತ್ನ': 'ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಘಟನೆಯು ದೊಡ್ಡ ವಿಷಯವೇನಲ್ಲ. ಅದು ಸಂವಹನ ಕೊರತೆಯಿಂದ ಆದ ಸಣ್ಣ ಗೊಂದಲವಷ್ಟೇ. ಆದರೆ, ಬಿಜೆಪಿ ಇದನ್ನು ಬಳಸಿಕೊಂಡು, ದೇಶ ಎದುರಿಸುತ್ತಿರುವ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.
'ಈ ವಿಷಯದಲ್ಲಿ ಕಾಂಗ್ರೆಸ್ಗೆ ಸ್ಪಷ್ಟವಾದ ನಿಲುವಿದೆ. ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರೂ ಮತ್ತು ರವೀಂದ್ರನಾಥ ಟ್ಯಾಗೋರ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ವಂದೇ ಮಾತರಂ ಗೀತೆ ರೂಪುಗೊಂಡಿತ್ತು' ಎಂದು ತಿಳಿಸಿದ್ದಾರೆ.
'ರಾಷ್ಟ್ರಗೀತೆ 'ಜನ ಗಣ ಮನ'ವನ್ನು ಗೌರವಿಸುವಂತೆ 'ವಂದೇ ಮಾತರಂ' ಅನ್ನೂ ಗೌರವಿಸುತ್ತೇವೆ. ಅವರು (ಬಿಜೆಪಿ) ದೇಶವನ್ನು ಗೌರವಿಸುವ ಬಗ್ಗೆ ಮಾತನಾಡುತ್ತಿದ್ದರೆ, ಮೊದಲು ಅರುಣಾಚಲ ಪ್ರದೇಶದಲ್ಲಿನ ಭೂಮಿಯನ್ನು ಮರಳಿ ಪಡೆಯಲು ಅವರಿಗೆ ಹೇಳಿ. 56 ಇಂಚಿನ ಎದೆಯುಳ್ಳ ವ್ಯಕ್ತಿಯೊಬ್ಬರು (ಪ್ರಧಾನಿ ನರೇಂದ್ರ ಮೋದಿ) ಏನೇ ದೊಡ್ಡ ಪ್ರತಿಪಾದನೆಗಳನ್ನು ಮಾಡುತ್ತಿದ್ದರೂ, ನಮ್ಮ ಸ್ವಂತ ಭೂಮಿಯನ್ನೇ ಕಿತ್ತುಕೊಳ್ಳಲಾಗುತ್ತಿದೆ. ಇದರ ಬಗ್ಗೆ ಒಂದೇ ಒಂದು ಮಾತನ್ನು ಅವರು ಆಡುವುದಿಲ್ಲ. ಇದೇ ನಿಜವಾದ ವಿವಾದ' ಎಂದು ಟೀಕಿಸಿದ್ದಾರೆ.
'ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ': ವಂದೇ ಮಾತರಂ ಗೀತೆಯನ್ನು ಅವಮಾನಿಸಿದ್ದಕ್ಕಾಗಿ ವಿರೋಧ ಪಕ್ಷ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
'ಅಮಿತ್ ಶಾ ಅವರು ಮತ್ತು ಅವರ ಸಾಹೇಬರು ಮಾಡಿರುವ ದೊಡ್ಡ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಹೀಗೆ ಮಾತನಾಡಿದ್ದಾರೆ' ಎಂದು ದೂರಿದ್ದಾರೆ.
'2024ರ ಡಿಸೆಂಬರ್ 17ರಂದು ರಾಜ್ಯಸಭೆಯಲ್ಲಿ ಡಾ. ಅಂಬೇಡ್ಕರ್ ಅವರನ್ನು ಅವಮಾನಿಸಿದ ವ್ಯಕ್ತಿ ಶಾ. 2002ರ ಜನವರಿವರೆಗೆ, ತನ್ನ ಪ್ರಧಾನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದು ಸೂಕ್ತವೆಂದು ಭಾವಿಸದ ಸಿದ್ಧಾಂತಕ್ಕೆ ಸೇರಿದ ವ್ಯಕ್ತಿ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಯುವಕರ ಮೇಲೆ ದೆಹಲಿ ಪೊಲೀಸರ ದೌರ್ಜನ್ಯವನ್ನು ಯೋಜಿಸಿದ ವ್ಯಕ್ತಿ' ಎಂದು 'ಎಕ್ಸ್' ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಷ್ಟ್ರೀಯತೆ ಮತ್ತು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರಿಗೆ ಅವಮಾನ ಮಾಡಿದ್ದಾರೆ
ಜೈರಾಮ್ ರಮೇಶ್
ಅಮಿತ್ ಶಾ'ವಂದೇ ಮಾತರಂ' ಗೀತೆಗೆ ಅಪಮಾನ ಮಾಡಿರುವ ಸೋನಿಯಾ ಗಾಂಧಿ ಅವರು ಗೀತೆ ರಚನೆಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಅಮರ ಚೇತನಕ್ಕೆ ಹಾಗೂ ಸಾರ್ವಜನಿಕರ ಬಳಿ ಕ್ಷಮೆ ಕೋರಬೇಕು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗ್ರಹಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ಪ್ರಯುಕ್ತ ಚಿತ್ತೋರ್ಗಢದಲ್ಲಿ ಭಾನುವಾರ ಆಯೋಜಿಸಿದ್ದ 'ಅಟಲ್ ಗೌರವ ಸ್ಮೃತಿ ಸಮಾರಂಭ'ದಲ್ಲಿ ಮಾತನಾಡಿದ ಶಾ 'ನಿಮಗೆ ಸ್ವಲ್ಪವಾದರೂ ನಾಚಿಕೆ ಎನ್ನುವುದು ಇದ್ದರೆ ಕೂಡಲೇ ಕೈಮುಗಿದು ಕ್ಷಮೆಯಾಚಿಸಬೇಕು' ಎಂದು ಒತ್ತಾಯಿಸಿದ್ದಾರೆ.ಕೈಮುಗಿದು ಕ್ಷಮೆಯಾಚಿಸಲಿ: ಶಾ
'ಬೇಷರತ್ ಕ್ಷಮೆ ಕೋರಲಿ'
'ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಬೇಷರತ್ ಕ್ಷಮೆಯಾಚಿಸಬೇಕು' ಎಂದು ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ವಂಶಸ್ಥ ಬಿಜೆಪಿ ಶಾಸಕ ಸುಮಿತ್ರೊ ಚಟರ್ಜಿ ಒತ್ತಾಯಿಸಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಚಟರ್ಜಿ 'ದೇಶವು 80ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವಾಗ ಆಗಸ್ಟ್ 15ರಂದು ನಡೆದಿದೆ ಎನ್ನಲಾದ ಘಟನೆಯು ದುರದೃಷ್ಟಕರ ಮಾತ್ರವಲ್ಲ ಐತಿಹಾಸಿಕ ತಪ್ಪಿನ ಪುನರಾವರ್ತನೆಯಾಗಿದೆ. ಈ ಗೀತೆಯ ಪೂರ್ಣ ಆವೃತ್ತಿ ಹಾಡುವುದನ್ನು ನಿಲ್ಲಿಸಲು ಪದೇ ಪದೇ ಪ್ರಯತ್ನಗಳು ನಡೆದಿವೆ' ಎಂದು ತಿಳಿಸಿದ್ದಾರೆ. 'ಈ ಮಂತ್ರವು (ವಂದೇ ಮಾತರಂ) ದೇಶಕ್ಕೆ ದೇಶಭಕ್ತಿಯ ಧರ್ಮದ ದೀಕ್ಷೆ ನೀಡಿದೆ' ಎಂಬ ಶ್ರೀ ಅರವಿಂದರ ಮಾತುಗಳನ್ನು ಉಲ್ಲೇಖಿಸಿದ ಚಟರ್ಜಿ ಅವರು 'ಸ್ವತಂತ್ರ ಭಾರತದ ನೆಲದಲ್ಲಿ ವಂದೇ ಮಾತರಂ ಅನ್ನು ಪೂರ್ಣವಾಗಿ ಹಾಡಲು ತೋರುತ್ತಿರುವ ಹಿಂಜರಿಕೆಯು ಖುದಿರಾಮ್ ಬೋಸ್ ಅವರಂತಹ ಹುತಾತ್ಮರ ತ್ಯಾಗಕ್ಕೆ ಮಾಡುತ್ತಿರುವ ಅವಮಾನವಾಗಿದೆ' ಎಂದು ಹೇಳಿದ್ದಾರೆ.
ತಿರುವನಂತಪುರ (ಪಿಟಿಐ): 'ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ ಅಧಿಕೃತ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಹಾಡಬಾರದು ಎಂದು ಯುಡಿಎಫ್ ಸರ್ಕಾರವು ಉದ್ದೇಶಪೂರ್ವಕವಾಗಿ ನಿರ್ಧಾರ ಕೈಗೊಂಡಿತ್ತು' ಎಂದು ಬಿಜೆಪಿ ಕೇರಳಂ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ. 'ಕಾಂಗ್ರೆಸ್ ನೇತೃತ್ವದ ಸರ್ಕಾರವಿರುವ ಕರ್ನಾಟಕ ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಲಾಗಿದೆ. ಆದರೆ ಕೇರಳಂನಲ್ಲಿ ಮಾತ್ರ ಗೀತೆಯನ್ನು ಹಾಡಿಲ್ಲ. ವಿ.ಡಿ. ಸತೀಶನ್ ನೇತೃತ್ವದ ಸರ್ಕಾರದ ಮೇಲೆ 'ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಜಮಾತ್-ಇ-ಇಸ್ಲಾಮಿ'ನ ನಿಯಂತ್ರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಅವರು ಆರೋಪಿಸಿದ್ದಾರೆ. 'ನಾವು ಇದನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ರಾಜಕೀಯ ಮತ್ತು ಕಾನೂನುಬದ್ಧ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.'ಉದ್ದೇಶಪೂರ್ವಕ ನಿರ್ಧಾರ'
ರಾಜೀವ್ ಚಂದ್ರಶೇಖರ್'ವಂದೇ ಮಾತರಂ ಹೇಳದವರಿಗೆ ತಮ್ಮ ತಾಯಿ ಯಾರೆಂದು ತಿಳಿದಿಲ್ಲ' ಎಂಬ ಕೇರಳ ವಿಶ್ವವಿದ್ಯಾಲಯದ ಕುಲಪತಿ ಮೋಹನನ್ ಕುನ್ನುಮ್ಮಾಲ್ ಅವರ ಹೇಳಿಕೆಗೆ ವಿರೋಧ ಪಕ್ಷ ಎಲ್ಡಿಎಫ್ ಆಕ್ಷೇಪ ವ್ಯಕ್ತಪಡಿಸಿದೆ. 'ಕುನ್ನುಮ್ಮಾಲ್ ಅವರು ಸಂಘ ಪರಿವಾರದ ಕೇಸರೀಕರಣದ ಕಾರ್ಯಸೂಚಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ಆರ್ಎಸ್ಎಸ್ನ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಸಂಘವನ್ನು ವೈಭವೀಕರಿಸುವ ಭಾಷಣಗಳನ್ನು ಮಾಡುತ್ತಾರೆ. ಅವರು ತಮ್ಮ ಹುದ್ದೆಗೆ ತಕ್ಕಂತೆ ವರ್ತಿಸುತ್ತಿಲ್ಲ' ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಆರೋಪಿಸಿದ್ದಾರೆ. ಕುಲಪತಿ ಹೇಳಿಕೆಗೆ ಆಕ್ಷೇಪ

